ಎನ್‌ಡಿಎ ನಾಯಕರ ಜೊತೆ ಮೇ 21ರಂದು ಅಮಿತ್ ಶಾ ಭೋಜನ ಕೂಟ
ಬೆಂಗಳೂರು, ಮೇ 20 : ಲೋಕಸಭಾ ಚುನಾವಣೆ 2019ರ ಚುನಾವಣೋತ್ತರ ಸಮೀಕ್ಷೆ ಬಿಜೆಪಿಯಲ್ಲಿ ಉತ್ಸಾಹ ಹೆಚ್ಚಿಸಿದೆ. ಬಹುತೇಕ ಸಮೀಕ್ಷೆಗಳು ಎನ್‌ಡಿಎ ಮತ್ತೆ ಸರ್ಕಾರ ರಚನೆ ಮಾಡಲಿವೆ ಎಂದು ಹೇಳಿದೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮೇ 21ರಂದು ಎನ್‌ಡಿಎ ಮೈತ್ರಿಕೂಟದ ನಾಯಕರಿಗೆ ಭೋಜನ ಕೂಟ ಆಯೋಜನೆ ಮಾಡಿದ್ದಾರೆ. ಹಲವಾರು ಕೇಂದ್ರ ಸಚಿವರು ಸಹ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಭಾನುವಾರ ಪ್ರಕಟವಾದ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಎನ್‌ಡಿಎ ಕೇಂದ್ರದಲ್ಲಿ ಮತ್ತೆ ಅಧಿಕಾರ ಹಿಡಿಯಬಹುದು ಎಂಬ ಫಲಿತಾಂಶ ಬಂದಿದೆ. ಆದ್ದರಿಂದ, ಅಮಿತ್ ಶಾ ಅವರು ಎನ್‌ಡಿಎ ನಾಯಕರ ಸಭೆಯನ್ನು ಕರೆದಿದ್ದಾರೆ.

ಮತ್ತೊಂದು ಕಡೆ ಮೇ 23ರಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮೈತ್ರಿಕೂಟ ನಾಯಕರ ಸಭೆ ಕರೆದಿದ್ದಾರೆ. ಅದಕ್ಕೂ ಮೊದಲು ಅಮಿತ್ ಶಾ ಅವರು ಸಭೆ ಕರೆದಿದ್ದಾರೆ. ಮೇ 23ರ ಫಲಿತಾಂಶದ ಬಳಿಕದ ಬೆಳವಣಿಗೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.
ಇಂಡಿಯಾ ಟುಡೇ, ಚಾಣಾಕ್ಯ, ಸಿಎನ್‌ಎನ್ ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎ ಮೈತ್ರಿಕೂಟ 300 ಸ್ಥಾನಗಳನ್ನುಗಳಿಸಬಹುದು ಎಂದು ಹೇಳಿವೆ. ಚುನಾವಣೋತ್ತರ ಸಮೀಕ್ಷೆ ಪ್ರಕಟವಾದ ತಕ್ಷಣ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ.











Click it and Unblock the Notifications