ಚುನಾವಣೆ ದಿನವೇ ತೆಲಂಗಾಣ-ಆಂದ್ರಪ್ರದೇಶ ಪೊಲೀಸರ ನಡುವೆ ಭೀಕರ ಹೊಡೆದಾಟ: ಎರಡು ರಾಜ್ಯಗಳ ನಡುವೆ ಹೆಚ್ಚಿದ ಉದ್ವಿಗ್ನತೆ
ಹೈದರಾಬಾದ್, ನವೆಂಬರ್ 30: ತೆಲಂಗಾಣ ವಿಧಾನಸಭೆ ಚುನಾವಣೆಯು ಇಂದು ನಡೆಯುತ್ತಿದೆ. ಕಾಂಗ್ರೆಸ್ ಹಾಗೂ ಬಿಎಸ್‌ಆರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದರ ನಡುವೆಯೇ ತೆಲಂಗಾಣ ಹಾಗೂ ಆಂದ್ರಪ್ರದೇಶ ಪೊಲೀಸರು ನಡುವೆ ಸಂಘರ್ಷ ಏರ್ಪಟ್ಟಿದೆ. ಇದು ಎರಡು ರಾಜ್ಯಗಳ ನಡುವೆ ಉದ್ವಿಗ್ನತೆಯನ್ನು ಹೆಚ್ಚಿಸಿದೆ.
ನವೆಂಬರ್ 30 ರ ಗುರುವಾರ ಮಧ್ಯರಾತ್ರಿ ನಾಗಾರ್ಜುನ ಸಾಗರ ಅಣೆಕಟ್ಟು ಬಳಿ ಆಂಧ್ರಪ್ರದೇಶದ ಪೊಲೀಸರು ಬೇಲಿ ಹಾಕಲು ಯತ್ನಿಸಿದ್ದಾರೆ. ಇದನ್ನು ತಡೆಯಲು ತೆಲಂಗಾಣ ಪೊಲೀಸರು ಮುಂದಾಗಿದ್ದಾರೆ. ಈ ಸಮಯದಲ್ಲಿ ಎರಡೂ ರಾಜ್ಯಗಳ ಪೊಲೀಸರ ನಡುವೆ ಬಡಿದಾಟವಾಗಿದೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಸುಮಾರು 700 ಆಂದ್ರ ಪ್ರದೇಶ ಪೊಲೀಸರು ಅಣೆಕಟ್ಟಿಗೆ ತಲುಪಿದ್ದಾರೆ. ನಂತರ ಅವರನ್ನು ಆ ಪ್ರದೇಶದ ಕಾವಲು ಕಾಯುತ್ತಿದ್ದ ತೆಲಂಗಾಣ ಪೊಲೀಸರು ತಡೆದಿದ್ದಾರೆ. ಇದು ಉಭಯ ರಾಜ್ಯಗಳ ಪೊಲೀಸ್ ಸಿಬ್ಬಂದಿ ನಡುವೆ ಘರ್ಷಣೆಗೆ ಕಾರಣವಾಗುತ್ತಿದ್ದಂತೆ ಪ್ರದೇಶದಲ್ಲಿ ಗೊಂದಲದ ವಾತಾವರಣ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಅಣೆಕಟ್ಟಿನಲ್ಲಿ 26 ಗೇಟ್‌ಗಳಿವೆ. ಆಂದ್ರ ಪ್ರದೇಶ ಪೊಲೀಸರು ಗೇಟ್ ಸಂಖ್ಯೆ 13 ರಲ್ಲಿ ಫೆನ್ಸಿಂಗ್ ಅನ್ನು ಸ್ಥಾಪಿಸಿದಾಗ, ಅದು ತಮ್ಮ ರಾಜ್ಯಕ್ಕೆ ಸೇರಿದೆ ಎಂದು ಹೇಳಿಕೊಂಡಿದ್ದಾರೆ.
ಘರ್ಷಣೆಯಲ್ಲಿ ಕೆಲವು ಪೊಲೀಸರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಭದ್ರತಾ ವ್ಯವಸ್ಥೆಯ ಭಾಗವಾಗಿ ಗೇಟ್‌ನಲ್ಲಿ ಸ್ಥಾಪಿಸಲಾದ ಸಿಸಿಟಿವಿ ಕ್ಯಾಮೆರಾಗಳಿಗೂ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಫೆಬ್ರವರಿ 13, 2015 ರಂದು ಇದೇ ರೀತಿಯ ಘಟನೆ ಸಂಭವಿಸಿತ್ತು. ಆ ಸಂದರ್ಭದಲ್ಲಿ ಆಂದ್ರ ಪ್ರದೇಶ ಪೊಲೀಸರು ಅಣೆಕಟ್ಟಿಗೆ ನುಗ್ಗಿ ಎರಡೂ ರಾಜ್ಯಗಳ ಪೊಲೀಸರ ನಡುವೆ ಘರ್ಷಣೆಗೆ ಕಾರಣವಾಗಿತ್ತು.
ತೆಲಂಗಾಣ ಮತ್ತು ಆಂಧ್ರಪ್ರದೇಶ ವಿಭಜನೆಯಾದಾಗಿನಿಂದಲೂ ನೀರು ಹಂಚಿಕೆ ವಿವಾದ ಉಲ್ಬಣಗೊಂಡಿದೆ. ಏತನ್ಮಧ್ಯೆ, ಕೃಷ್ಣಾ ನದಿ ನಿರ್ವಹಣಾ ಮಂಡಳಿ (ಕೆಆರ್‌ಎಂಬಿ) ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಪರಿಹರಿಸಬೇಕೆಂದು ಆಂದ್ರ ಪ್ರದೇಶದ ಅಧಿಕಾರಿಗಳು ಮನವಿ ಮಾಡಿದ್ದಾರೆ.
ನಾಗಾರ್ಜುನ ಸಾಗರ್ ಅಣೆಕಟ್ಟಿನ ಘರ್ಷಣೆಯ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಕೋಮಟಿರೆಡ್ಡಿ ವೆಂಕಟ ರೆಡ್ಡಿ, ಇದು ತೆಲಂಗಾಣ ಸಿಎಂ ಕೆಸಿಆರ್ ಅವರ ಪಿತೂರಿಯೇ ಹೊರತು ಬೇರೇನೂ ಅಲ್ಲ ಎಂದು ಆರೋಪಿಸಿದ್ದಾರೆ. ತೆಲಂಗಾಣದ ಜನರು ಎಚ್ಚರದಿಂದ ಇರುವಂತೆ ಅವರು ಹೇಳಿದ್ದಾರೆ.
ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ ಮತ್ತು ಮಿಜೋರಾಂ ವಿಧಾನಸಭಾ ಚುನಾವಣೆಗಳು ಇಂದು ಪೂರ್ಣಗೊಳ್ಳಲಿವೆ. ಇವುಗಳ ಫಲಿತಾಂಶ ಡಿಸೆಂಬರ್ 3 ರಂದು ಹೊರಬೀಳಲಿದೆ. ತೆಲಂಗಾಣದಲ್ಲಿ ಮತದಾನ ಪ್ರಕ್ರಿಯೆಯು ಇಂದು ಪೂರ್ಣಗೊಳ್ಳುತ್ತಿದ್ದಂತೆ ಚುನಾವಣೋತ್ತರ ಫಲಿತಾಂಶಗಳು ಪ್ರಕಟಗೊಳ್ಳಲಿವೆ. ತೆಲಂಗಾಣ ಹೊರತುಪಡಿಸಿ, ಇತರ ರಾಜ್ಯಗಳಲ್ಲಿ ನವೆಂಬರ್ 7 ಮತ್ತು ನವೆಂಬರ್ 30 ರ ನಡುವೆ ಮತದಾನ ನಡೆದಿದೆ.












Click it and Unblock the Notifications