ಹೆಂಡತಿ ಜೊತೆ ಜಗಳ; 2 ವರ್ಷದ ಮಗನನ್ನು ಬಾಲ್ಕನಿಯಿಂದ ಎಸೆದ ತಂದೆ!
ನವದೆಹಲಿ, ಡಿಸೆಂಬರ್ 17: ಗಂಡ-ಹೆಂಡತಿ ಜಗಳು ಉಂಡು ಮಲಗುವ ತನಕ ಎನ್ನುವ ಗಾದೆ ಮಾತನ್ನು ಸಾಮಾನ್ಯವಾಗಿ ಕೇಳಿರುತ್ತೀರಿ. ಆದರೆ ರಾಷ್ಟ್ರ ರಾಜಧಾನಿಯಲ್ಲಿ ತಂದೆಯೊಬ್ಬ ತನ್ನ ಮಗುವನ್ನೇ ಬಾಲ್ಕನಿಯಿಂದ ಎಸೆದಿರುವ ಘಟನೆ ನಡೆದಿದೆ. ಈ ಘಟನೆಗೆ ಗಂಡ-ಹೆಂಡತಿ ನಡುವೆ ನಡೆದ ಜಗಳವೇ ಕಾರಣ ಎಂದು ಪ್ರಾಥಮಿಕ ವರದಿಯಲ್ಲಿ ಗೊತ್ತಾಗಿದೆ.
ದೆಹಲಿಯಲ್ಲಿ ಪತ್ನಿಯೊಂದಿಗೆ ತೀವ್ರ ವಾಗ್ವಾದಕ್ಕಿಳಿದ ವ್ಯಕ್ತಿಯೊಬ್ಬ ತನ್ನ ಎರಡು ವರ್ಷದ ಮಗನನ್ನು ಮೂರು ಅಂತಸ್ತಿನ ಮನೆಯ ಬಾಲ್ಕನಿಯಿಂದ ಎಸೆದು ನಂತರ ಪತಿಯೂ ಜಿಗಿದಿದ್ದಾನೆ.
ಈ ಘಟನೆಯಲ್ಲಿ ತಂದೆ ಮತ್ತು ಮಗನಿಗೆ ಗಂಭೀರ ಗಾಯಗಳಾಗಿದ್ದು, ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ಎಐಐಎಂಎಸ್) ಆಸ್ಪತ್ರೆಗೆೆ ದಾಖಲು ಮಾಡಲಾಗಿದೆ. ಶುಕ್ರವಾರ ರಾತ್ರಿ ನವದೆಹಲಿಯ ಕಲ್ಕಾಜಿಯ ಕೊಳೆಗೇರಿಯಿಂದ ಈ ಘಟನೆ ವರದಿಯಾಗಿದೆ.

ಪೊಲೀಸ್ ಅಧಿಕಾರಿಗಳು ಹೇಳುವುದೇನು?:
ಕಳೆದ ಕೆಲವು ತಿಂಗಳುಗಳಿಂದ ಪತಿ ಮಾನ್ ಸಿಂಗ್ ಮತ್ತು ಅವರ ಪತ್ನಿ ಪೂಜಾ ನಡುವೆ ಜಗಳ ನಡೆಯುತ್ತಲೇ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪತ್ನಿ ಪೂಜಾ ತನ್ನ ಮನೆಯಿಂದ ಹೊರಟು ತನ್ನ ಇಬ್ಬರು ಮಕ್ಕಳೊಂದಿಗೆ ಕಲ್ಕಾಜಿಯಲ್ಲಿರುವ ಅಜ್ಜಿಯ ಮನೆಗೆ ತೆರಳಿದ್ದರು. ಶುಕ್ರವಾರ ರಾತ್ರಿ ಅವರನ್ನು ಭೇಟಿಯಾಗಲು ಮಾನ್ ಸಿಂಗ್ ಬಂದಿದ್ದರು. ಈ ವೇಳೆ ಕೋಪದ ಭರದಲ್ಲಿ ಅವನು ತನ್ನ ಮಗನನ್ನು ಬಾಲ್ಕನಿಯಿಂದ ಎಸೆದು ನಂತರ ತಾನೂ ಅಲ್ಲಿಂದ ಹಾರಿದ್ದಾನೆ.
ವ್ಯಕ್ತಿಯ ವಿರುದ್ಧ ಕೊಲೆ ಯತ್ನ ಕೇಸ್:
ತನ್ನ ಮಗನನ್ನೇ ಬಾಲ್ಕನಿಯಿಂದ ಎಸೆದು ನಂತರ ಆತ್ಮಹತ್ಯೆಗೆ ಯತ್ನಿಸಿದ ಮಾನ್ ಸಿಂಗ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ನವದೆಹಲಿ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications