ಚುನಾವಣೆ ಕುರಿತ ಎಲ್ಲಾ ದಾಖಲೆ ಇನ್ನು ಜನರಿಗೆ ಲಭ್ಯವಿರಲ್ಲ
ನವದೆಹಲಿ, ಡಿಸೆಂಬರ್ 21: ಕೇಂದ್ರ ಸರ್ಕಾರ ಚುನಾವಣಾ ನಿಯಮಗಳಿಗೆ ಕೆಲವೊಂದು ತಿದ್ದುಪಡಿಗಳನ್ನು ತಂದಿದೆ. ಈ ತಿದ್ದುಪಡಿಗಳ ಬಳಿಕ ಸಾರ್ವಜನಿಕರಿಗೆ ಈ ಹಿಂದೆ ಸಿಗುತ್ತಿದ್ದ ಚುನಾವಣೆ ಕುರಿತು ಕೆಲವು ದಾಖಲೆ, ಕಡತಗಳನ್ನು ಪರಿಶೀಲನೆ ಮಾಡದಂತೆ ನಿರ್ಬಂಧ ವಿಧಿಸಲಾಗುತ್ತದೆ. ಇನ್ನು ಮುಂದೆ ಚುನಾವಣೆ ಕುರಿತು ನಿರ್ದಿಷ್ಟ ದಾಖಲೆ, ಕಡತಗಳನ್ನು ಮಾತ್ರ ಜನರು ಪರಿಶೀಲಿಸಬಹುದಾಗಿದೆ.
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಚುನಾವಣಾ ನಿಯಮಗಳಿಗೆ ಕೆಲವೊಂದು ತಿದ್ದುಪಡಿಗಳನ್ನು ತಂದಿದೆ ಎಂದು ಪಿಟಿಐ ವರದಿ ಮಾಡಿದೆ. 1961ರ ಚುನಾವಣಾ ನಿಯಮದ 93 (2) (ಎ) ಅನ್ವಯ ಚುನಾವಣೆ ಸಂಬಂಧಿತ ಎಲ್ಲಾ ದಾಖಲೆಗಳು ಸಾರ್ವಜಿಕರಿಗೆ ಮುಕ್ತವಾಗಿತ್ತು. ಆದರೆ ಈಗ ಈ ನಿಯಮಗಳಿಗೆ ತಿದ್ದುಪಡಿಯನ್ನು ತರಲಾಗಿದೆ.

ಎಲ್ಲಾ ದಾಖಲೆಗಳು ಲಭ್ಯವಿಲ್ಲ: ಚುನಾವಣೆಗೆ ಸಂಬಂಧಿತ ನಿಯಮಗಳ ತಿದ್ದುಪಡಿ ಕಾರಣ ಇನ್ನು ಮುಂದೆ ಎಲ್ಲಾ ದಾಖಲೆಗಳನ್ನು ಜನರು ಪಡೆಯುವಂತಿಲ್ಲ. ನಿಯಮಾವಳಿಗಳಲ್ಲಿ ಪಟ್ಟಿ ಮಾಡಿರುವ ದಾಖಲೆಗಳನ್ನು ಮಾತ್ರ ಜನರು ಪಡೆಯಬಹುದು. ಚುನಾವಣಾ ಆಯೋಗದ ಜೊತೆ ಸಮಾಲೋಚನೆ ನಡೆಸಿದ ಬಳಿಕ ಈ ತಿದ್ದುಪಡಿ ಮಾಡಲಾಗಿದೆ ಎಂದು ವರದಿಯಲ್ಲಿ ಹೇಳಿದೆ.
ಈ ನಿಯಮ ತಿದ್ದುಪಡಿಯ ಕಾರಣಕ್ಕೆ ಇನ್ನು ಮುಂದೆ ಕೋರ್ಟ್‌ಗಳು ಚುನವಣಾ ಸಂಬಂಧಿತ ದಾಖಲೆಗಳನ್ನು ಜನರಿಗೆ ನೀಡಿ ಎಂದು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಸಹ ಸಾಧ್ಯವಿಲ್ಲ. ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಡಿಸೆಂಬರ್ 9ರಂದು ನೀಡಿದ್ದ ಆದೇಶದ ಬಳಿಕ ಈ ಬದಲಾವಣೆ ಮಾಡಲಾಗಿದೆ ಎಂದು ಈಗ ಚರ್ಚೆಗಳು ನಡೆದಿವೆ.
ಹರ್ಯಾಣ ವಿಧಾನಸಭೆ ಚುನಾವಣೆ ಕುರಿತ ವಿಡಿಯೋ ಚಿತ್ರೀಕರಣ, ಭದ್ರತಾ ಕ್ಯಾಮರಾಗಳ ದೃಶ್ಯಗಳು, ಮತಗಟ್ಟೆಯಲ್ಲಿ ಚಲಾವಣೆಯಾದ ಮತಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಕೀಲರಿಗೆ ನೀಡಬೇಕು ಎಂದು ಹೈಕೋರ್ಟ್ ಆಯೋಗಕ್ಕೆ ಸೂಚನೆ ನೀಡಿತ್ತು.
ವಕೀಲ ಮೊಹಮೊದ್ ಪ್ರಾಚಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, "ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ನಾವು ಪ್ರತಿಕೂಲ ಸ್ಥಿತಿಯಲ್ಲಿ ಹೋರಾಟ ಮಾಡಬೇಕಿದೆ. ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸಲು ನಾವು ಕಾನೂನು ಮಾರ್ಗಗಳು ಸೇರಿದಂತೆ ನಮ್ಮದೇ ಆದ ವಿಧಾನಗಳನ್ನು ಹೊಂದಿದ್ದೇವೆ" ಎಂದು ಹೇಳಿದ್ದಾರೆ.
ಚುನಾವಣಾ ಆಯೋಗ ಮೊಹಮೊದ್ ಪ್ರಾಚಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರಲಿಲ್ಲ. ಆದ್ದರಿಂದ ಅವರು ಚುನಾವಣೆ ಕುರಿತ ದಾಖಲೆಗಳನ್ನು ನೀಡುವಂತೆ ಕೋರುವಂತಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗೆ ಉಚಿತವಾಗಿ ದಾಖಲೆಗಳನ್ನು ನೀಡಬಹುದು. ಇತರ ವ್ಯಕ್ತಿಗಳಿಗೆ ಶುಲ್ಕವನ್ನು ಪಡೆದು ದಾಖಲೆ ನೀಡಬೇಕಾಗುತ್ತದೆ ಎಂದು ಕೋರ್ಟ್‌ನಲ್ಲಿ ವಾದ ಮಂಡಿಸಿತ್ತು.
ಸದ್ಯದ ಮಾಹಿತಿ ಪ್ರಕಾರ ಅಭ್ಯರ್ಥಿ ನಾಮಪತ್ರ, ಚುನಾವಣಾ ಏಜೆಂಟ್‌ಗಳ ನೇಮಕ, ಫಲಿತಾಂಶ ಮತ್ತು ಚುನಾವಣಾ ಖರ್ಚಿನ ವಿವರ ಮುಂತಾದ ಮಾಹಿತಿಯನ್ನು ತಿದ್ದುಪಡಿಯಲ್ಲಿ ಉಲ್ಲೇಖಿಸಿದ್ದು, ಇವುಗಳನ್ನು ಜನರು ಪರಿಶೀಲಿಸಬಹುದು.
ಆದರೆ ಸಿಸಿಟಿವಿ ಕ್ಯಾಮರಾಗಳ ದೃಶ್ಯಗಳು, ವೆಬ್ ಕಾಸ್ಟಿಂಗ್ ದೃಶ್ಯಾವಳಿ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಅಭ್ಯರ್ಥಿಗಳ ವಿಡಿಯೋ ರೆಕಾರ್ಡ್ ಸೇರಿ ಇನ್ನೂ ಹಲವು ದಾಖಲೆಗಳ ಪರಿಶೀಲನೆಗೆ ನಿರ್ಬಂಧವಿರುತ್ತದೆ.
ಈ ಕುರಿತು ಕಾಂಗ್ರೆಸ್ ಪಕ್ಷ ಸಹ ಪ್ರತಿಕ್ರಿಯಿಸಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, "ಚುನಾವಣಾ ಆಯೋಗ ಪಾರದರ್ಶಕ ವ್ಯವಸ್ಥೆಗೆ ಹೆದರಿದೆ. ಈ ತಿದ್ದುಪಡಿ ವಿರುದ್ಧ ನಾನು ಕಾನೂನು ಪ್ರಕಾರವೇ ಹೋರಾಟ ನಡೆಸುತ್ತೇವೆ" ಎಂದು ಹೇಳಿದ್ದಾರೆ.












Click it and Unblock the Notifications