Manish Sisodia: ಸಿಬಿಐನಿಂದ ದೆಹಲಿ ಉಪಮುಖ್ಯಮಂತ್ರಿ ಸಿಸೋಡಿಯಾ ಬಂಧನ
ನವದೆಹಲಿಯಲ್ಲಿ ಸದ್ಯ ಹಿಂಪಡೆದಿರುವ ಮದ್ಯ ನೀತಿಯಡಿ ಕೇಳಿ ಬಂದ ಭ್ರಷ್ಟಾಚಾರದ ಆರೋಪದ ಮೇಲೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಕೇಂದ್ರ ತನಿಖಾ ದಳ ಭಾನುವಾರ ಬಂಧಿಸಿದೆ.
ನವದೆಹಲಿ, ಫೆಬ್ರವರಿ 26: ನವದೆಹಲಿಯಲ್ಲಿ ಸದ್ಯ ಹಿಂಪಡೆದಿರುವ ಮದ್ಯ ನೀತಿಯಡಿ ಕೇಳಿ ಬಂದ ಭ್ರಷ್ಟಾಚಾರದ ಆರೋಪದ ಮೇಲೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಕೇಂದ್ರ ತನಿಖಾ ದಳ ಭಾನುವಾರ ಬಂಧಿಸಿದೆ.
ಮೂಲಗಳ ಪ್ರಕಾರ, ಭಾನುವಾರ ಬೆಳಗ್ಗೆಯಿಂದಲೇ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬೆಳಗ್ಗೆಯಿಂದ ಒಂಬತ್ತು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ ಬಳಿಕ ಬಂಧನ ಮಾಡಲಾಗಿದೆ. ಏಳೆಂಟು ತಿಂಗಳು ಜೈಲಿನಲ್ಲಿ ಇರಲು ಸಿದ್ಧ ಎಂದು ಸಿಸೋಡಿಯಾ ಈ ಹಿಂದೆ ಪ್ರತಿಕ್ರಿಯಿಸಿದ್ದರು. ಅವರ ಕುಟುಂಬವನ್ನು ನೋಡಿಕೊಳ್ಳುತ್ತೇವೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ನವದೆಹಲಿ ಹಾಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಬಂಧನವಾಗಿರುವುದು ಕುತೂಹಲ ಮೂಡಿಸಿದೆ.
ಮನೀಶ್ ಸಿಸೋಡಿಯಾ ಬಂಧನವನ್ನು ಖಂಡಿಸಿ ನಾಳೆ (ಫೆ 27) ದೇಶಾದ್ಯಂತ ಸಿಬಿಐ ಕಚೇರಿಗಳ ಮುಂದೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಆಮ್ ಆದ್ಮಿ ಪಕ್ಷ ನಿರ್ಧರಿಸಿದೆ ಎಂದು ದೆಹಲಿ ಮಾಧ್ಯಮಗಳು ವರದಿ ಮಾಡಿವೆ.
ಅಬಕಾರಿ ನೀತಿಗೆ ಸಂಬಂಧಿಸಿದಂತೆ ಸಿಸೋಡಿಯಾ ಬಂಧನವಾದ ಸುದ್ದಿ ಹೊರಬೀಳುತ್ತಿದ್ದಂತೆಯೇ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಸಿಸೋಡಿಯಾ ನಿವಾಸಕ್ಕೆ ಆಗಮಿಸಿದ್ದಾರೆ.
"ಅಬಕಾರಿ ನೀತಿಯ ವಿಚಾರದಲ್ಲಿ ಮನೀಶ್ ಸಿಸೋಡಿಯಾ ಯಾವುದೇ ತಪ್ಪನ್ನು ಮಾಡಿಲ್ಲ, ಅವರ ಬಂಧನ ಬಿಜೆಪಿಯ ಕೀಳು ರಾಜಕೀಯದ ಒಂದು ಭಾಗ. ಸಿಸೋಡಿಯಾ ಬಂಧನದಿಂದ ಜನರು ಆಕ್ರೋಶಿತರಾಗಿದ್ದಾರೆ. ಜನರಿಗೆ ಎಲ್ಲಾ ವಿಚಾರವೂ ತಿಳಿದಿದೆ, ನಮ್ಮ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ"ಎಂದು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
"ಸತ್ಯೇಂದರ್ ಜೈನ್, ಮನೀಶ್ ಸಿಸೋಡಿಯಾ ಬಂಧನದ ನಂತರ ಮುಂದಿನ ಸರದಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರದ್ದು. ದೆಹಲಿಯ ತೆರಿಗೆ ಪಾವತಿದಾರರ ಹಣವನ್ನು ಲೂಟಿ ಮಾಡಿದ್ದಕ್ಕಾಗಿ ಸಿಸೋಡಿಯಾ ಬಂಧನ ಒಂದು ಪಾಠವಾಗಲಿದೆ. ಇದನ್ನು ನಾನು ಅಧಿಕೃತವಾಗಿ ಹೇಳಲು ಬಯಸುತ್ತೇನೆ"ಎಂದು ಬಿಜೆಪಿಯ ಮುಖಂಡ ಕಪಿಲ್ ಮಿಶ್ರಾ ಹೇಳುವ ಮೂಲಕ ಸಿಸೋಡಿಯಾ ಬಂಧವನ್ನು ಸಮರ್ಥಿಸಿಕೊಂಡಿದ್ದಾರೆ.
ಸಿಸೋಡಿಯಾ ಬಂಧನಕ್ಕೂ ಮುನ್ನ ದೆಹಲಿಯ ಕೇಂದ್ರ ತನಿಖಾ ದಳದ (ಸಿಬಿಐ) ಕೇಂದ್ರ ಕಚೇರಿಗೆ ರ‍್ಯಾಪಿಡ್ ಆಕ್ಷನ್ ಫೋರ್ಸ್ ಸೇರಿದಂತೆ ಭಾರೀ ಪೊಲೀಸ್ ಭದ್ರತೆಯನ್ನು ನೀಡಲಾಗಿದೆ.(ಚಿತ್ರಕೃಪೆ: ಪಿಟಿಐ)












Click it and Unblock the Notifications