Maharashtra CM: 'ಮಹಾ' ರಾಜಕೀಯದಲ್ಲಿ ಟ್ವಿಸ್ಟ್! ಊರಿಗೆ ಹೊರಟ ಏಕನಾಥ್ ಶಿಂಧೆ; ಮಹಾಯುತಿ ಸಭೆ ರದ್ದು
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಮಹಾಯುತಿ ಮೈತ್ರಿಕೂಟಕ್ಕೆ ಸರ್ಕಾರ ರಚನೆ ತಲೆನೋವಾಗಿದೆ. ಸಿಎಂ ಆಯ್ಕೆ ವಿಚಾರ ಇದೀಗ ಕಗ್ಗಂಟಾಗಿದ್ದು ದಿನಕ್ಕೊಂದು ತಿರುವು ಪಡೆಯುತ್ತಿದೆ. ಗುರುವಾರ ನಡೆದ ಬೆಳವಣಿಗೆಯಲ್ಲಿ ಸಿಎಂ ಆಯ್ಕೆ ಬಹುತೇಕ ಖಚಿತವಾಗಿದ್ದು ಯಾರಿಗೂ ಅಸಮಾಧಾನ ಆಗದ ರೀತಿ ನೋಡಿಕೊಳ್ಳಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿದ್ದವು, ಆದರೆ ಶುಕ್ರವಾರ ರಾಜ್ಯ ರಾಜಕೀಯ ಮತ್ತೊಂದು ತಿರುವು ಪಡೆದಿದೆ.
ನಿಯೋಜಿತ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಅನಿರೀಕ್ಷಿತವಾಗಿ ಸತಾರಾ ಜಿಲ್ಲೆಯ ತಮ್ಮ ಗ್ರಾಮಕ್ಕೆ ತೆರಳಿದ್ದು, ಸಿಎಂ ಆಯ್ಕೆ ಕುರಿತಂತೆ ಕರೆಯಲಾಗಿದ್ದ ಮಹಾಯುತಿ ಮೈತ್ರಿಕೂಟದ ನಿರ್ಣಾಯಕ ಸಭೆಯನ್ನು ದಿಢೀರ್ ಎಂದು ರದ್ದು ಮಾಡಲಾಗಿದೆ. ಇದರಿಂದ ಸರ್ಕಾರ ಸಿಎಂ ಆಯ್ಕೆ ವಿಚಾರ ಸುಲಭಕ್ಕೆ ಪರಿಹಾರವಾಗಲ್ಲ ಎನ್ನುವ ಸಂದೇಶ ಸಿಕ್ಕಿದೆ.

ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ ಜೊತೆ ಶುಕ್ರವಾರ ಬೆಳಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಜೊತೆ ಸಭೆ ನಡೆಸಿದ ಬಳಿಕ ಮುಂಬೈಗೆ ಮರಳಿದ್ದಾರೆ. ಇತ್ತೀಚಿನ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು ಅಧಿಕಾರ ಹಂಚಿಕೆ ಒಪ್ಪಂದ ಇದೀಗ ಕಗ್ಗಂಟಾಗಿದೆ.
ವರಸೆ ಬದಲಿಸಿದ್ರಾ ಏಕನಾಥ್ ಶಿಂಧೆ
ಆರಂಭದಲ್ಲಿ ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಏಕನಾಥ್ ಶಿಂಧೆ ಬಳಿಕ ತಣ್ಣಗಾಗಿದ್ದರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಜುಗರ ಆಗುವಂತೆ ನಡೆದುಕೊಳ್ಳುವುದಿಲ್ಲ, ನಾವು ಯಾವುದೇ ಬೇಡಿಕೆ ಇಟ್ಟಿಲ್ಲ. ಬಿಜೆಪಿ ಕೇಂದ್ರ ನಾಯಕರು ನಿರ್ಧಾರ ಮಾಡುವುದುನ್ನು ಒಪ್ಪಿಕೊಳ್ಳುತ್ತೇವೆ ಎಂದಿದ್ದರು. ಶಿಂಧೆ ಹೇಳಿಕೆ ಬೆನ್ನಲ್ಲೇ ಇನ್ನೇನು ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಸುಸೂತ್ರವಾಗಲಿದೆ ಎನ್ನುವಾಗಲೇ ರಾಜ್ಯ ರಾಜಕೀಯ ಹೊಸ ತಿರುವು ಪಡೆದುಕೊಂಡಿದೆ.
ಏಕನಾಥ್ ಶಿಂಧೆ ಏಕಾಏಕಿ ತವರು ಗ್ರಾಮಕ್ಕೆ ತೆರಳಿದ್ದು ಸಭೆ ರದ್ದಾಗಿದೆ. ಶನಿವಾರ ಅವರು ಮುಂಬೈಗೆ ಮರಳುವ ಸಾಧ್ಯತೆ ಇದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಏಕನಾಥ್ ಶಿಂಧೆ ಅಸಮಾಧಾನಗೊಂಡಿದ್ದಾರೆ ಎನ್ನುವ ಊಹಾಪೋಹಗಳನ್ನು ಶಿವಸೇನೆ ನಾಯಕ ಉದಯ್ ಸಾಮಂತ್ ತಳ್ಳಿಹಾಕಿದ್ದಾರೆ.
ಅಮಿತ್ ಶಾ ಅವರ ಜೊತೆ ಸಭೆ ನಡೆಸಲಾಗಿದೆ. ಇದರಲ್ಲಿ ಅಜಿತ್ ಪವಾರ್ ಮತ್ತು ದೇವೇಂದ್ರ ಫಡ್ನವಿಸ್ ಕೂಡ ಭಾಗವಹಿಸಿದ್ದರು. ಏಕನಾಥ್ ಶಿಂಧೆ ತಮ್ಮ ಬೇಡಿಕೆಗಳನ್ನು ಗೌರವಯುತವಾಗಿ ಮುಂದಿಟ್ಟಿದ್ದಾರೆ. ಅಮಿತ್ ಶಾ ಅವರು ಪ್ರಧಾನಿ ಮೋದಿ ಜೊತೆ ಚರ್ಚೆ ನಡೆಸಿದ ಬಳಿಕ ನಿರ್ಧಾರ ಮಾಡುತ್ತಾರೆ ಎಂದು ಉದಯ್ ಸಮಂತ್ ಎಎನ್‌ಐಗೆ ತಿಳಿಸಿದ್ದಾರೆ.
288 ಸ್ಥಾನಗಳಲ್ಲಿ ಬಿಜೆಪಿ 133 ಸ್ಥಾನಗಳನ್ನು ಗೆದ್ದಿದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಶಿವಸೇನೆ 57 ಸ್ಥಾನ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ, 41 ಸ್ಥಾನ ಗೆದ್ದಿದ್ದು ಮಹಾಯುತಿ ಸ್ಪಷ್ಟಬಹುಮತ ಪಡೆದುಕೊಂಡಿದೆ. ಅತಿ ಹೆಚ್ಚು ಸ್ಥಾನ ಪಡೆದಿರುವ ಬಿಜೆಪಿ ಸಿಎಂ ಸ್ಥಾನಕ್ಕೆ ಪಟ್ಟುಹಿಡಿದಿದ್ದು ದೇವೇಂದ್ರ ಫಡ್ನವಿಸ್ ಸಿಎಂ ಆಗುತ್ತಾರೆ ಎಂದು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications