Bypoll results 2023: ತಮಿಳುನಾಡು, ಮಹಾರಾಷ್ಟ್ರ, ಬಂಗಾಳ ಸೇರಿ 5 ರಾಜ್ಯಗಳಲ್ಲಿ ಉಪಚುನಾವಣೆಯ ಮತ ಎಣಿಕೆ
ಈರೋಡ್ ಉಪಚುನಾವಣೆಯು ಮುಖ್ಯವಾಗಿ ಕಾಂಗ್ರೆಸ್ ಅಭ್ಯರ್ಥಿ ಇವಿಕೆಎಸ್ ಇಳಂಗೋವನ್ ಮತ್ತು ಎಐಎಡಿಎಂಕೆ ಅಭ್ಯರ್ಥಿ ತೆನ್ನರಸು ನಡುವೆ ಪೈಪೋಟಿಗೆ ಸಾಕ್ಷಿಯಾಗಿದೆ.
ನವದೆಹಲಿ, ಮಾರ್ಚ್ 02: ಮೂರು ಈಶಾನ್ಯ ರಾಜ್ಯಗಳ ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ನಡೆಯುತ್ತಿರುವ ಬೆನ್ನಲ್ಲೆ, ದೇಶದ ಐದು ರಾಜ್ಯಗಳಲ್ಲಿ ನಡೆದ ಉಪಚುನಾವಣೆಯ ಮತ ಏಣಿಕೆ ಕೂಡ ನಡೆಯುತ್ತಿದೆ. ಅರುಣಾಚಲ ಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಮಹಾರಾಷ್ಟ್ರದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಗುರುವಾರ ಆರಂಭವಾಗಿದೆ.
ತಮಿಳುನಾಡಿನ ಈರೋಡ್ ಪೂರ್ವ ವಿಧಾನಸಭಾ ಉಪಚುನಾವಣೆಯಲ್ಲಿ, ಒಟ್ಟು 77 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಆದರೆ, ಉಪಚುನಾವಣೆಯು ಮುಖ್ಯವಾಗಿ ಕಾಂಗ್ರೆಸ್ ಅಭ್ಯರ್ಥಿ ಇವಿಕೆಎಸ್ ಇಳಂಗೋವನ್ ಮತ್ತು ಎಐಎಡಿಎಂಕೆ ಅಭ್ಯರ್ಥಿ ತೆನ್ನರಸು ನಡುವೆ ಪೈಪೋಟಿಗೆ ಸಾಕ್ಷಿಯಾಗಿದೆ. ಇಳಂಗೋವನ್ ಅವರು ಆಡಳಿತಾರೂಢ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಜೊತೆಗಿರುವ ಡಿಎಂಕೆ ಬೆಂಬಲದೊಂದಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಶಾಸಕ ತಿರುಮಹನ್ ಈವೀರಾ ಅವರ ಹಠಾತ್ ನಿಧನದ ನಂತರ ಉಪಚುನಾವಣೆ ಘೋಷಿಸಲಾಗಿತ್ತು.

ಎಐಎಡಿಎಂಕೆ ಪಕ್ಷದ ಮೇಲೆ ಚುಕ್ಕಾಣಿ ಹಿಡಿಯಲು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರಿಗೆ ಸುಪ್ರೀಂ ಕೋರ್ಟ್ ತೀರ್ಪು ಅವಕಾಶ ನೀಡಿದೆ. ಹೀಗಾಗಿ ತಾವು ಪಕ್ಷವನ್ನು ಮುನ್ನಡೆಸುವ ಸಮರ್ಥ ನಾಯಕ ಎಂದು ತೋರಿಸಿಕೊಳ್ಳಲು ಅವರಿಗೆ ಈರೋಡ್ ಉಪಚುನಾವಣೆಯ ಫಲಿತಾಂಶ ಪ್ರಮುಖವಾಗಿದೆ. ನಾಮ್ ತಮಿಜ್ಲರ್ ಕಚ್ಚಿ (ಎನ್‌ಟಿಕೆ), ದೇಸಿಯ ಮೊರ್ಪೊಕ್ಕು ದ್ರಾವಿಡ ಕಳಗಂ (ಡಿಎಮ್‌ಡಿಕೆ) ಮತ್ತು ಇತರ ಹಲವಾರು 77 ಅಭ್ಯರ್ಥಿಗಳು ಸಹ ಕಣದಲ್ಲಿದ್ದಾರೆ. ಸದ್ಯ ಕಾಂಗ್ರೆಸ್ ಅಭ್ಯರ್ಥಿ ಇವಿಕೆಎಸ್ ಇಳಂಗೋವನ್ ಮುನ್ನಡೆ ಸಾಧಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಚಿಂಚ್ವಾಡ್ ಮತ್ತು ಕಸ್ಬಾ ಪೇಠ್ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಮತ ಎಣಿಕೆ ನಡೆಯುತ್ತಿದೆ. ಬಿಜೆಪಿ ಮತ್ತು ಮಹಾ ವಿಕಾಸ್ ಅಘಾಡಿ (ಎಂವಿಎ) ನಡುವಿನ ಹೋರಾಟವು ಕಸ್ಬಾ ಪೇಠ್‌ನ ಚುನಾವಣಾ ಫಲಿತಾಂಶವನ್ನು ನಿರ್ಧರಿಸುತ್ತದೆ. ಬಿಜೆಪಿಯ ಹೇಮಂತ್ ರಸಾನೆ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ರವೀಂದ್ರ ಧಾಂಗೇಕರ್ ಅವರನ್ನು ಕಣಕ್ಕಿಳಿಸಿದೆ. ಕಸ್ಬಾ ಪೇಠ್ ವಿಧಾನಸಭಾ ಕ್ಷೇತ್ರದಿಂದ ಮುಕ್ತಾ ತಿಲಕ್ ನಿಧನದ ನಂತರ ಉಪಚುನಾವಣೆ ಘೋಷಿಲಾಗಿತ್ತು. ಕಸ್ಬಾ ಪೇಠ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ.
ಚಿಂಚ್‌ವಾಡ್‌ನಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಭ್ಯರ್ಥಿ ವಿಠ್ಠಲ್ ಕಾಟೆ, ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಶ್ವಿನಿ ಜಗತಾಪ್ ಮತ್ತು ಸ್ವತಂತ್ರ ರಾಹುಲ್ ಕಲಾಟೆ ನಡುವೆ ಸ್ಪರ್ಧೆ ಇದೆ. ಚಿಂಚ್‌ವಾಡ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಶಾಸಕ ಲಕ್ಷ್ಮಣ್ ಜಗತಾಪ್ ನಿಧನದ ನಂತರ ಉಪಚುನಾವಣೆ ಘೋಷಿಲಾಗಿತ್ತು. ಚಿಂಚ್‌ವಾಡ್‌ನಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

ಡಿಸೆಂಬರ್ 2022 ರಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಸುಬ್ರತಾ ಸಹಾ ಅವರ ಮರಣದ ನಂತರ ಪಶ್ಚಿಮ ಬಂಗಾಳದ ಸಾಗರ್ದಿಘಿ ವಿಧಾನಸಭಾ ಸ್ಥಾನಕ್ಕೆ ಉಪಚುನಾವಣೆ ಅಗತ್ಯವಾಗಿತ್ತು. ಟಿಎಂಸಿ ದೇಬಾಶಿಶ್ ಬ್ಯಾನರ್ಜಿ ಮತ್ತು ಬಿಜೆಪಿ ದಿಲೀಪ್ ಸಹಾ ಅವರನ್ನು ಕಣಕ್ಕಿಳಿಸಿದೆ. ಎಡ ಪಕ್ಷಗಳ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಬೇರಾನ್ ಬಿಸ್ವಾಸ್ ಕಣದಲ್ಲಿದ್ದಾರೆ.
ಜಾರ್ಖಂಡ್‌ನ ರಾಮಗಢ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ 14 ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ 18 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ನಾಯಕಿ ಮಮತಾ ದೇವಿ ಅವರನ್ನು ಅನರ್ಹಗೊಳಿಸಿದ್ದರಿಂದ ಉಪಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಮಮತಾ ದೇವಿಯ ಪತಿ ಬಜರಂಗ್ ಮಹ್ತೋ ಅವರನ್ನು ಕಣಕ್ಕಿಳಿಸಿದೆ. ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ (ಎಜೆಎಸ್‌ಯು) ಪಕ್ಷವು ತನ್ನ ನಾಯಕಿ ಸುನೀತಾ ಚೌಧರಿ ಅವರನ್ನು ನಾಮನಿರ್ದೇಶನ ಮಾಡಿದೆ.
ಈ ಎಲ್ಲ ಐದು ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸೋಮವಾರ ಮತದಾನ ನಡೆದಿದೆ.












Click it and Unblock the Notifications