ಸನಾತನ ಧರ್ಮ ವಿವಾದ: ಡಿಎಂಕೆಯನ್ನು ಡೆಂಗ್ಯೂ, ಮಲೇರಿಯಾ, ಸೊಳ್ಳೆಗೆ ಹೋಲಿಸಿದ ಬಿಜೆಪಿ ನಾಯಕ ಅಣ್ಣಾಮಲೈ
ಚೆನ್ನೈ, ಸೆಪ್ಟೆಂಬರ್ 07: ಡಿಎಂಕೆ ಪಕ್ಷವು ಡೆಂಗ್ಯೂ, ಮಲೇರಿಯಾ ಮತ್ತು ಸೊಳ್ಳೆ ಇದ್ದಂತೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಟೀಕಿಸಿದ್ದಾರೆ. ಸಚಿವ ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮ ನಿರ್ಮೂಲನೆ ಹೇಳಿಕೆ ವಿರುದ್ಧ ಅವರು ಕಿಡಿಕಾರಿದ್ದಾರೆ.
ಕಳೆದ ವಾರ ಚೆನ್ನೈನಲ್ಲಿ ಮಾತನಾಡಿದ್ದ ಉದಯನಿಧಿ, ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಹಾಗೂ ಕೊರೊನಾ ವೈರಸ್ ಇದ್ದ ಹಾಗೆ. ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು.
ಈ ವಿಚಾರವಾಗಿ ವಿಡಿಯೊ ಮೂಲಕ ಪ್ರತಿಕ್ರಿಯಿಸಿರುವ ಅಣ್ಣಾಮಲೈ ಡಿಎಂಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

'ನಮಗೆ ಡಿಎಂಕೆ ನಾಟಕ ಗೊತ್ತು. ನಿಮ್ಮ ಅಧಿಕಾರದ ಮೊದಲ ವರ್ಷದಲ್ಲಿ ಸನಾತನ ಧರ್ಮವನ್ನು ವಿರೋಧಿಸುತ್ತೀರಿ. ಎರಡನೇ ವರ್ಷದಲ್ಲಿ ಸನಾತನ ಧರ್ಮವನ್ನು ತೊಡೆದುಹಾಕುತ್ತೀರಿ ಎಂದು ಹೇಳುತ್ತೀರಿ. ಮೂರನೇ ವರ್ಷದಲ್ಲಿ ನೀವು ಸನಾತನ ಧರ್ಮವನ್ನು ಬೇರುಸಹಿತ ಕಿತ್ತುಹಾಕಲು ಬಯಸುತ್ತೀರಿ. ಆದರೆ, ನಾಲ್ಕನೇ ವರ್ಷ ನಮ್ಮ ಪಕ್ಷದ ಸದಸ್ಯರಲ್ಲಿ ಶೇ 90 ಮಂದಿ ಹಿಂದೂಗಳಿದ್ದಾರೆ ಎಂಬುದಾಗಿ ಹೇಳುತ್ತೀರಿ' ಎಂದು ಅಣ್ಣಾಮಲೈ ಹೇಳಿದ್ದಾರೆ.
ಐದನೇ ವರ್ಷ ನೀವೂ ಹಿಂದೂ ಎಂದು ಹೇಳುತ್ತೀರಿ. ತಮಿಳುನಾಡು ಹಲವು ವರ್ಷಗಳಿಂದ ಈ ನಾಟಕವನ್ನು ನೋಡಿದೆ. ಚುನಾವಣೆ ಬಂದಾಗ ನೀವು ಅಮರ್, ಅಕ್ಬರ್, ಆಂಟನಿ ಆಗುತ್ತೀರಿ. ರಾಹುಲ್ ಗಾಂಧಿಯವರು ಕಳೆದ 17 ವರ್ಷಗಳಿಂದ ವಿಫಲರಾಗಿದ್ದಾರೆ. ಅವರು ಒಂದು ರಾಜ್ಯದಲ್ಲಿ ಅಮರ್ ಆಗುತ್ತಾರೆ. ಇನ್ನೊಂದು ರಾಜ್ಯದಲ್ಲಿ ಅಕ್ಬರ್ ಮತ್ತು ಇನ್ನೊಂದು ರಾಜ್ಯದಲ್ಲಿ ಆಂಟನಿ ಆಗುತ್ತಾರೆ ಎಂದು ತಿಳಿಸಿದ್ದಾರೆ.
2024ರಲ್ಲಿ ಡಿಎಂಕೆ ಸರ್ವನಾಶವಾಗಲಿದೆ. ನಾನು ಅದನ್ನು ಹೇಳುತ್ತಿಲ್ಲ. ಡಿಎಂಕೆಯ ಡಿ ಎಂದರೆ ಡೆಂಗ್ಯೂ, ಎಂ ಎಂದರೆ ಮಲೇರಿಯಾ ಮತ್ತು ಕೆ ಎಂದರೆ ಕೊಸು ( ಸೊಳ್ಳೆ ) ಎಂದು ನಿಮ್ಮ ಮಗ ( ಸ್ಟಾಲಿನ್ ಪುತ್ರ ಉದಯನಿಧಿ ) ಹೇಳಿದ್ದಾನೆ ಎಂದು ಅಣ್ಣಾಮಲೈ ಲೇವಡಿ ಮಾಡಿದ್ದಾರೆ.
'ನೀವಿಬ್ಬರೂ ( ಸ್ಟಾಲಿನ್ ಹಾಗೂ ಉದಯನಿಧಿ ) ಕೀಳು ಮಟ್ಟದ ಹೇಳಿಕೆ ನೀಡುವುದರಲ್ಲಿ ನಿರತವಾಗಿದ್ದೀರಿ. ಏಕೆಂದರೆ ನೀವು ಸೋತ ಯುದ್ಧದಲ್ಲಿ ಹೋರಾಡುತ್ತಿದ್ದೀರಿ ಎಂದು ನಿಮಗೆ ತಿಳಿದಿದೆ. ಆದರೆ ನೀವು ಪ್ರಧಾನಿ ಮೋದಿಯವರ ಬಗ್ಗೆ ಕೆಲವು ಸುಳ್ಳುಗಳನ್ನು ಮಾತನಾಡಿದ್ದೀರಿ. ಅದಕ್ಕೆ ಪ್ರತಿಕ್ರಿಯಿಸುವುದು ನನ್ನ ಕರ್ತವ್ಯ' ಎಂದು ಹೇಳಿದ್ದಾರೆ.
ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಕ್ಕೆ ಹೋಲಿಸಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಹೋರಾಟ ನಡೆಸುವುದಾಗಿ ತಮಿಳುನಾಡು ಬಿಜೆಪಿ ಹೇಳಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ದೂರನ್ನೂ ಸಹ ನೀಡಿದೆ.
ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿರುವ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ಪ್ರಧಾನಿಯಾದವರು ನಕಲಿ ಸುದ್ದಿಗಳನ್ನು ನಂಬಬಹುದೇ ಎಂದು ಪ್ರಶ್ನಿಸಿದ್ದಾರೆ. ತಮ್ಮ ಪುತ್ರ ಉದಯನಿಧಿ ಹೇಳಿಕೆಯನ್ನು ಬಿಜೆಪಿ ತಿರುಚಿದೆ ಎಂದು ಅವರು ಆರೋಪಿಸಿದ್ದಾರೆ.
ಕಳೆದ 9 ವರ್ಷಗಳಲ್ಲಿ ಯಾವುದೇ ಭರವಸೆಯನ್ನು ಈಡೇರಿಸಿದ ಮೋದಿ ಚುನಾವಣೆಗೋಸ್ಕರ ಸನಾತನ ಧರ್ಮವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications