Jharkhand Election: ದ್ವೇಷದ ರಾಜಕಾರಣ ಮಾಡುವವರನ್ನು ದೂರ ಇಡಿ; ಹೇಮಂತ್ ಸೊರೆನ್ ಮನವಿ
ಜಾರ್ಖಂಡ್ ರಾಜ್ಯದ 81 ವಿಧಾನಸಭಾ ಕ್ಷೇತ್ರಗಳಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಇಂದು ಮೊದಲ ಹಂತದ ಚುನಾವಣೆ ನಡೆಯುತ್ತಿದೆ. 43 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಜನ ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ. ಜೆಎಂಎಂ ಪಕ್ಷದ ಮುಖ್ಯಸ್ಥ, ಮುಖ್ಯಮಂತ್ರಿ ಹೇಮಂತ್ ಸೋರೆನ್ ಮತ ಚಲಾಯಿಸಿದ್ದು, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಎಲ್ಲರೂ ಮತ ಚಲಾಯಿಸಬೇಕು ಎಂದು ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ.
ಚುನಾವಣಾ ದಿನ ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಸಿಎಂ ಹೇಮಂತ್ ಸೊರೆನ್, ಜಾರ್ಖಂಡ್‌ನ ಶ್ರೀಮಂತ ಇತಹಾಸ, ಸಂಸ್ಕೃತಿ ಮತ್ತು ಗುರುತನ್ನು ರಕ್ಷಣೆ ಮಾಡುವವರಿಗೆ ಮತ ನೀಡುವಂತೆ ಮಾಡಿದರು. ಸಮಾಜದಲ್ಲಿ ತುಳತಕ್ಕೆ ಒಳಗಾದವರಿಗೆ ಅಧಿಕಾರ ನೀಡುವ, ಸಾಮಾಜಿಕ ಭದ್ರತೆ, ಆರ್ಥಿಕ ಸಬಲೀಕರಣ, ಶಿಕ್ಷಣ, ಆರೋಗ್ಯ ಮತ್ತು ಸಾಮರಸ್ಯವನ್ನು ಕಾಪಾಡಲು ತಮ್ಮ ಸರ್ಕಾರ ಬದ್ದವಾಗಿದೆ ಎಂದು ಹೇಳಿದರು.

ಸಾಮಾಜಿಕ ಭದ್ರತೆ, ಆರ್ಥಿಕ ಸಬಲೀಕರಣ, ಶಿಕ್ಷಣ ಮತ್ತು ಆರೋಗ್ಯ ಎನ್ನುವ ಕಂಬಗಳನ್ನು ಗಟ್ಟಿಗೊಳಿಸುವ ಮೂಲಕ ಜಾರ್ಖಂಡ್ ರಾಜ್ಯವನ್ನು ಅಭಿವೃದ್ಧಿಯತ್ತ ಮುನ್ನಡೆಸಬಹುದು ಎಂದು ಹೇಳಿದ್ದಾರೆ. ನಮ್ಮ ವೀರ ಹುತಾತ್ಮರು, ಕ್ರಾಂತಿಕಾರಿ ನಾಯಕರ ಕನಸು ನನಸು ಮಾಡುವ ಮೂಲಕ ಸುರ್ವಣ ಜಾರ್ಖಂಡ್ ನಿರ್ಮಾಣದತ್ತೆ ಹೆಜ್ಜೆ ಹಾಕೋಣ ಎಂದಿದ್ದಾರೆ.
ಮತದಾನ ಮಾಡುವ ಮೊದಲು ರಾಜ್ಯ ಸರ್ಕಾರದ ಸಾಧನೆಗಳು ಮತ್ತು ನಮ್ಮ ಸರ್ಕಾರದ ಯೋಜನೆಗಳ ಬಗ್ಗೆ ರಾಜ್ಯದ ಜನತೆ ತಿಳಿದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ನಾನು ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ, ಅದನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ರಾಜ್ಯದ ಯುವಜನತೆ, ವೃದ್ಧರು ಮತ್ತು ಮಹಿಳೆಯರಿಗಾಗಿ ಇನ್ನೂ ಸಾಕಷ್ಟು ಕೆಲಸ ಮಾಡಬೇಕಾಗಿದೆ ಎಂದು ನಾನು ಒಪ್ಪಿಕೊಳ್ಳುತ್ತೇನೆ, ಈ ಕೆಲಸ ಮಾಡಲು ನಾನು ಬದ್ದನಾಗಿದ್ದೇನೆ ಎಂದು ಭರವಸೆ ನೀಡಿದರು.
ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಲ್ಲ
ನಮ್ಮ ಸರ್ಕಾರ ಬಿಜೆಪಿ-ಎನ್‌ಡಿಎ ರೀತಿಯಲ್ಲಿ ಧರ್ಮವನ್ನು ವಿಭಜಿಸುವ ರಾಜಕೀಯ ಮಾಡುವುದಿಲ್ಲ. ಹಿಂಸಾಚಾರವನ್ನು ಆಶ್ರಯಿಸುವುದು ಸುಲಭ ಆದರೆ ಅದು ಹೇಡಿತನ. ಹಣದುಬ್ಬರ, ನಿರುದ್ಯೋಗ ಮತ್ತು ಚೀನಾದ ಜೊತೆ ಗಡಿ ಭದ್ರತೆಯಂತಹ ಗಂಭೀರ ಸಮಸ್ಯೆಗಳಿಗೆ ಪರಿಹಾರ ಹುಡುಕಲು ವಿಫಲವಾಗಿರುವ ಬಿಜೆಪಿ ಸರ್ಕಾರ, ಧರ್ಮದ ಹೆಸರಿನಲ್ಲಿ ವಿಷಬೀಜ ಬಿತ್ತುತ್ತಾ ಜನರನ್ನು ಬೇರೆಡೆ ಸೆಳೆಯಲು ಪ್ರಯತ್ನ ಮಾಡುತ್ತಿದೆ ಎಂದರು.
ನಮ್ಮ ಸರ್ಕಾರ ಮಾಡಿರುವ ಕೆಲಸವನ್ನು ಜನರೇ ಮೌಲ್ಯಮಾಪನ ಮಾಡಲಿ. ಮತ್ತೆ ಜನ ನಮಗೆ ಬೆಂಬಲ ಕೊಟ್ಟರೆ ಮುಂದಿನ ಐದು ವರ್ಷಗಳಲ್ಲಿ ಹತ್ತು ವರ್ಷದ ಪ್ರಗತಿಯನ್ನು ಸಾಧಿಸುವುದಾಗಿ ಭರವಸೆ ನೀಡಿದ್ದಾರೆ.
ಜಾರ್ಖಂಡ್ ಜನತೆ ಇಂಡಿಯಾ ಒಕ್ಕೂಟಕ್ಕೆ ಮತ ಹಾಕಲ ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮಾಣಿಕಂ ಟ್ಯಾಗೋರ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಧರ್ಮದ ಆಧಾರದಲ್ಲಿ ಒಡಕು ಮೂಡಿಸಲು ಪ್ರಯತ್ನ ಮಾಡಿದ್ದು, ರಾಜ್ಯದ ಜನತೆ ಅವರ ಆಲೋಚನೆಗಳಿಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications