ಜನ ಸಾಮಾನ್ಯರ ಪಕ್ಷದಲ್ಲಿದೆ ಕೋಟಿಗಟ್ಟಲೆ ಫಂಡ್
ನವದೆಹಲಿ, ಸೆ.30: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸಮಾಜದ ವಿವಿಧ ಸ್ತರದಲ್ಲಿರುವ ವ್ಯಕ್ತಿಗಳಿಂದ ಪಕ್ಷಕ್ಕಾಗಿ ದೇಣಿಗೆ ಪಡೆದಿದ್ದು, ಅನಿವಾಸಿ ಭಾರತೀಯರು, ರಿಕ್ಷಾವಾಲಾಗಳು ಮತ್ತು ವ್ಯಾಪಾರಿಗಳಿಂದ ಈವರೆಗೆ 12 ಕೋಟಿ ರೂ. ದೇಣಿಗೆ ಸ್ವೀಕರಿಸಿದೆ ಎಂದು ತಿಳಿದು ಬಂದಿದೆ.
ಅರವಿಂದ್ ಕೇಜ್ರಿವಾಲ ಅವರ ಜನ ಸಾಮಾನ್ಯರ ಪಕ್ಷಕ್ಕೆ ಜನರು 10 ರು ನಿಂದ ಲಕ್ಷ ರು ತನಕ ದೇಣಿಗೆ ನೀಡಿದ್ದಾರೆ. ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಮೂಲಕ ಭ್ರಷ್ಟಾಚಾರ ತೊಲಗಿಸುವ ಬಗ್ಗೆ ಅರವಿಂದ್ ಕೇಜ್ರಿವಾಲ ಭರವಸೆ ನೀಡಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಸ್ಪ್ರರ್ಧಿಸಿ ಮುಕ್ತ ಆಡಳಿತ ನೀಡುವುದಕ್ಕಾಗಿ ಸಮಾಜದ ಎಲ್ಲ ಸ್ತರಗಳಿಂದ ದೇಣಿಗೆ ಸ್ವೀಕರಿಸಲಾಗಿದೆ. ನೆರವು ನೀಡಿದವರಲ್ಲಿ ಹೆಚ್ಚಿನವರು ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಿದ್ದಾರೆ. 6.20 ಕೋಟಿ ರೂ. ಭಾರತೀಯರು, ಉಳಿದಂತೆ ಅಮೆರಿಕ, ಹಾಂಕಾಂಗ್, ಕೆನಡಾ, ಆಸ್ಟ್ರೇಲಿಯಾ, ಸ್ವಿಜರ್ಲೆಂಡ್, ಅರಬ್ ಸಂಯುಕ್ತ ರಾಷ್ಟ್ರಗಳಿಂದ ದೇಣಿಗೆ ಬಂದಿರುವುದಾಗಿ ಆಮ್ ಆದ್ಮಿ ಪಕ್ಷ ಹೇಳಿದೆ.

"ಪಕ್ಷ ಸಂಗ್ರಹಿಸಿದ ದೇಣಿಗೆಯ ಎಲ್ಲ ವಿವರಗಳನ್ನೂ ಸಾರ್ವಜನಿಕರಿಗಾಗಿ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಹೆಚ್ಚಿನ ಪ್ರಮಾಣದ ದೇಣಿಗೆ ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರಿಂದ ಬಂದಿದೆ. ಮುಂಬರುವ ಚುನಾವಣೆಗಾಗಿ 20 ಕೋಟಿ ರೂ. ಸಂಗ್ರಹಿಸುವ ಗುರಿಯಿದೆ. ಮನೆಮನೆಗೆ ತೆರಳಿ ದೇಣಿಗೆ ಸಂಗ್ರಹಿಸುವ ಮೂಲಕ ಜನರ ಜತೆ ಸಂಪರ್ಕ ಸಾಧಿಸಲಾಗುತ್ತಿದೆ" ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಪ್ರತಿದಿನ ವಿವಿಧ ಮೂಲಗಳಿಂದ ಸುಮಾರು 10 ಲಕ್ಷ ರು ನಂತೆ ದೇಣಿಗೆ ಬರುತ್ತಿದೆ. ಎಲ್ಲಕ್ಕೂ ಸರಿಯಾದ ಲೆಕ್ಕ ಇಡಲಾಗಿದೆ. ಚುನಾವಣೆ ಇನ್ನೂ ಸಮಯವಿದ್ದು ಸುಮಾರು 20 ಕೋಟಿ ರು ಸಂಗ್ರಹದ ನಿರೀಕ್ಷೆಯಿದೆ. ಮನೆ ಮನೆಗೂ ತೆರಳಿ ದೇಣಿಗೆ ಸಂಗ್ರಹಿಸಿದ್ದು ಫಲ ನೀಡಿದೆ. ಇದರಿಂದ ಜನರ ಜತೆ ನೇರ ಸಂಪರ್ಕ, ಸಂಬಂಧ ಬೆಳೆದಿದೆ ಎಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹೇಳಿದ್ದಾರೆ.
ಹಾಂಗ್ ಕಾಂಗ್ ನ ಎನ್ನಾರೈಯೊಬ್ಬರು 50 ಲಕ್ಷ ರು ದೇಣಿಗೆ ನೀಡಿದ್ದಾರೆ. ದೇಣಿಗೆ ಸಂಗ್ರಹದ ಶೇ 12 ರಷ್ಟು ಎನ್ನಾರೈಗಳಿಂದ ಬಂದಿದ್ದು ಒಟ್ಟಾರೆ 4000ಕ್ಕೂ ಅಧಿಕ ದಾನಿಗಳನ್ನು ಗುರುತಿಸಲಾಗಿದೆ ಎಂದು ಜನ ಸಾಮಾನ್ಯರ ಪಕ್ಷದ ವಕ್ತಾರರು ಹೇಳಿದ್ದಾರೆ. (ಪಿಟಿಐ)












Click it and Unblock the Notifications