Budget 2025: ವಿ. ಸೋಮಣ್ಣ ರೈಲ್ವೆ ಸಚಿವರು, ಕರ್ನಾಟಕದ ಯೋಜನೆಗೆ ಹೆಚ್ಚಿನ ಅನುದಾನ
ನವದೆಹಲಿ, ಜನವರಿ 24: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ 2025-26ನೇ ಸಾಲಿನ ಬಜೆಟ್ ಫೆಬ್ರವರಿ 1ರಂದು ಮಂಡನೆಯಾಗಲಿದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಸಾಮಾನ್ಯನಲ್ಲಿಯೇ ರೈಲ್ವೆ ಬಜೆಟ್ ಸೇರಿಸಿ ಮಂಡನೆ ಮಾಡಲಾಗುತ್ತದೆ. ಆದ್ದರಿಂದ ಇಲಾಖೆಗೆ ಅನುದಾನ ಸಾಮಾನ್ಯ ಬಜೆಟ್‌ನಲ್ಲಿಯೇ ಹಂಚಿಕೆಯಾಗಲಿದೆ.
ಈ ಬಾರಿಯ ಬಜೆಟ್‌ನಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಅನುದಾನವನ್ನು ನಿರೀಕ್ಷೆ ಮಾಡಲಾಗಿದೆ. ಕಾರಣ ರೈಲ್ವೆ ಖಾತೆ ರಾಜ್ಯ ಸಚಿವರು ತುಮಕೂರು ಕ್ಷೇತ್ರ ಸಂಸದ ವಿ. ಸೋಮಣ್ಣ. ರಾಜ್ಯದ 10ಕ್ಕೂ ಹೆಚ್ಚು ರೈಲು ಯೋಜನೆ ಪೂರ್ಣಗೊಳಿಸಲು ಸಚಿವರು ಬಯಸಿದ್ದು, ಇದಕ್ಕಾಗಿ ಅಗತ್ಯ ಅನುದಾನ ಬೇಕಿದೆ.

ವಿ. ಸೋಮಣ್ಣ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವರು. ಆದ್ದರಿಂದ ರಾಜ್ಯದ ನೀರಾವರಿ ಯೋಜನೆಗಳಿಗೂ ಅನುದಾನ ನಿರೀಕ್ಷೆ ಮಾಡಲಾಗಿದೆ. ಮೇಕೆದಾಟು, ಮಹದಾಯಿ, ಭದ್ರಾ ಮೇಲ್ದಂಡೆ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳಿವೆ. ಕೆಲವು ಯೋಜನೆಗಳಿಗೆ ಕೇಂದ್ರದ ಅನುದಾನ ಅಗತ್ಯವಿದೆ.
ರೈಲ್ವೆ ಯೋಜನೆಗಳು: ರೈಲ್ವೆ ಖಾತೆ ರಾಜ್ಯ ಸಚಿವರಾದ ಬಳಿಕ ವಿ. ಸೋಮಣ್ಣ ರಾಜ್ಯದದಲ್ಲಿ ಹಲವು ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ. ರೈಲು ಯೋಜನೆಗಳ ಸ್ಥಿತಿಗತಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ, ಕೆಲವು ಯೋಒನೆಗಳನ್ನು ಪೂರ್ಣಗೊಳಿಸಲು ಗಡುವು ಸಹ ನೀಡಿದ್ದಾರೆ.
ರಾಜ್ಯದಲ್ಲಿ 10ಕ್ಕೂ ಅಧಿಕ ರೈಲು ಯೋಜನೆಗಳ ಕಾಮಗಾರಿ ನಡೆಯುತ್ತಿದೆ. ಇವುಗಳನ್ನು ಪೂರ್ಣಗೊಳಿಸಲು, ಭೂ ಸ್ವಾಧೀನಕ್ಕೆ ಕೇಂದ್ರದ ಅನುದಾನ ಅಗತ್ಯವಿದೆ. ಹಲವು ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ವೆಚ್ಚ ಹಂಚಿಕೆಯ ಆಧಾರದ ಮೇಲೆ ಕೈಗೊಳ್ಳಲಾಗಿದೆ.
ತುಮಕೂರು-ದಾವಣಗೆರೆ-ಚಿತ್ರದುರ್ಗ ನೇರ ರೈಲು ಮಾರ್ಗ, ಬಾಗಲಕೋಟೆ-ಕುಡಚಿ, ರಾಯದುರ್ಗ-ಕಲ್ಯಾಣದುರ್ಗ-ತುಮಕೂರು, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು, ಧಾರವಾಡ-ಕಿತ್ತೂರು-ಬೆಳಗಾವಿ ನೇರ ರೈಲು ಮಾರ್ಗ, ಚಿಕ್ಕಮಗಳೂರು-ಬೇಲೂರು ಸೇರಿದಂತೆ ವಿವಿಧ ಯೋಜನೆಗಳಿಗೆ ಅನುದಾನದ ಅಗತ್ಯವಿದೆ.
ರಾಜ್ಯದ ಹೊಸ ರೈಲು ಯೋಜನೆಗಳ ಸಮೀಕ್ಷೆಗೆ ಒಪ್ಪಿಗೆ ನೀಡುವುದು, ಡಿಪಿಆರ್ ತಯಾರು ಮಾಡಲು ಅನುದಾನ ಹಂಚಿಕೆ, ಜೋಡಿ ಹಳಿ ನಿರ್ಮಾಣಕ್ಕೆ ಅನುದಾನ, ಹೊಸ ರೈಲು ಯೋಜನೆಗಳ ಘೋಷಣೆ ಸೇರಿದಂತೆ ಕರ್ನಾಟಕದ ಜನರು ಬಜೆಟ್ ಮೇಲೆ ಅಪಾರವಾದ ನಿರೀಕ್ಷೆಯನ್ನು ಹೊಂದಿದ್ದಾರೆ. ಯಾವ ಯೋಜನೆಗೆ ಮನ್ನಣೆ ಸಿಗಲಿದೆ ಎಂದು ಕಾದು ನೋಡಬೇಕಿದೆ.
ಕರ್ನಾಟಕ ಸರ್ಕಾರ ಉದ್ಯಾನ ನಗರಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಅನುಷ್ಠಾನಗೊಳಿಸುತ್ತಿದೆ. 2026ಕ್ಕೆ ಮೊದಲ ರೈಲು ಸಂಚಾರ ಆರಂಭಿಸುವ ಗುರಿ ಇದೆ. ಕರ್ನಾಟಕ ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿಯು (ಕೆ-ರೈಡ್) ಮೂಲಕ ಯೋಜನೆ ಅನುಷ್ಠಾನವಾಗುತ್ತಿದ್ದು, ಈ ರೈಲು ಸೇವೆಗೆ ರೈಲು ಬೋಗಿ ಖರೀದಿಗೆ ಕೇಂದ್ರದಿಂದ ಅನುದಾನ ಸಿಗಬೇಕಿದೆ.
ಬೆಂಗಳೂರು ನಗರದ ನಮ್ಮ ಮೆಟ್ರೋ ಯೋಜನೆಗೆ ಸಹ ಕೇಂದ್ರದ ಅನುದಾನ ಬೇಕಿದೆ. ಕರ್ನಾಟಕಕ್ಕೆ ಹೊಸ ವಂದೇ ಭಾರತ್ ರೈಲುಗಳು, ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ವಂದೇ ಭಾರತ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳಿಗೆ ಬಜೆಟ್‌ನಲ್ಲಿ ಮನ್ನಣೆ ಸಿಗಲಿದೆಯೇ? ಎಂದು ಕಾದು ನೋಡಬೇಕಿದೆ.












Click it and Unblock the Notifications