Tirupti: ತಿರುಪತಿ ಕಾಲ್ತುಳಿತ ಪ್ರಕರಣ; ಸಿಎಂ ಚಂದ್ರಬಾಬು ನಾಯ್ಡು, ಡಿಸಿಎಂ ಪವನ್ ಕಲ್ಯಾಣ್ ಹೇಳಿದ್ದೇನು?
ತಿರುಪತಿ ತಿರುಮಲ ದೇವಸ್ಥಾನದಲ್ಲಿ ಕಾಲ್ತುಳಿತ ಪ್ರಕರಣದಲ್ಲಿ ಆರು ಜನರು ಮೃತಪಟ್ಟ ಘಟನೆ ಜನಾಕ್ರೋಶಕ್ಕೆ ಕಾರಣವಾಗಿದೆ. ಲಕ್ಷಾಂತರ ಮಂದಿ ಪ್ರತಿದಿನ ಭೇಟಿ ನೀಡುವ ದೇವಸ್ಥಾನದಲ್ಲಿ ಜನರನ್ನು ನಿಯಂತ್ರಿಸಲು ಅಧಿಕಾರಿಗಳು ವಿಫಲವಾಗಿದ್ದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಘಟನೆ ಸಂಬಂಧ ಇದೀಗ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ಡಿಸಿಎಂ ಪವನ್ ಕಲ್ಯಾಣ್ ಬೇರೆ ಬೇರೆ ಹೇಳಿಕೆ ನೀಡಿರುವುದು ಗೊಂದಲ ಮೂಡಿಸಿದೆ.
ಘಟನೆಗೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿರುವ ಸರ್ಕಾರ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇತರ ಇಬ್ಬರನ್ನು ಅಮಾನತುಗೊಳಿಸಿ ಆದೇಶ ನೀಡಿದ್ದರೆ, ತಿರುಮಲ ತಿರುಪತಿ ದೇವಸ್ಥಾನದ ಇಒ ಶ್ಯಾಮಲಾ ರಾವ್ ಮತ್ತು ಎಇಒ ವೆಂಕಣ್ಣ ಚೌಧರಿ ಕಾಲ್ತುಳಿತಕ್ಕೆ ಕಾರಣ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

ತಿರುಮಲ ವೈಕುಂಠ ದ್ವಾರದಲ್ಲಿ ದರ್ಶನ ಟೋಕನ್ ನೀಡುವ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಆರು ಜನ ಮೃತಪಟ್ಟಿದ್ದಾರೆ. ದೇಶಾದ್ಯಂತ ಭಕ್ತರು ಭೇಟಿ ನೀಡುವ ದೇವಸ್ಥಾನದಲ್ಲಿ ಇಂತಹ ಘಟನೆ ನಡೆದಿರುವುದು ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದೆ.
ಕಾಲ್ತುಳಿತ ಸಂಭವಿಸಿದ ಸ್ಥಳಕ್ಕೆ ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಭೇಟಿ ನೀಡಿದ್ದು, ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಸ್ವಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಸಿದರು. ಘಟನೆಗೆ ಟಿಟಿಡಿ ಇಒ ಶ್ಯಾಮಲಾ ರಾವ್ ಮತ್ತು ಎಇಒ ವೆಂಕಣ್ಣ ಚೌಧರಿ ಅವರೇ ಸಂಪೂರ್ಣ ಹೊಣೆ ಎಂದು ಪವನ್ ಕಲ್ಯಾಣ್ ಆರೋಪಿಸಿದ್ದಾರೆ.
ಈ ದುರ್ಘಟನೆಗೆ ಅವರಿಬ್ಬರು ಹೊಣೆಗಾರರು ಎಂದು ಹೇಳಿದರು. ಪೊಲೀಸರು ಸಂಪೂರ್ಣವಾಗಿ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು. ಟಿಟಿಡಿಯಲ್ಲಿ ಶುದ್ಧೀಕರಣ ಮಾಡುವ ಅಗತ್ಯವಿದೆ ಎಂದು ಅವರು ಹೇಳಿದರು. ಕೆಲವು ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಇದನ್ನು ಮಾಡಿದ್ದಾರೆ ಎನ್ನುವ ದೂರುಗಳು ಬಂದಿವೆ. ಕಳೆದುಹೋದ ಜೀವಗಳನ್ನು ಮರಳು ತರಲು ಸಾಧ್ಯವಿಲ್ಲ, ಪ್ರಮಾದ ನಡೆದಿದೆ ಎಂದು ಪವನ್ ಜನರ ಕ್ಷಮೆ ಕೇಳಿದರು.
ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದೇನು
ಘಟನೆಗೆ ಕಾರಣರಾದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ನಿರ್ಲಕ್ಷ್ಯ ತೋರಿದ ಡಿಎಸ್ಪಿ ರಮಣ ಕುಮಾರ್ ಮತ್ತು ಗೋಶಾಲೆಯ ನಿರ್ದೇಶಕ ಹರನಾಥ್ ರೆಡ್ಡಿ ಅವರನ್ನು ಅಮಾನತುಗೊಳಿಸಲಾಗಿದ್ದು, ಎಸ್ಪಿ ಸುಬ್ಬರಾಯುಡು, ಜೆಇಒ ಗೌತಮಿ ಮತ್ತು ಸಿಎಸ್ಒ ಶ್ರೀಧರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ತಿರುಪತಿ ಘಟನೆ ಬಗ್ಗೆ ಸಿಎಂ ಮತ್ತು ಡಿಸಿಎಂ ಹೇಳಿಕೆಯಲ್ಲಿ ಸ್ಪಷ್ಟ ವ್ಯತ್ಯಾಸ ಕಂಡುಬಂದಿದೆ. ಯಾವ ಅಧಿಕಾರಿಗಳ ವಿರುದ್ಧ ಡಿಸಿಎಂ ಪವನ್ ಕಲ್ಯಾಣ್ ಆರೋಪ ಮಾಡಿದ್ದಾರೋ ಅವರನ್ನು ಸಿಎಂ ಚಂದ್ರಬಾಬು ನಾಯ್ಡು ಅಮಾನತು ಮಾಡಿಲ್ಲ ಎನ್ನುವುದು ಗಮನಾರ್ಹ ಸಂಗತಿಯಾಗಿದೆ.












Click it and Unblock the Notifications