ಭಾರತಕ್ಕೆ ಬರೋದಿಲ್ಲ ಅಮೆರಿಕ ಅಧ್ಯಕ್ಷ: ಕಾರಣ ಏನು ಗೊತ್ತಾ?
ಅಮೆರಿಕ & ಭಾರತದ ನಡುವೆ ಸಂಬಂಧ ವೃದ್ಧಿ ಆಗುತ್ತಿದೆ ಎನ್ನುವ ಸಮಯದಲ್ಲೇ ಪದೇ ಪದೆ ಕೆಲವು ಘಟನೆಗಳು ಹಿನ್ನಡೆ ಉಂಟು ಮಾಡುತ್ತಿವೆ. ಅದ್ರಲ್ಲೂ ಅಮೆರಿಕ ಅಧ್ಯಕ್ಷರಾದ ಜೋ ಬೈಡನ್ ಅವರು, ಗಣರಾಜ್ಯೋತ್ಸವಕ್ಕೆ ವಿಶೇಷ ಅತಿಥಿಯಾಗಿ ಭಾರತಕ್ಕೆ ಭೇಟಿಯನ್ನ ನೀಡಬೇಕಿತ್ತು. ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡ ಸಮಯದಲ್ಲೇ ಬೈಡನ್ ಭಾರತಕ್ಕೆ ಬರಲ್ಲ ಅನ್ನೋ ಸುದ್ದಿ ಹೊರಬಿದ್ದಿದೆ.
ಅಮೆರಿಕ & ಭಾರತದಲ್ಲಿ ಈ ಸಾರಿ ಒಂದೇ ಬಾರಿಗೆ ಚುನಾವಣೆ ಬರುತ್ತಿದೆ. ಈ ಹೊತ್ತಲ್ಲೇ, ಅಮೆರಿಕ ಅಧ್ಯಕ್ಷ ಬೈಡನ್ ಅವರನ್ನು 2024ರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿದೆ ಎಂಬ ಸುದ್ದಿ ಹಬ್ಬಿತ್ತು. 2024ರ ಗಣರಾಜ್ಯೋತ್ಸವ ಹಿನ್ನೆಲೆ ಜೋ ಬೈಡನ್ ಅವರನ್ನ ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿದೆ ಎಂದು, ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಸೆಪ್ಟೆಂಬರ್ ತಿಂಗಳಲ್ಲಿ ತಿಳಿಸಿದ್ದರು. ಆದರೆ ಹೀಗೆ ಅಮೆರಿಕ ಅಧ್ಯಕ್ಷ ಬೈಡನ್ ಅವರನ್ನು ಆಹ್ವಾನಿಸಿರುವ ಬಗ್ಗೆ ಭಾರತ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇಷ್ಟೆಲ್ಲದರ ನಡುವೆ ಬೈಡನ್ ಬರೋದು ಡೌಟ್ ಎನ್ನಲಾಗ್ತಿದೆ.

'ಕ್ವಾಡ್' ಸಮ್ಮೇಳನ ಕೂಡ ಅನುಮಾನ?
ಅಂದಹಾಗೆ ಭಾರತದಲ್ಲೇ 2024ರ 'ಕ್ವಾಡ್' ಸಮ್ಮೇಳನ ಆಯೋಜನೆ ಮಾಡುವ ಕುರಿತಾಗಿ ನಿರ್ಧಾರ ಕೈಗೊಳ್ಳಲಾಗಿತ್ತು. ಹೀಗಾಗಿ 2024ರ ಜನವರಿ 27ಕ್ಕೆ, 'ಕ್ವಾಡ್' ಸಮ್ಮೇಳನ ಫಿಕ್ಸ್ ಆಗಿತ್ತು ಎನ್ನಲಾಗಿದೆ. ಗಣರಾಜ್ಯೋತ್ಸವ ಕಾರ್ಯಕ್ರಮ ಮುಗಿಸಿ 'ಕ್ವಾಡ್' ಸಮ್ಮೇಳನದಲ್ಲಿ ಕೂಡ ಜೋ ಬೈಡನ್ ಭಾಗವಹಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಬೈಡನ್‌ರ ಆಗಮನದ ಬಗ್ಗೆ ಅನುಮಾನ ಮೂಡಿದ್ದು, ಕ್ವಾಡ್ ಸಮ್ಮೇಳನ ಕೂಡ ಮುಂದೂಡಲಾಗಿದೆ ಎನ್ನಲಾಗಿದೆ.

ಜಗತ್ತಿನ ಗಮನ ಇಲ್ಲೇ ನೆಟ್ಟಿತ್ತು!
ಅಮೆರಿಕದ ಅಧ್ಯಕ್ಷರು ಭಾರತಕ್ಕೆ ಬರುತ್ತಿದ್ದಾರೆ ಅನ್ನೋ ಸುದ್ದಿ ಜಗತ್ತಿನ ಗಮನ ಸೆಳೆದಿತ್ತು. ಯಾಕಂದ್ರೆ ಶಕ್ತಿಶಾಲಿ ದೇಶದ ಅಧ್ಯಕ್ಷರೊಬ್ಬರು ಮತ್ತೊಂದು ಶಕ್ತಿಶಾಲಿ ದೇಶಕ್ಕೆ ಬರ್ತಿದ್ದಾರೆ ಅನ್ನೋದು ಸಹಜವಾಗಿ ಕುತೂಹಲ ಕೆರಳಿಸಿತ್ತು. ಆದರೆ ಈಗಿನ ಪರಿಸ್ಥಿತಿ ಬೇರೆ ಆಗುತ್ತಿದ್ದು ಬೈಡನ್ ಬರೋದೆ ಇಲ್ಲ ಎನ್ನಲಾಗುತ್ತಿದೆ. ಆದ್ರೆ ಇನ್ನೂ ಈ ಕುರಿತಾಗಿ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ ಕುತೂಹಲ ದುಪ್ಪಟ್ಟಾಗಿದೆ.
ಒಟ್ನಲ್ಲಿ ಅಮೆರಿಕ ಅಧ್ಯಕ್ಷ ಬೈಡನ್ ಭಾರತ ಭೇಟಿ ಬಗ್ಗೆ ಅನುಮಾನ ಮೂಡಿರುವ ವೇಳೆ, ಹಲವು ಚರ್ಚೆಗಳು ಕೂಡ ಶುರುವಾಗಿವೆ. ಹೀಗಾಗಿ ಈ ಪ್ರಶ್ನೆಗಳಿಗೆ ಶೀಘ್ರದಲ್ಲೇ ಸೂಕ್ತವಾದ ಉತ್ತರ ಸಿಗುವ ನಿರೀಕ್ಷೆ ಇದೆ. ಮತ್ತೊಂದು ಕಡೆ ಭಾರತದ ಶತ್ರು ದೇಶಗಳು ಈ ವಿಚಾರದ ಕಡೆಗೆ ಹೆಚ್ಚು ಗಮನ ಹರಿಸಿವೆ. ಆದ್ರೆ ಭಾರತ ಮಾತ್ರ ಬೈಡನ್ ಅವರು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬರ್ತಾರಾ? ಇಲ್ವಾ? ಅನ್ನೋದನ್ನ ಅಧಿಕೃತವಾಗಿ ತಿಳಿಸಿಲ್ಲ.












Click it and Unblock the Notifications