Delhi Election 2025: ಪ್ರಧಾನಿ ಮೋದಿಗೆ ಅರವಿಂದ್ ಕೇಜ್ರಿವಾಲ್ ಪತ್ರ, ಆಗ್ರಹಿಸಿದ್ದೇನು?
ನವದೆಹಲಿ, ಜನವರಿ 09: ದೆಹಲಿ ವಿಧಾನಸಭಾ ಚುನಾವಣೆ 2025ಗೆ ದಿನಾಂಕ ಘೋಷಣೆ ಆದ ಬೆನ್ನಲ್ಲೆ ಎಎಪಿ ನಾಯಕ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಕಳೆದ 10 ವರ್ಷಗಳ ಹಿಂದೆ ನೀಡಿದ್ದ ಭರವಸೆಯನ್ನು ಈಡೇರಿಸುವಂತೆ ಅವರು ಪತ್ರ ಮುಖೇನ ಒತ್ತಾಯಿಸಿದ್ದಾರೆ. ಜೊತೆಗೆ ಕೊಟ್ಟ ಭರವಸೆ ಈಡೇರಿಸುವಲ್ಲಿ ನಿಮ್ಮ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ದೆಹಲಿ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿರುವ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ಅವರು 'ಜಾಟ್ ಸಮುದಾಯ'ದ ಪರ ಧ್ವನಿ ಎತ್ತಿದ್ದಾರೆ. 'ಜಾಟ್ ಸಮುದಾಯ'ಕ್ಕೆ ಇತರ ಹಿಂದುಳಿದ ವರ್ಗಗಳ ಮೀಸಲಾತಿ ಸ್ಥಾನ ಮಾನ ನೀಡುವುದನ್ನು ಬೆಂಬಲಿಸಿ ಪ್ರಧಾನಿ ಅವರಿಗೆ ಪತ್ರ ಬರೆದು ಕೋರಿದ್ದಾರೆ.

ಗುರುವಾರ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಅವರು, 'ಜಾಟ್ ಸಮುದಾಯ' ಬಹುಕಾಲದಿಂದಲೇ ಆಗ್ರಹಿಸುತ್ತಿರುವ ಒಬಿಸಿ ಪಟ್ಟಿ ಸೇರ್ಪಡೆ ಬೇಡಿಕೆ ಈಡೇರಿಸಬೇಕು. ಅವರಿಗೆ ನ್ಯಾಯ ಒದಗಿಸುವಂತೆ ಕೇಜ್ರಿವಾಲರು ಆಗ್ರಹಿಸಿದ್ದಾರೆ.
ದಶಕದ ಹಿಂದೆ ಕೊಟ್ಟಿದ್ದ ಮಾತು ಉಳಿಸಿಕೊಳ್ಳಿ
2014ರಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿಯವರು 2015 ರಲ್ಲಿ ಜಾಟ್ ನಾಯಕರನ್ನು ನೀವೆ ನಿವಾಸಕ್ಕೆ ಆಹ್ವಾನಿಸಿ ಭರವಸೆ ನೀಡಿದ್ದೀರಿ. ಜಾಟ್ ಸಮುದಾಯವನ್ನು ಕೇಂದ್ರ ಒಬಿಸಿ ಪಟ್ಟಿಯಲ್ಲಿ ಸೇರಿಸುವ ಬಗ್ಗೆ ಮಾತು ಕೊಟ್ಟಿದ್ದೀರಿ. ಬಳಿಕ 2019 ರಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಮತ್ತದೇ ಭರವಸೆ ನೀಡಿದ್ದರು. ಆದರೆ ಈವರೆಗೆ ಭರವಸೆ ಭರವಸೆಯಾಗಿಯೇ ಉಳಿದಿದೆ. ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ.
ಶಿಕ್ಷಣ ಸಂಸ್ಥೆಗಳಲ್ಲಿ 'ಜಾಟ್' ವಿದ್ಯಾರ್ಥಿಗಳಿಗೆ ಅವಕಾಶ ಕೊಡಿ
ದೆಹಲಿ ವಿಶ್ವವಿದ್ಯಾಲಯದಲ್ಲಿ ರಾಜಸ್ಥಾನದ ಜಾಟ್ ಸಮುದಾಯದ ಅರ್ಹ ವಿದ್ಯಾರ್ಥಿಗಳನ್ನು ಮೀಸಲಾತಿಯಿಂದ ಹೊರಗಿಡಲಾಗಿದೆ. ಸಾವಿರಾರು ಜಾಟ್ ವಿದ್ಯಾರ್ಥಿಗಳಿಗೆ ದೆಹಲಿ ವಿಶ್ವ ವಿದ್ಯಾಲಯ ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ನಿರಾಕರಿಸಲಾಗಿದೆ. ಇದು ಸರಿಯಲ್ಲ. ಅವರ ಬೇಡಿಕೆ ಈಡೇರಿಸಬೇಕು. ಜಾಟ್ ಸಮುದಾಯಕ್ಕೆ ನ್ಯಾಯ ಕಲ್ಪಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇದಷ್ಟೇ ಅಲ್ಲದೇ ದೆಹಲಿಯ ಒಬಿಸಿ ಪಟ್ಟಿಯ ಭಾಗವಾಗಿದೆ. ಹೀಗದ್ದರೂ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಜಾಟ್ ಸಮುದಾಯದವರಿಗೆ ಸೌಲಭ್ಯಗಳನ್ನು ನೀಡದೇ ಹೊರಗಿಡಲಾಗುತ್ತಿದೆ ಎಂದು ಅವರು ಆಪಾದಿಸಿದರು. ನೀವು ಮತ್ತು ಗೃಹ ಸಚಿವರು ಇಬ್ಬರೂ ಕೊಟ್ಟ ಮಾತು ತಪ್ಪಿದ್ದೀರಿ. ಕೇಂದ್ರ ಸರ್ಕಾರ ಜಾಟ್ ಸಮುದಾಯದವರ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿದೆ. ಚುನಾವಣೆ ವೇಳೆ ಮತಗಳಿಗಾಗಿ ಭರವಸೆ ನೀಡಿ ಆನಂತರ ಮರೆತಿದ್ದೀರಿ ಎಂದ ಅವರು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ದೆಹಲಿ ವಿಧಾನಸಭಾ ಚುನಾವಣೆ ಕುರಿತು..
ಭಾರತೀಯ ಚುನಾವಣಾ ಆಯೋಗವು (ECI) ಸದರಿ ವರ್ಷದಲ್ಲಿ ದೆಹಲಿ 70 ಸ್ಥಾನಗಳಿಗೆ ಒಂದೇ ಹಂತದಲ್ಲಿ ಚುನಾವಣೆ ಗೋಷಣೆ ಮಾಡಿದೆ. ವಿಧಾನಸಭಾ ಚುನಾವಣೆಯು ಫೆಬ್ರವರಿ 5 ರಂದು ನಡೆಯಲಿದೆ. ಫೆಬ್ರವರಿ 8 ರಂದು ಚುನಾವಣೆ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಸಂಬಂಧ ಸ್ಥಳೀಯ ಮತ್ತು ರಾಷ್ಟ್ರೀಯ ಪಕ್ಷಗಳು ಚುನಾವಣೆ ಸಿದ್ಧತೆ ನಡೆಸಿವೆ. ಗೆಲುವಿಗಾಗಿ ತೀವ್ರ ಪೈಪೋಟಿ ಒಡ್ಡಲು ರಣತಂತ್ರ ರೂಪಿಸುತ್ತಿವೆ.












Click it and Unblock the Notifications