ಆಂಧ್ರ ಪ್ರದೇಶ ಮಳೆ: ಕೃಷ್ಣಾ ನದಿಯಲ್ಲಿ ಭಾರೀ ಪ್ರವಾಹ, 70% ಮುಳುಗಿದ ಸಂಗಮೇಶ್ವರ ದೇವಾಲಯ
ಅಮರಾವತಿ, ಜುಲೈ. 31: ಆಂಧ್ರ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ಕೃಷ್ಣಾ ನದಿಯಲ್ಲಿ ಭಾರೀ ಪ್ರಮಾಣದ ಪ್ರವಾಹ ಉಂಟಾಗಿ ಭಾನುವಾರವೂ ಐತಿಹಾಸಿಕ ಸಂಗಮೇಶ್ವರ ಸ್ವಾಮಿ ದೇವಸ್ಥಾನ ಮುಳುಗಡೆಯಾಗಿದೆ. ದೇವಾಲಯದ ಶೇಕಡಾ 70 ಕ್ಕಿಂತ ಹೆಚ್ಚು ಭಾಗವು ನೀರಿನಲ್ಲಿ ಮುಳುಗಿದ್ದು, ಕೆಲವು ಗೋಪುರಗಳು ಮಾತ್ರ ಕಾಣಿಸುತ್ತಿವೆ.
ಮುಂದಿನ 24 ಗಂಟೆಗಳಲ್ಲಿ ಇಡೀ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗುವ ಸಾಧ್ಯತೆ ಇದೆ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ. ಕೃಷ್ಣಾ ನದಿ ದಡದಲ್ಲಿರುವ ನಂದ್ಯಾಲ್ ಜಿಲ್ಲೆಯ ಕೋತಪಲ್ಲಿ ಮಂಡಲದಲ್ಲಿರುವ ಸಂಗಮೇಶ್ವರ ಸ್ವಾಮಿ ದೇವಸ್ಥಾನವು ಪ್ರತಿ ವರ್ಷ ಎಂಟು ತಿಂಗಳ ಕಾಲ ನೀರೊಳಗಿರುತ್ತದೆ. ಆ ವೇಳೆ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ ಮತ್ತು ಅರ್ಚಕರು ವರ್ಷದಲ್ಲಿ ನಾಲ್ಕು ತಿಂಗಳು ಮಾತ್ರ ಪೂಜಾ ಕೈಂಕರ್ಯ ಆಚರಣೆಗಳನ್ನು ಮಾಡುತ್ತಾರೆ.

ಹೀಗಾಗಿ ಉಳಿದ ಎಂಟು ತಿಂಗಳುಗಳ ಕಾಲ, ಏಳು ನದಿಗಳನ್ನು ಸಂಪರ್ಕಿಸುವ ಕೃಷ್ಣಾ ಮತ್ತು ತುಂಗಭದ್ರಾ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ದೇವಾಲಯವು ನೀರಿನ ಅಡಿಯಲ್ಲಿಯೇ ಇರುತ್ತದೆ. ಇಲ್ಲಿ ಕುತೂಹಲಕಾರಿ ಅಂಶವೆಂದರೆ, ಮರದ ಶಿವಲಿಂಗವು ಪ್ರತಿ ವರ್ಷ ಸುಮಾರು ಎಂಟು ತಿಂಗಳ ಕಾಲ ನೀರಿನ ಅಡಿಯಲ್ಲಿದ್ದರೂ ಹಾನಿಗೊಳಗಾಗುವುದಿಲ್ಲ.
ಮುಂಜಾಗ್ರತಾ ಕ್ರಮವಾಗಿ ದೇವಾಲಯದ ಅಧಿಕಾರಿಗಳು ಎರಡು ದಿನಗಳ ಹಿಂದೆಯೇ ಭಕ್ತರ ಸಂಚಾರವನ್ನು ನಿರ್ಬಂಧಿಸಿದ್ದರು. ಅರ್ಚಕರು ಏಳು ನದಿಗಳ ನೀರನ್ನು ಬಳಸಿ ಅಭಿಷೇಕ ಸೇರಿದಂತೆ ಪವಿತ್ರ ವಿಧಿಗಳನ್ನು ನೆರವೇರಿಸಿದರು ಮತ್ತು ಶನಿವಾರದಂದು ದೈವಿಕ ಆಶೀರ್ವಾದ ಪಡೆಯಲು ಮಂಗಳಾರತಿ ಸಲ್ಲಿಸಿದರು. ಮುಂದಿನ 5-6 ತಿಂಗಳುಗಳ ಕಾಲ ನೀರಿನ ಮಟ್ಟ ಕಡಿಮೆಯಾಗುವವರೆಗೆ ದೇವಸ್ಥಾನವನ್ನು ಮುಚ್ಚಲಾಗುತ್ತದೆ, ದುರಸ್ತಿ ಮಾಡಲಾಗುತ್ತದೆ. ತದ ನಂತರ ಸಹಜ ಸ್ಥಿತಿಗೆ ಮರಳುತ್ತದೆ.
ಸಂಗಮೇಶ್ವರಂ ಅನ್ನು ಶ್ರೀಶೈಲಕ್ಕೆ 'ವಾಯುವ್ಯ ದ್ವಾರಂ' ಎಂದು ಪರಿಗಣಿಸಲಾಗುತ್ತದೆ. ಇದು ಕೃಷ್ಣ, ವೇಣಿ, ತುಂಗಭದ್ರಾ, ಬೀಮರಾಧಿ, ಮಲಾಪಹಾರಿಣಿ, ಸಂಗಮೇಶ್ವರ ಮತ್ತು ಭವನಸಾನಿ ಎಂಬ ಏಳು ನದಿಗಳ ಸಂಗಮ ಸ್ಥಳವಾಗಿದೆ. ಈ ಕ್ಷೇತ್ರವು ಸೂರ್ಯ, ಮೃತ್ಯುಂಜಯ, ಸರಸ್ವತಿ, ಸುಬ್ರಹ್ಮಣ್ಯ ಸ್ವಾಮಿ, ಆಂಜನೇಯ ಸ್ವಾಮಿ ಮತ್ತು ನರಸಿಂಹ ಸ್ವಾಮಿಯ ದೇವಾಲಯಗಳನ್ನು ಸಹ ಹೊಂದಿದೆ.
ಇನ್ನು, ಶ್ರೀಶೈಲಂ ಜಲಾಶಯದಲ್ಲಿ ಭಾನುವಾರ ನೀರಿನ ಮಟ್ಟದಲ್ಲಿ ನಿರಂತರ ಏರಿಕೆ ದಾಖಲಾಗಿದೆ. ಪ್ರಸ್ತುತ ಮೇಲ್ದಂಡೆ ಪ್ರದೇಶಗಳಿಂದ 1.10 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಸದ್ಯಕ್ಕೆ ಶ್ರೀಶೈಲದಲ್ಲಿ ನೀರಿನ ಮಟ್ಟ 846.2 ಅಡಿ ಇದ್ದು, 72ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕೃಷ್ಣಾ ನದಿಯ ಜುರಾಲಾ ಯೋಜನೆ ಮತ್ತು ತುಂಗಭದ್ರಾ ನದಿಯ ಸುಂಕೇಶಲ ಯೋಜನೆಗಳ ನಿರಂತರ ಒಳಹರಿವಿನಿಂದಾಗಿ ನೀರಿನ ಮಟ್ಟ ಏರಿಕೆಯಾಗಿದೆ.
ಮೂರು ದಿನಗಳ ಹಿಂದೆ ನೀರಿನ ಮಟ್ಟ 33.57ಟಿಎಂಸಿ ದಾಖಲಾಗಿತ್ತು. ಆದರೆ, ಶನಿವಾರ ತಡರಾತ್ರಿ ಒಳಹರಿವು 1.55 ಲಕ್ಷ ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದು, ತೆಲುಗು ಗಂಗಾ, ಎಸ್‌ಆರ್‌ಬಿಸಿ, ಕೆಸಿ ಕಾಲುವೆಗಳಂತಹ ವಿವಿಧ ಯೋಜನೆಗಳಡಿ ನೀರಾವರಿಗೆ ಒಳಪಡುವ ಸಾಧ್ಯತೆಗಳ ಬಗ್ಗೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಜಲಾಶಯಗಳಲ್ಲಿ ನೀರಿನ ಕೊರತೆಯ ಕಾರಣ ಭತ್ತದಂತಹ ಸಾಮಾನ್ಯ ಬೆಳೆಗಳನ್ನು ಹೊರತುಪಡಿಸಿ ಬೇರೆ ಬೆಳೆಗಳನ್ನು ಹಾಕುವಂತೆ ಜಿಲ್ಲಾಡಳಿತ ತಿಳಿಸಿದೆ.
ಕೋತಪಲ್ಲಿ, ರುದ್ರಾವರಂ, ನಂದಿಕೊಟ್ಕೂರು, ಪಾಮುಲಪಾಡು ಮತ್ತು ಶ್ರೀಶೈಲಂ ಮುಂತಾದ ಪ್ರದೇಶಗಳು ಮಳೆಯ ಕೊರತೆಯ ಪರಿಸ್ಥಿತಿಯನ್ನು ಎದುರಿಸಿವೆ. ಆತ್ಮಕೂರು, ಜುಪಾಡು ಬಂಗಲೆ, ಸಿರಿವೇಲ್, ಅಲ್ಲಗಡ್ಡ, ಚಗಲಮರ್ರಿ ಮುಂತಾದ ಕಡೆಗಳಲ್ಲೂ ಮಳೆಯ ಕೊರತೆ ಎದುರಾಗಿದೆ. ನೈಋತ್ಯ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ವಾಡಿಕೆ 217.1ಮಿಮೀ ಮಳೆಯಾಗಿಂತ ಈ ಬಾರಿ 225.4ಮಿಮೀ ಮಳೆಯಾಗಿದೆ.












Click it and Unblock the Notifications