'ಕಮರ್ಷಿಯಲ್ ಕೋಲ್ ಬ್ಲಾಕ್ಸ್ ಹರಾಜಿನಿಂದ ಕಲ್ಲಿದ್ದಲು ಕೊರತೆ ನಿವಾರಣೆ'
ನವದೆಹಲಿ, ನ.03 : ಕೇಂದ್ರ ಸರ್ಕಾರ ಗುರುವಾರ 6ನೇ ಹಂತದ ಕಲ್ಲಿದ್ದಲು ಹರಾಜು ಪ್ರಕ್ರಿಯೆ ಪ್ರಾರಂಭಿಸಿದ್ದು, ಕಲ್ಲಿದ್ದಲು ಗಣಿಗಾರಿಕೆ ಕ್ಷೇತ್ರವನ್ನು ಖಾಸಗಿ ಕ್ಷೇತ್ರಕ್ಕೆ ಅನ್‌ಲಾಕ್ ಮಾಡುವ ಈ ನಿರ್ಧಾರ ಒಂದು ಮೈಲಿಗಲ್ಲು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಜೊತೆಗೆ ಸಚಿವ ಪ್ರಹ್ಲಾದ್ ಜೋಶಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ಒಟ್ಟು 141 ಕಮರ್ಷಿಯಲ್ ಕಲ್ಲಿದ್ದಲು ಬ್ಲಾಕ್ಸ್ ಗಳ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸಾಥ್ ನೀಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಮರ್ಷಿಯಲ್ ಕಲ್ಲಿದ್ದಲು ಹರಾಜು ಲಾಂಚ್ ಮಾಡಿದರು.
6 ನೇ ಹಂತದ 133 ಬ್ಲಾಕ್ಸ್ ಹಾಗೂ 5 ನೇ ಹಂತದ ಸೆಕೆಂಡ್ ಅಟೆಮ್ಟ್‌ನ 8 ಬ್ಲಾಕ್ಸ್‌ಗಳನ್ನ ಖಾಸಗಿ ವಲಯಕ್ಕೆ ಹರಾಜಿಗಿಡಲಾಯಿತು. ಗುರುವಾರ ಒಟ್ಟು 67 ಕಮರ್ಷಿಯಲ್ ಕಲ್ಲಿದ್ದಲು ಬ್ಲಾಕ್ಸ್ ಹರಾಜಾಗಿವೆ ಎಂದು ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

ಕೋಲ್ ಗ್ಯಾಸಿಫಿಕೇಶನ್ ಪ್ರಾಜೆಕ್ಟ್‌ಗೆ 6 ಸಾವಿರ ಕೋಟಿ ಅನುದಾನ
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ, ಕಮರ್ಷಿಯಲ್ ಕಲ್ಲಿದ್ದಲು ಹರಾಜಿನಿಂದ ಪ್ರಸಕ್ತ ಸಾಲಿನಲ್ಲಿ ಖಾಸಗಿ ವಲಯದಿಂದ 5 ಮಿಲಿಯನ್ ಮೆಟ್ರಿಕ್ ಟನ್ ನಷ್ಟು ಕಲ್ಲಿದ್ದಲು ಉತ್ಪಾದನೆಯಾಗಲಿದೆ ಎಂದರು. ಅಲ್ಲದೇ ಮುಂದಿನ ಸಾಲಿನಲ್ಲಿ 10 ರಿಂದ 15 ಮಿಲಿಯನ್ ಮೆಟ್ರಿಕ್ ಟನ್ ಕಮರ್ಷಿಯಲ್ ಕಲ್ಲಿದ್ದಲು ಉತ್ಪಾದನೆಯಾಗುವ ನಿರೀಕ್ಷೆಯಿದೆ. ನಮಗೆ 12 ಮಿಲಿಯನ್ ಮೆಟ್ರಿಕ್ ಟನ್ ಕಲ್ಲಿದ್ದಲು ಕೊರತೆಯಿತ್ತು. ಇದೀಗ ಕಮರ್ಷಿಯಲ್ ಕಲ್ಲಿದ್ದಲು ಬ್ಲಾಕ್ಸ್ ಗಳಿಂದ ಈ ಕೊರತೆ ನಿವಾರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೋಲ್ ಗ್ಯಾಸಿಫಿಕೇಶನ್ ಪ್ರಾಜೆಕ್ಟ್‌ಗೆ ಹಣಕಾಸು ಸಚಿವಾಲಯ 6 ಸಾವಿರ ಕೋಟಿ ಅನುದಾನ ಮೀಸಲಿರಿಸಿದ್ದಕ್ಕೆ ಪ್ರಹ್ಲಾದ್ ಜೋಶಿ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ ಸಲ್ಲಿಸಿದರು.

ಪ್ರಹ್ಲಾದ್ ಜೋಶಿ ಕಾರ್ಯ ಶ್ಲಾಘನೀಯ; ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಕಮರ್ಷಿಯಲ್ ಕಲ್ಲಿದ್ದಲು ಬ್ಲಾಕ್ಸ್ ಹರಾಜು ಪ್ರಕ್ರಿಯೆ ವೇಗವಾಗಿ ನೆರವೇರಿಸುವಲ್ಲಿ ಪ್ರಹ್ಲಾದ್ ಜೋಶಿ ಅವರ ಕಾರ್ಯ ಶ್ಲಾಘನೀಯ ಎಂದರು. ಭಾರತ ಅತಿ ಹೆಚ್ಚು ಕಲ್ಲಿದ್ದಲು ಹೊಂದಿದ್ದರೂ, ಹಿಂದಿನ ಸರ್ಕಾರಗಳ ನೀತಿಯಿಂದ ನಮ್ಮ ಸಾಮರ್ಥ್ಯಕ್ಕೆ ತಕ್ಕ ಕಲ್ಲಿದ್ದಲು ಉತ್ಪಾದನೆ ಆಗುತ್ತಿರಲಿಲ್ಲ. ಆದರೆ ಕಮರ್ಷಿಯಲ್ ಕಲ್ಲಿದ್ದಲು ಹರಾಜಿನ ಮೂಲಕ ಕೋಲ್ ಪ್ರೊಡಕ್ಷನ್ ಹೆಚ್ಚಿಸುವತ್ತ ಪ್ರಹ್ಲಾದ್ ಜೋಶಿ ಹೆಜ್ಜೆಯಿಟ್ಟಿದ್ದಾರೆ ಎಂದರು.

ಮೋದಿ ಸರ್ಕಾರದಲ್ಲಿ ಕಲ್ಲಿದ್ದಲು ಆಮದು ಶೇ 2% ಕ್ಕೆ ಇಳಿಕೆ
"ಯುಪಿಎ-2 ಸರ್ಕಾರವಿದ್ದಾಗ ಸಿಎಜಿಆರ್ ನಲ್ಲಿ ಕಲ್ಲಿದ್ದಲು ಆಮದು ಶೇ 23% ರಷ್ಟಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಬಂದ ಬಳಿಕ ಪ್ರಸ್ತುತ ಸಿಎಜಿಆರ್ ನಲ್ಲಿ ಕಲ್ಲಿದ್ದಲು ಆಮದು ಶೇ 2% ಕ್ಕೆಇಳಿಸಲಾಗಿದೆ. ಇದರಲ್ಲಿ ಪ್ರಹ್ಲಾದ್ ಜೋಶಿ ಹಾಗೂ ಕಲ್ಲಿದ್ದಲು ಸಚಿವಾಲಯ ಸಾಕಷ್ಟು ಶ್ರಮವಹಿಸಿದೆ" ಎಂದು ನಿರ್ಮಲಾ ಸೀತಾರಾಮನ್ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತ ಹೊರದೇಶಗಳಿಗೆ ರಫ್ತು ಮಾಡುವಷ್ಟು ಕಲ್ಲಿದ್ದಲು ಹೊಂದಿದ್ದರೂ, ಹಿಂದಿನ ಸರ್ಕಾರಗಳ ನೀತಿಯಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿಗೆ ತಂದಿಟ್ಟಿದ್ದಾರೆ. ಕಲ್ಲಿದ್ದಲು ಕ್ಷೇತ್ರವನ್ನ ಖಾಸಗಿ ಕ್ಷೇತ್ರಕ್ಕೆ ಅನ್ ಲಾಕ್ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ಮಾರ್ಗದರ್ಶನ ಮಾಡಿದರು ಎಂದು ಹೇಳಿದರು.

ಕಲ್ಲಿದ್ದಲು ಹರಾಜಿನಿಂದ ದೇಶದ 11 ರಾಜ್ಯಗಳಿಗೆ ಲಾಭ
ಕಮರ್ಷಿಯಲ್ ಕಲ್ಲಿದ್ದಲು ಹರಾಜಿನಿಂದ ದೇಶದ 11 ರಾಜ್ಯಗಳಿಗೆ ಹೆಚ್ಚಿನ ಲಾಭ ದೊರೆಯಲಿದೆ. ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ವಿಶೇಷವಾಗಿ ಕಲ್ಲಿದ್ದಲು ಗ್ಯಾಸಿಫಿಕೇಶನ್ ನತ್ತ ಹೆಚ್ಚಿನ ಗಮನ ಹರಿಸಬೇಕಾಗಿದೆ. ಕಲ್ಲಿದ್ದಲಿನಿಂದ ಗ್ಯಾಸ್ ತಯಾರಿಕೆಯನ್ನ ಭಾರತ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕಲ್ಲಿದ್ದಲು ಸಚಿವಾಲಯ ಮಹತ್ವದ ಹೆಜ್ಜೆಯಿಟ್ಟಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯ ವ್ಯಕ್ತಪಡಿಸಿದರು.












Click it and Unblock the Notifications