Arvind Kejriwal: ಅರವಿಂದ್ ಕೇಜ್ರಿವಾಲ್ 'ಮದ್ಯದ ದಲ್ಲಾಳಿ'; ಸಿಎಜಿ ವರದಿ ಬಳಿಕ ಬಿಜೆಪಿ ಟೀಕೆ
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಆಘಾತ ಎದುರಿಸಿದ್ದ ಎಎಪಿ ಮುಖ್ಯಸ್ಥ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸಿಎಜಿ ಕೊಟ್ಟಿರುವ ವರದಿ ಮತ್ತಷ್ಟು ಮುಜುಗರ ತಂದಿದೆ. ದೆಹಲಿ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಅಬಕಾರಿ ಇಲಾಖೆಯ ಸಿಎಜಿ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿದ್ದು, ಬಿಜೆಪಿ ಕೇಜ್ರಿವಾಲ್ ವಿರುದ್ಧ ಹರಿಹಾಯ್ದಿದೆ.
ಮಂಗಳವಾರ ಸಿಎಜಿ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿದ ಬಳಿಕ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಅವರನ್ನು ಮದ್ಯದ ದಲ್ಲಾಳಿ ಎಂದು ಕರೆದಿದೆ.

ಸಿಎಜಿ ವರದಿಯನ್ನು ಮುಖ್ಯಮಂತ್ರಿ ರೇಕಾ ಗುಪ್ತಾ ಮಂಡಿಸಿದ್ದಾರೆ, ಇದು ಎಎಪಿಯ ಕರಾಳ ಕೃತ್ಯಗಳ ಪಟ್ಟಿಯಾಗಿದೆ. ದೆಹಲಿಯಲ್ಲಿ ಯಾರಾದರೂ ಮದ್ಯದ ದಲ್ಲಾಳಿ ಇದ್ದರೆ ಅದು ಅರವಿಂದ್ ಕೇಜ್ರಿವಾಲ್ ಎಂದು ನಾವು ಚುನಾವಣಾ ಪ್ರಚಾರದಲ್ಲೇ ಹೇಳಿದ್ದೇವೆ, ಭ್ರಷ್ಟಾಚಾರ ಮಾಡಿದ ಯಾರೇ ಆದರೂ ಉತ್ತರ ನೀಡಲೇಬೇಕು ಎಂದು ದೆಹಲಿ ಜನತೆಗೆ ಭರವಸೆ ನೀಡಿದ್ದೆವು ಎಂದು ಬಿಜೆಪಿ ನಾಯಕ ಸಚ್‌ದೇವ್ ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.
ಸಿಎಜಿ ವರದಿಯನ್ನು ದೆಹಲಿ ವಿಧಾನಸಭೆಯಲ್ಲಿ ಮಂಡಿಸದಂತೆ ತಡೆಯಲು ಅರವಿಂದ್ ಕೇಜ್ರಿವಾಲ್ ತಮಗಿದ್ದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ಮನೋಜ್ ತಿವಾರಿ ಆರೋಪಿಸಿದ್ದಾರೆ.
ಮಂಗಳವಾರ ಸಿಎಜಿ ವರದಿಯನ್ನು ದೆಹಲಿ ವಿಧಾನಸಭೆಯಲ್ಲಿ ಮಂಡಿಸಲಾಗಿದ್ದು, ದೆಹಲಿಯಲ್ಲಿ ಎರಡು ಅವಧಿಗೆ ಆಡಳಿತ ನಡೆಸಿರುವ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪಕ್ಷದ ನಾಯಕರು, ಸಿಎಜಿ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸದಂತೆ ತಡೆಯಲು ಸಾಕಷ್ಟು ಪ್ರಯತ್ನ ಮಾಡಿದೆ. ಮದ್ಯ ನೀತಿ ಹಗರಣದಲ್ಲಿ ₹2000 ಕೋಟಿಗೂ ಹೆಚ್ಚು ಹಣ ಅಕ್ರಮ ನಡೆದಿದೆ ಎಂದು ವರದಿಯಲ್ಲಿ ಬಯಲಾಗಿದೆ ಎಂದು ತಿವಾರಿ ಹೇಳಿದ್ದಾರೆ.
ಸಿಎಜಿ ವರದಿಯಲ್ಲಿ ಏನಿದೆ?
ಮಂಗಳವಾರ ಬೆಳಿಗ್ಗೆ ಸಿಎಂ ರೇಖಾ ಗುಪ್ತಾ ದೆಹಲಿಯಲ್ಲಿ ಮದ್ಯದ ನಿಯಂತ್ರಣ ಮತ್ತು ಪೂರೈಕೆಯ ಕಾರ್ಯಕ್ಷಮತೆ ಲೆಕ್ಕಪರಿಶೋಧನೆ ವರದಿಯನ್ನು ಮಂಡಿಸಿದ್ದಾರೆ. 2021-2022 ರಲ್ಲಿ ಜಾರಿಗೆ ತಂದ ಅಬಕಾರಿ ನೀತಿಯಿಂದಾಗಿ ರಾಜ್ಯ ಸರ್ಕಾರಕ್ಕೆ ₹2,000 ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ವರದಿಯಲ್ಲಿ ತಿಳಿದಿದೆ ಎಂದು ಅವರು ಹೇಳಿದ್ದಾರೆ.
ಸಿಎಜಿ ವರದಿಯನ್ನು ಮಂಡಿಸುತ್ತಿದ್ದಂತೆ ಎಎಪಿ ನಾಯಕಿ, ದೆಹಲಿ ಮಾಜಿ ಮುಖ್ಯಮಂತ್ರಿ ಅತಿಶಿ ರದ್ದುಗೊಂಡಿರುವ ಹೊಸ ಮದ್ಯ ನೀತಿಯನ್ನು ಸಮರ್ಥನೆ ಮಾಡಿದ್ದಾರೆ. ಅಕ್ಕ-ಪಕ್ಕದ ರಾಜ್ಯಗಳಿಂದ ಅಕ್ರಮವಾಗಿ ಮದ್ಯವನ್ನು ಪೂರೈಕೆ ಮಾಡುತ್ತಿರುವುದರಿಂದ ದೆಹಲಿಯ ಜನತೆ ನಷ್ಟ ಅನುಭವಿಸಿದ್ದಾರೆ ಎಂದು ಹೇಳಿದ್ದು, ಹಳೆಯ ಮದ್ಯ ನೀತಿಯಲ್ಲಿ ಅಕ್ರಮ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.












Click it and Unblock the Notifications