ದೆಹಲಿ ಅಬಕಾರಿ ನೀತಿ; ಕೆಸಿಆರ್ ಪುತ್ರಿಗೆ ವಿಚಾರಣೆಗೆ ಬರುವಂತೆ ಸಮನ್ಸ್
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಪುತ್ರಿಗೆ ಇಡಿ ಸಮನ್ಸ್ ನೀಡಿದೆ.
ನವದೆಹಲಿ, ಮಾರ್ಚ್ 08; ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಕೆ. ಕವಿತಾಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ, ಮಾರ್ಚ್ 9ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಸೂಚನೆ ನೀಡಿದೆ. ಕೆ. ಕವಿತಾ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಪುತ್ರಿ. ಇದೇ ಪ್ರಕರಣದ ಕುರಿತು ಸಿಬಿಐ ತನಿಖೆಯೂ ನಡೆಯುತ್ತಿದೆ.
ಜಾರಿ ನಿರ್ದೇಶನಾಲಯ (ಇಡಿ) ಡಿಸೆಂಬರ್ 12ರಂದು ಹೈದರಾಬಾದ್‌ನಲ್ಲಿ ಕೆ. ಕವಿತಾರನ್ನು 7 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಈಗ ಪುನಃ ಮಾರ್ಚ್ 9ರ ಗುರುವಾರ ದೆಹಲಿಗೆ ವಿಚಾರಣೆಗೆ ಬರುವಂಗೆ ಸಮನ್ಸ್ ನೀಡಿದೆ. ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ಸಿಬಿಐ ಬಂಧಿಸಿದೆ.

ದೆಹಲಿ ಅಬಕಾರಿ ನೀತಿ ಹಗರಣದ ತನಿಖೆ ನಡೆಸುತ್ತಿರುವ ಇಡಿ ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರ ಪಿಳ್ಳೈ ಬಂಧಿಸಿತ್ತು. ಸೋಮವಾರ ನವದೆಹಲಿಯಲ್ಲಿ ಅವರನ್ನು ವಿಚಾರಣೆ ನಡೆಸಲಾಗಿತ್ತು, ಬಳಿಕ ಅವರನ್ನು ಬಂಧಿಸಿತ್ತು. ಹೈದರಾಬಾದ್‌ನ ಅವರ ನಿವಾಸದ ಮೇಲೆ ಈ ಹಿಂದೆ ದಾಳಿ ಮಾಡಿ, ಆಸ್ತಿ ಜಪ್ತಿ ಮಾಡಲಾಗಿತ್ತು. ಪಿಳ್ಳೈ ದಕ್ಷಿಣ ಭಾರತದ ಮದ್ಯ ತಯಾರಕ ಗುಂಪಿನ ಪ್ರಮುಖರು.
ಅರುಣ್ ರಾಮಚಂದ್ರ ಪಿಳ್ಳೈ ಬಂಧನದ ಬಳಿಕ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ. ಕವಿತಾಗೆ ಸಮನ್ಸ್ ಜಾರಿಗೊಳಿಸಿದೆ. ದೆಹಲಿ ಅಬಕಾರಿ ನೀತಿ ತಯಾರು ಮಾಡುವಾಗ ಕಿಕ್ ಬ್ಯಾಕ್ ಪಡೆದು ದಕ್ಷಿಣ ಭಾರತದ ಮದ್ಯ ತಯಾರಕರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂಬುದು ಆರೋಪವಾಗಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆ ನಡೆಸುತ್ತಿದೆ. ಇದೇ ಪ್ರಕರಣದಲ್ಲಿ ಸಿಬಿಐ ತನಿಖೆಯೂ ನಡೆಯುತ್ತಿದೆ.

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂಬ ಆರೋಪದ ಕುರಿತು ಇಡಿ ತನಿಖೆ ನಡೆಯುತ್ತಿದೆ. ವೈಎಸ್‌ಆರ್ ಕಾಂಗ್ರೆಸ್ ಸಂಸದ ಮಾಗುಂಟ ಶ್ರೀನಿವಾಸಲು ರೆಡ್ಡಿ ಪುತ್ರ ರಾಘವ ಮಾಗುಂಟರನ್ನು ಸಹ ಇಡಿ ಬಂಧಿಸಿ, ವಿಚಾರಣೆ ನಡೆಸಿತ್ತು. ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡು ಇಡಿ ವಿಚಾರಣೆ ಕೈಗೊಂಡಿದೆ. ಇಡೀ ಅಬಕಾರಿ ನೀತಿ ಪ್ರಕರಣದ ಬಗ್ಗೆ ಸಿಬಿಐ ತನಿಖೆ ಕೈಗೊಂಡಿದೆ. ಹೊಸ ಅಬಕಾರಿ ನೀತಿಯನ್ನು ದೆಹಲಿ ಲೆಫ್ಟಿನೆಂಟ್ ಗೌರ್ನರ್ ಈಗಾಗಲೇ ರದ್ದುಗೊಳಿಸಿದ್ದಾರೆ.
ಮಂಗಳವಾರ ವಿಚಾರಣೆ; ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧನಕ್ಕೊಳಗಾಗಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಮಂಗಳವಾರ ಇಡಿ ಅಧಿಕಾರಿಗಳು ಜೈಲಿನಲ್ಲಿಯೇ ಅವರ ವಿಚಾರಣೆ ನಡೆಸಿದ್ದರು. ಹಣ ಅಕ್ರಮ ವರ್ಗಾವಣೆ ಸಂಬಂಧ ಅವರ ಹೇಳಿಕೆಯನ್ನು ಇಡಿ ದಾಖಲು ಮಾಡಿಕೊಂಡಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಸೇರಿದಂತೆ 36 ಆರೋಪಿಗಳು ಸಾವಿರಾರು ಕೋಟಿ ರೂ. ಕಿಕ್ ಬ್ಯಾಕ್‌ಗಳನ್ನು ಪಡೆದಿದ್ದಾರೆ ಎಂಬುದು ಆರೋಪವಾಗಿದೆ.
2023ರ ಜನವರಿಯಲ್ಲಿ ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ದೆಹಲಿ ಅಬಕಾರಿ ನೀತಿ ಪ್ರಕರಣದ ಕುರಿತು 2ನೇ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಇದರಲ್ಲಿ ದೆಹಲಿ ಮುಖ್ಯಮಂತ್ರಿ, ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಹೆಸರು ಸಹ ಉಲ್ಲೇಖ ಮಾಡಲಾಗಿದೆ. ಮತ್ತೊಂದು ಕಡೆ ಸಿಬಿಐ ಸಹ ಪ್ರಕರಣದ ತನಿಖೆ ಚುರುಕುಗೊಳಿಸಿದ್ದು, ಮನೀಶ್ ಸಿಸೋಡಿಯಾ ಆಪ್ತ ಸಹಾಯಕ ದೇವೇಂದ್ರ ಶರ್ಮಾ ವಿಚಾರಣೆಯನ್ನು ಸಹ ಮಂಗಳವಾರ ನಡೆಸಲಾಗಿದೆ.
ದೆಹಲಿ ಅಬಕಾರಿ ನೀತಿ ಹಗರಣದ ರಾಜಕೀಯ ಆರೋಪ ಪ್ರತ್ಯಾರೋಪಗಳಿಗೂ ಕಾರಣವಾಗಿದೆ. ಆಮ್ ಆದ್ಮಿ ಪಕ್ಷದ ನಾಯಕರಿಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಪಕ್ಷ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿದೆ. ಮತ್ತೊಂದು ಕಡೆ ಕೆ. ಚಂದ್ರಶೇಖರರಾವ್ ಮತ್ತು ಅವರ ಪಕ್ಷದ ಕಾರ್ಯಕರ್ತರು ಸಹ ಬಿಜೆಪಿ ವಿರುದ್ಧ ವಾಗ್ದಾಳಿಯನ್ನು ನಡೆಸುತ್ತಿದ್ದಾರೆ.












Click it and Unblock the Notifications