Sameer Wankhede: ಆರ್ಯನ್ ಖಾನ್ ಪ್ರಕರಣ: ಸಮೀರ್ ವಾಂಖೆಡೆ ನಿವಾಸದ ಮೇಲೆ 13 ಗಂಟೆ ಸಿಬಿಐ ದಾಳಿ
ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ರನ್ನು ಸುಮಾರು ಎರಡು ವರ್ಷಗಳ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಬಂಧನ ಮಾಡಿದ್ದ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ನಿವಾಸದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಳಿಯನ್ನು ನಡೆಸಿದೆ. ಶುಕ್ರವಾರವಷ್ಟೆ ಅಧಿಕಾರಿಯ ವಿರುದ್ಧ ಸಿಬಿಐ ಭ್ರಷ್ಟಾಚಾರದ ಪ್ರಕರಣವನ್ನು ದಾಖಲು ಮಾಡಿತ್ತು.
ಆರ್ಯನ್ ಖಾನ್ ಪ್ರಕರಣದಲ್ಲಿ ಪ್ರಮುಖ ಅಧಿಕಾರಿಯಾಗಿದ್ದ ಸಮೀರ್ ವಾಂಖೆಡೆ ಸೇರಿದಂತೆ ಒಟ್ಟಾಗಿ ಮೂವರು ಸರ್ಕಾರಿ ಅಧಿಕಾರಿಗಳ ಮೇಲೆ ಸಿಬಿಐ ಪ್ರಕರಣವನ್ನು ದಾಖಲು ಮಾಡಿದೆ. ಹಾಗೆಯೇ ಒಟ್ಟಾಗಿ 29 ಸ್ಥಳಗಳ ಮೇಲೆ ದಾಳಿಯನ್ನು ನಡೆಸಿದೆ. ಈ ಪೈಕಿ ಸಮೀರ್ ವಾಂಖೆಡೆ ನಿವಾಸದ ಮೇಲೆ ದಾಳಿ ನಡೆಸಿರುವ ಸಿಬಿಐ 13 ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿದೆ.

ಶನಿವಾರ ಮುಂಜಾನೆವರೆಗೂ ಶೋಧ ಕಾರ್ಯಾಚರಣೆ
ಶುಕ್ರವಾರ ಸಮೀರ್ ವಾಂಖೆಡೆ ನಿವಾಸದ ಮೇಲೆ ದಾಳಿಯನ್ನು ನಡೆಸಲಾಗಿದ್ದು, ಶನಿವಾರ ಮುಂಜಾನೆ ಸುಮಾರು 5:30 ಗಂಟೆಯವರೆಗೆ ಶೋಧ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಅಂದರೆ ಸುಮಾರು 13 ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ಮಾಡಲಾಗಿದೆ. ಕಾರ್ಯಾಚರಣೆ ಪೂರ್ಣವಾದ ಬಳಿಕ ಸಮೀರ್ ವಾಂಖೆಡೆ ನಿವಾಸದಿಂದ ಸುಮಾರು 10-12 ಅಧಿಕಾರಿಗಳು ಹಲವಾರು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು ನಿವಾಸದಿಂದ ಹೊರನಡೆದಿದ್ದಾರೆ.
ಲಭ್ಯವಾದ ಮಾಹಿತಿ ಪ್ರಕಾರ ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ವಿರುದ್ಧದ ಡ್ರಗ್ಸ್ ಪ್ರಕರಣದಲ್ಲಿ ಸಮೀರ್ ವಾಂಖೆಡೆ ಸುಮಾರು 25 ಕೋಟಿ ರೂಪಾಯಿ ಲಂಚವನ್ನು ಪಡೆದಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಈ ಪ್ರಕರಣದಲ್ಲಿ ನಾಲ್ಕು ಮಂದಿಯ ಮೇಲೆ ಸಿಬಿಐ ದೂರು ದಾಖಲು ಮಾಡಿಕೊಂಡಿದೆ. ಈ ಪೈಕಿ ಸಮೀರ್ ವಾಂಖೆಡೆ ಕೂಡಾ ಒಬ್ಬರಾಗಿದ್ದಾರೆ.
ಕೇಂದ್ರ ತನಿಖಾ ಸಂಸ್ಥೆಯು ಸಮೀರ್ ವಾಂಖೆಡೆಯ ಮುಂಬೈ ನಿವಾಸ ಸೇರಿದಂತೆ ದೆಹಲಿ, ರಾಂಚಿ, ಕಾನ್ಪುರದಲ್ಲಿ ಒಟ್ಟಾಗಿ 29 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಿದೆ. 2021ರ ಅಕ್ಟೋಬರ್‌ನಲ್ಲಿ ಸಮೀರ್ ವಾಂಖೆಡೆ ನೇತೃತ್ವದ ತಂಡವು ಮುಂಬೈನ ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲ್‌ನಲ್ಲಿ ಕಾರ್ಡೆಲಿಯಾ ಕ್ರೂಸ್ ಮೇಲೆ ದಾಳಿ ನಡೆಸಿದೆ. ಈ ಘಟನೆಯ ಬಳಿಕ ಆರ್ಯನ್ ಖಾನ್ ಸೇರಿದಂತೆ ಹಲವಾರು ಮಂದಿಯನ್ನು ಬಂಧನ ಮಾಡಲಾಗಿದೆ.
ಇದಾದ ಬಳಿಕ ಆರ್ಯನ್ ಖಾನ್ ಸುಮಾರು 26 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದರು. ಅದೇ ಸಂದರ್ಭದಲ್ಲಿ ಆರ್ಯನ್ ಖಾನ್‌ರನ್ನು ಜೈಲಿನಲ್ಲಿ ಇರಿಸಲಾಗಿತ್ತು. ಆದರೆ ಸರಿಯಾದ ಸಾಕ್ಷಿಗಳು ಇಲ್ಲದ ಕಾರಣದಿಂದಾಗಿ ಕೋರ್ಟ್ ಅಕ್ಟೋಬರ್ 28, 2021ರಲ್ಲಿ ಆರ್ಯನ್ ಖಾನ್‌ಗೆ ಜಾಮೀನು ಮಂಜೂರು ಮಾಡಿದೆ. ಇದೇ ಸಂದರ್ಭದಲ್ಲಿ ಅರ್ಬಾಸ್ ಮರ್ಚೆಂಟ್‌ರನ್ನು ಕೂಡಾ ಬಂಧನ ಮಾಡಲಾಗಿದೆ.
ಅಕ್ಟೋಬರ್ 2, 2021ರಲ್ಲಿ ಎನ್‌ಸಿಬಿ ರಹಸ್ಯವಾಗಿ ಹೋಗಿ ಮುಂಬೈನಿಂದ ಗೋವಾಗೆ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿದೆ. ಏಜೆನ್ಸಿ ಕೊಕೇನ್, ಚರಸ್, MDMA ಮಾತ್ರೆಗಳು ಮತ್ತು MD ಅನ್ನು ದಾಳಿಯ ವೇಳೆ ವಶಕ್ಕೆ ತೆಗೆದುಕೊಂಡಿದೆ. ದಾಳಿಯ ಬಳಿಕ ಆರ್ಯನ್ ಖಾನ್ ಅವರನ್ನ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರೊಂದಿಗೆ ಬಂಧಿಸಲಾಯಿತು. 20 ಜನರನ್ನು ಬಂಧಿಸಿದ ಪ್ರಕರಣದಲ್ಲಿ ಆರ್ಯನ್ 'ಆರೋಪಿ ನಂಬರ್ 1' ಆಗಿದ್ದಾರೆ.












Click it and Unblock the Notifications