Hunger Index 2023: ಭಾರತ ಹಸಿದವರ ದೇಶವಾಯ್ತಾ? ಪಾಕಿಸ್ತಾನಕ್ಕಿಂತ ಹಿಂದೆ ಬಿದ್ದ ಭಾರತ?
ಭಾರತ ಜಾಗತಿಕವಾಗಿ ಬೆಳೆಯುತ್ತಿದೆ, ಸೂರ್ಯನಿಗೆ ಉಪಗ್ರಹ ಕಳಿಸಿ ಸೈ ಎನಿಸಿಕೊಂಡಿದೆ. ಹೀಗೆ ಇಡೀ ಜಗತ್ತಿನ ಶಕ್ತಿಶಾಲಿ ದೇಶಗಳಿಗೂ ಭಾರತ ಪೈಪೋಟಿ ನೀಡುತ್ತಿದೆ. ಹೀಗಿದ್ದಾಗಲೇ ಭಾರತದಲ್ಲಿ ವಾಸ ಮಾಡುವ ಪ್ರಜೆಗಳಿಗೆ ಸರಿಯಾಗಿ ಊಟ ಸಿಗುತ್ತಿಲ್ವಾ? ಹೌದು ಇಂತಹ ಪ್ರಶ್ನೆ ಮೂಡಲು ಕಾರಣವಾಗಿರುವುದು ಅದೊಂದು ವರದಿ. ಹಾಗಾದರೆ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ ಎಷ್ಟನೇ ಸ್ಥಾನ ಪಡೆದಿದೆ?
ಅಂದಹಾಗೆ ಪ್ರಪಂಚದ 125 ದೇಶಗಳಿಗೆ ಸಂಬಂಧಿಸಿದ 2023ನೇ ಸಾಲಿನ ಜಾಗತಿಕ ಹಸಿವು ಸೂಚ್ಯಂಕ ವರದಿ ಇಂದು ರಿಲೀಸ್ ಆಗಿದೆ. ಆದರೆ ಭಾರತ ಈಗ 111ನೇ ಸ್ಥಾನಕ್ಕೆ ಕುಸಿದಿದೆ. ಜಾಗತಿಕ ಹಸಿವು ಸೂಚ್ಯಂಕ-2023ರಲ್ಲಿ ಭಾರತದ ಅಂಕ ಶೇ 28.7ರಷ್ಟು ಇದ್ದು, ಹಸಿವಿನ ಮಟ್ಟ ಗಂಭೀರವಾಗಿರುವುದನ್ನು ತೋರಿಸುತ್ತದೆ ಎಂದು ಸೂಚ್ಯಂಕವನ್ನು ಆಧರಿಸಿ ಬಿಡುಗಡೆ ಮಾಡಿರುವ ವರದಿಯಲ್ಲಿ ಮಾಹಿತಿ ನೀಡಲಾಗಿದೆ. ಈ ಮೂಲಕ ಭಾರತೀಯರಿಗೆ ಸೂಕ್ತವಾಗಿ ಆಹಾರ ಸಿಗುತ್ತಿಲ್ಲ, ಬಹುತೇಕರಿಗೆ ಆಹಾರದ ಕೊರತೆಯು ಉಂಟಾಗಿದೆ ಎಂದು ಈ ವರದಿ ತಿಳಿಸಿದೆ.

ಪಾಕಿಸ್ತಾನಕ್ಕಿಂತ ಹಿಂದೆ ಬಿದ್ದ ಭಾರತ?
ಇನ್ನು 2022ರಲ್ಲಿ 121 ರಾಷ್ಟ್ರಗಳ ಪೈಕಿ ಭಾರತ 107ನೇ ಸ್ಥಾನದಲ್ಲಿ ಇತ್ತು. ಆದ್ರೆ ಈ ವರ್ಷ ಮತ್ತೆ ಕುಸಿತ ದಾಖಲಿಸುವ ಮೂಲಕ 111ನೇ ಸ್ಥಾನಕ್ಕೆ ಕುಸಿದಿದೆ. ಅಷ್ಟಕ್ಕೂ ಈ 'ಜಾಗತಿಕ ಹಸಿವು ಸೂಚ್ಯಂಕ'(ಜಿಎಚ್‌ಐ) ಪ್ರಾದೇಶಿಕ, ರಾಷ್ಟ್ರೀಯ & ಜಾಗತಿಕ ಮಟ್ಟದಲ್ಲಿನ ಹಸಿವಿನ ಪ್ರಮಾಣ ಅಳೆಯುವ ಒಂದು ಸಾಧನ. ಆದ್ರೆ ಇಲ್ಲೊಂದು ಆಘಾತ ಎದುರಾಗಿದ್ದು, ಭಾರತ ಇದೀಗ ಹಸಿವು ಸೂಚ್ಯಂಕದಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶಕ್ಕಿಂತ ಹಿಂದೆ ಉಳಿದಿದೆ ಎಂದು ವರದಿ ಹೇಳುತ್ತಿದೆ. ಹಾಗಾದರೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಎಷ್ಟನೇ ಸ್ಥಾನ ಪಡೆದಿವೆ?
ನೇಪಾಳ 69ನೇ ಸ್ಥಾನ ಪಡೆದಿದೆ!
ಜಗತ್ತಿನ 125 ದೇಶಗಳಿಗೆ ಸಂಬಂಧಿಸಿದ 2023ನೇ ಸಾಲಿನ ಜಾಗತಿಕ ಹಸಿವು ಸೂಚ್ಯಂಕ ವರದಿ ಪ್ರಕಾರ, ಭಾರತ ಈಗ 111ನೇ ಸ್ಥಾನಕ್ಕೆ ಕುಸಿದಿದೆ. ಆದರೆ ಭಾರತದ ನೆರೆಯ ರಾಷ್ಟ್ರಗಳಲ್ಲಿನ ಪರಿಸ್ಥಿತಿ ಉತ್ತಮವಾಗಿದೆ ಎನ್ನಲಾಗಿದೆ. ಪಾಕಿಸ್ತಾನ 102ನೇ ಸ್ಥಾನ ಪಡೆದಿದ್ದರೆ, ಇದೇ ವೇಳೆ ಬಾಂಗ್ಲಾದೇಶ 81ನೇ ಸ್ಥಾನ ಹಾಗೂ ನೇಪಾಳ 69ನೇ ಸ್ಥಾನ & ಶ್ರೀಲಂಕಾ 60ನೇ ಸ್ಥಾನವನ್ನು ಪಡೆದುಕೊಂಡಿದೆ. ಮತ್ತೊಂದು ಆಘಾತಕಾರಿ ವಿಷಯ ಏನೆಂದರೆ, ದಕ್ಷಿಣ ಏಷ್ಯಾ ಹಾಗೂ ದಕ್ಷಿಣ ಆಫ್ರಿಕಾಕ್ಕೆ ಸಂಬಂಧಿಸಿದ ಸೂಚ್ಯಂಕ ಶೇ. 27ರಷ್ಟು ಇದೆ. ಹಾಗೇ ಈ ಪ್ರದೇಶಗಳಲ್ಲಿ ಹಸಿವಿನ ಸಮಸ್ಯೆ ಗರಿಷ್ಠವಾಗಿದ್ದು, ಅಲ್ಲದೆ ಗಂಭೀರವಾದ ಸ್ವರೂಪ ಪಡೆಯುತ್ತಿದೆ ಎಂದು ವರದಿಯಲ್ಲಿ ಮಾಹಿತಿ ನೀಡಲಾಗಿದೆ.
ಹಸಿವಿನ ಜೊತೆ ಅಪೌಷ್ಟಿಕತೆ ಕಾಟ!
ಹಾಗೇ ಮಕ್ಕಳು ತಮ್ಮ ಎತ್ತರಕ್ಕೆ ತಕ್ಕಷ್ಟು ತೂಕ ಹೊಂದಿಲ್ಲದಿದ್ದರೂ, ಅದು ಅಪೌಷ್ಟಿಕತೆಯ ವ್ಯಾಪ್ತಿಗೆ ಬರುತ್ತದೆ. ಹೀಗೆ ಅಪೌಷ್ಟಿಕತೆಯ ಪ್ರಮಾಣವು ಭಾರತದಲ್ಲಿ ಶೇ 18.7ರಷ್ಟಿದೆ. ಇದು ಜಗತ್ತಿನಲ್ಲಿ ಗರಿಷ್ಠ ಮಟ್ಟದ್ದಾಗಿದೆ ಎಂದು ಸೂಚ್ಯಂಕದ ಕುರಿತಾದ ವರದಿಯಲ್ಲಿ ಮಾಹಿತಿಯನ್ನ ನೀಡಲಾಗಿದೆ. ಹೀಗಾಗಿ ಈ ಸಮಸ್ಯೆ ಮುಂದೆ ಗಂಭೀರ ಸ್ವರೂಪ ಪಡೆಯುವ ಆತಂಕವೂ ಆವರಿಸಿದೆ. ಈ ಕಾರಣ ಅಪೌಷ್ಟಿಕತೆ ಮತ್ತು ಹಸಿವು ಮುಕ್ತ ಮಾಡಲು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.
ಒಟ್ನಲ್ಲಿ ಭಾರತ ಎಲ್ಲಾ ಕ್ಷೇತ್ರದಲ್ಲೂ ಶ್ರೀಮಂತ ದೇಶಗಳನ್ನು ಮೀರಿಸಿ ಬೆಳೆಯುತ್ತಿದೆ. ಈ ಸಮಯದಲ್ಲೇ ಭಾರತದಲ್ಲಿ ಹಸಿವು ಕೂಡ ತಾಂಡವ ಆಡುತ್ತಿದೆ ಎಂಬ ವರದಿ ಭಯವನ್ನೇ ಸೃಷ್ಟಿಮಾಡಿದೆ. ಅದರಲ್ಲೂ ಅಪೌಷ್ಟಿಕತೆ ಕುರಿತು ಆತಂಕ ಹೆಚ್ಚಾಗಿದೆ. ಏಕೆಂದರೆ ಭವಿಷ್ಯ ಬೆಳಗಬೇಕಾದ ಮಕ್ಕಳಲ್ಲಿ ಅಪೌಷ್ಟಿಕತೆ ಎದುರಾದರೆ ದೇಶದ ಭವಿಷ್ಯಕ್ಕೂ ಆತಂಕ ಇರುತ್ತೆ. ಹೀಗಾಗಿ ಸೂಕ್ತ ಕ್ರಮ ಕೈಗೊಂಡು, ಅಪೌಷ್ಟಿಕತೆ ಹಾಗೂ ಹಸಿವು ನಿವಾರಣೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈ ವಿಚಾರದಲ್ಲಿ ರಾಜಕೀಯಕ್ಕಿಂತ ಹೆಚ್ಚಾಗಿ ಮಾನವೀಯ ಮೌಲ್ಯಗಳೇ ಮುಂದಾಗಬೇಕು.












Click it and Unblock the Notifications