7th Pay Commission: ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಡಿಎ ಹೆಚ್ಚಳ- ಕೇಂದ್ರದಿಂದ ಭರ್ಜರಿ ಗಿಫ್ಟ್, ಅಂಕಿಅಂಶ, ಮಾಹಿತಿ, ವಿವರ
ನವದೆಹಲಿ, ಅಕ್ಟೋಬರ್ 18: ಕೇಂದ್ರ ಸರ್ಕಾರದ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ (Dearness Allowance) ಮತ್ತು ತುಟ್ಟಿ ಪರಿಹಾರ ( Dearness Relief ) ಹೆಚ್ಚಳಕ್ಕೆ ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಶೇ 4ರಷ್ಟು ಡಿಎ ಮತ್ತು ಡಿಆರ್ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಹಸಿರು ನಿಶಾನೆ ತೋರಿಸಿದೆ ಎಂದು ವರದಿಯಾಗಿದೆ. ಕೇಂದ್ರ ಸಚಿವ ಸಂಪುಟ ಸಭೆಯ ನಂತರ ಅನುಮೋದನೆ ದೊರೆಯಲಿದೆ ಎಂದು ತಿಳಿದುಬಂದಿದೆ.

ಈ ಅನುಮೋದನೆ ಬಳಿಕ ಕೇಂದ್ರ ಸರ್ಕಾರಿ ನೌಕರರ ಡಿಎ ಶೇ. 42ರಿಂದ ಶೇ. 46ಕ್ಕೆ ಏರಲಿದೆ. ಪಿಂಚಣಿದಾರರ ಡಿಆರ್ ಸಹ ಶೇ. 42ರಿಂದ ಶೇ. 46ಕ್ಕೆ ಹೆಚ್ಚಾಗಲಿದೆ. ಜುಲೈ ತಿಂಗಳಿಂದ ಡಿಎ ಮತ್ತು ಡಿಆರ್ ಹೆಚ್ಚಳ ಅನ್ವಯಕ್ಕೆ ಬರಲಿದೆ.
ಕೇಂದ್ರ ಸರ್ಕಾರದ ಈ ಕ್ರಮವು ಗಮನಾರ್ಹ ಸಂಖ್ಯೆಯ ನೌಕರರು ಮತ್ತು ಪಿಂಚಣಿದಾರರಿಗೆ ಆರ್ಥಿಕವಾಗಿ ಕೊಂಚ ಮಟ್ಟಿಗೆ ರಿಲೀಫ್ ತರಲಿದೆ.
ಕೇಂದ್ರ ಸರ್ಕಾರದ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಒಂದು ಕೋಟಿಗೂ ಹೆಚ್ಚು ನೌಕರರು ಹಾಗೂ ಅವರ ಕುಟುಂಬಗಳಿಗೆ ನಿರಾಳತೆ ತಂದಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ದೇಶದಾದ್ಯಂತ 47 ಲಕ್ಷ ಉದ್ಯೋಗಿಗಳು ಹಾಗೂ 68 ಲಕ್ಷ ಪಿಂಚಣಿದಾರರಿದ್ದಾರೆ. ಇನ್ನು ಮುಂದೆ ಇವರೆಲ್ಲರಿಗೂ ಶೇ 46 ರಷ್ಟು ಡಿಎ/ಡಿಆರ್ ಸಿಗಲಿದೆ.

ಈಗ ಅನುಮೋದಿಸಲಾಗುವ ಡಿಎ ಹೆಚ್ಚಳವು ಜುಲೈ 1, 2023 ರಿಂದ ಅನ್ವಯವಾಗುತ್ತದೆ. ಇದರ ಪರಿಣಾಮವಾಗಿ, ಜುಲೈನಿಂದ ಅಕ್ಟೋಬರ್ ವರೆಗಿನ ಅವಧಿಯ ಬಾಕಿ ಹಣವನ್ನು ನವೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರಿ ನೌಕರರು ಪಡಯಬಹುದು.
ಹಬ್ಬದ ಋತುವಿನಲ್ಲಿ ನೀಡಿರುವ ಭರ್ಜರಿ ಗಿಫ್ಟ್ 47 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68 ಲಕ್ಷ ಪಿಂಚಣಿದಾರರಿಗೆ ಹೆಚ್ಚಿನ ಆರ್ಥಿಕ ನಿರಾಳತೆಯನ್ನು ತರಲಿದೆ. ಈ ಹೆಚ್ಚಳದಿಂದ ಸಂಬಳದ ಮೇಲೆ ಸ್ಪಷ್ಟ ಪರಿಣಾಮಗಳನ್ನು ಬೀರುತ್ತದೆ.
18,000 ಕನಿಷ್ಠ ಮೂಲ ವೇತನ ಹೊಂದಿರುವವರಿಗೆ, ಪ್ರಸ್ತುತ ಡಿಎ ( ಶೇ 42 ) ಮಾಸಿಕ ಆದಾಯ 7,560 ರೂ ಆಗಿರುತ್ತದೆ. ಹೊಸ ಡಿಎ ( ಶೇ 46 ) ಪ್ರಕಾರ, ಅವರ ಮಾಸಿಕ ವೇತನವು 8,280 ರೂ.ಗೆ ಹೆಚ್ಚಾಗುತ್ತದೆ.
ಅದೇ ರೀತಿ, 56,900 ರೂ.ಗಳ ಗರಿಷ್ಠ ಮೂಲ ವೇತನ ಹೊಂದಿರುವ ವ್ಯಕ್ತಿಗಳು, ಪ್ರಸ್ತುತ ಡಿಎ ( ಶೇ 42 ) ಮಾಸಿಕ ಗಳಿಕೆ 23,898 ರೂ. ಆಗಿರುತ್ತದೆ. ಹೊಸ ಡಿಎ ( ಶೇ 46 ) ಪ್ರಕಾರ, ಅವರ ಮಾಸಿಕ ವೇತನವು 26,174 ರೂ.ಗೆ ಹೆಚ್ಚಾಗುತ್ತದೆ.
ತುಟ್ಟಿಭತ್ಯೆ ಎಂದರೇನು?
ತುಟ್ಟಿಭತ್ಯೆಯು ( ಡಿಎ ) ನೌಕರರ ಸಂಬಳದ ಭಾಗವಾಗಿದೆ. ನೌಕರರ ಮೂಲ ಸಂಬಳಕ್ಕೆ ಶೇಕಡಾವಾರು ಲೆಕ್ಕಚಾರದಿಂದ ಡಿಎಯನ್ನು ಅಳೆಯಲಾಗುತ್ತದೆ. ಡಿಎ ಮೊತ್ತವನ್ನು ಮೂಲ ಸಂಬಳಕ್ಕೆ ಸೇರಿಸಲಾಗುತ್ತದೆ. ಆ ನಂತರ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ.
ಪ್ರತಿ ವರ್ಷದ ಬೆಲೆ ಏರಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡುವುದು ರೂಢಿಯಲ್ಲಿದೆ. ಇದರಿಂದ ನೌಕರರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಆಗುವುದಲ್ಲದೇ, ಅವರಿಗೆ ನಿರಾಳತೆಯನ್ನು ತರುತ್ತದೆ












Click it and Unblock the Notifications