ಹುಬ್ಬಳ್ಳಿ: ಅಸಮಾಧಾನ ನಡುವೆಯೂ ಬಿಜೆಪಿ ಮಹತ್ವದ ಸಭೆ, ಪ್ರದೀಪ್ ಶೆಟ್ಟರ್ ಗೈರು
ಹುಬ್ಬಳ್ಳಿ, ಸೆಪ್ಟೆಂಬರ್ 11: ವಿಧಾನ ಪರಿಷತ್ ಸದಸ್ಯ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಪ್ರದೀಪ್ ಶೆಟ್ಟರ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಭಾರತೀಯ ಜನತಾ ಪಕ್ಷದ ನಾಯಕರು ಅಲರ್ಟ್ ಆಗಿದ್ದು, ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ಮಹತ್ವದ ಕೋರ್ ಕಮಿಟಿ ಸಭೆ ಕರೆದಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಸಭೆ ಕರೆಯಲಾಗಿದ್ದು, ಇದಕ್ಕೂ ಪ್ರದೀಪ್ ಶೆಟ್ಟರ್ ಗೈರಾಗುತ್ತಿದ್ದಾರೆ. ಕೋರ್ ಕಮಿಟಿ ಸಭೆಗೆ ಆಹ್ವಾನವಿದ್ದರೂ ಅವರು ಬೇರೆಡೆ ಪ್ರವಾಸಕ್ಕೆ ತೆರಳಿದ್ದಾರೆ.

ಕಳೆದ ವಾರವಷ್ಟೇ ಪ್ರದೀಪ್ ಅವರು ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಅದಕ್ಕೂ ಮುನ್ನ ಭಾರತೀಯ ಜನತಾ ಪಕ್ಷದ ನಾಯಕ ಹಾಗೂ ಮಾಜಿ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಕೂಡ ಅಸಮಾಧಾನ ಹೊರಹಾಕಿದ್ದರು. ಪಕ್ಷದಲ್ಲಿ ಹಿರಿಯರು ಇಲ್ಲದಂತಾಗಿದೆ ಎಂದಿದ್ದರು. ಮುನೇನಕೊಪ್ಪ, ಪ್ರದೀಪ್ ಅಸಮಾಧಾನದ ಬೆನ್ನಲ್ಲೇ ಕೋರ್ ಕಮಿಟಿ ಸಭೆ ಕರೆಯಲಾಗಿದೆ. ಸಭೆಗೆ ಶಾಸಕರು, ಮಾಜಿ ಶಾಸಕರು, ಬಿಜೆಪಿ ಕಾರ್ಯಕರ್ತರಿಗೆ ಅಹ್ವಾನ ನೀಡಲಾಗಿದೆ.
ಇತ್ತೀಚೆಗೆ ವರದಿಗಾರರೊಂದಿಗೆ ಮಾತನಾಡಿದ್ದ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ 'ಭಾರತೀಯ ಜನತಾ ಪಕ್ಷದಲ್ಲಿ ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದರಿಂದ ಬೇಸತ್ತು ಸಮುದಾಯದ ಅನೇಕ ನಾಯಕರು ಬಿಜೆಪಿ ಪಕ್ಷದಿಂದ ಹೆಜ್ಜೆ ಹೊರಗಿಡುತ್ತಿದ್ದಾರೆ. ಪಕ್ಷದಲ್ಲಿ ನಾಯಕತ್ವದ ಕೊರತೆ ಇದ್ದಂತಿದೆ. ವಿರೋಧ ಪಕ್ಷದ ನಾಯಕನನ್ನು ಇನ್ನು ಆಯ್ಕೆ ಮಾಡಿಲ್ಲ. ಹೀಗಿದ್ದಾಗ ನಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳುವುದು ಎಂದು ಆಕ್ರೋಶ ಹೊರಹಾಕಿದ್ದರು.
ಇಂದಿನ ಕೋರ್ ಕಮಿಟಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ನಳೀನ್ ಕುಮಾರ ಕಟೀಲ್ ಬಂಡಾಯಗಾರರ ಕುರಿತು ಸಹ ಚರ್ಚೆ ಮಾಡಲಿದ್ದಾರೆ. ಅದಾದ ನಂತರ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರ ಕಾರ್ಯಾಲಯ ಉದ್ಘಾಟನೆ ಪೋಸ್ಟರ್ನಲ್ಲಿ ಪ್ರದೀಪ್ ಶೆಟ್ಟರ್ ಅವರ ಫೋಟೋ ಕೈಬಿಟ್ಟಿದ್ದು ಕೂಡ ಊಹಾಪೋಹಕ್ಕೆ ಕಾರಣವಾಗಿತ್ತು.

ನಾನು ಪ್ರದೀಪ್ ಶೆಟ್ಟರ್ ಕಡೆಗಣನೆ ಮಾಡಿಲ್ಲ: ಶಾಸಕ ಟೆಂಗಿನಕಾಯಿ
ಜನಸಂಪರ್ಕ ಕಾರ್ಯಾಲಯ ಉದ್ಘಾಟನೆಗೆ ಪ್ರದೀಪ್ ಶೆಟ್ಟರ್ ಅವರನ್ನು ಕಡೆಗಣನೆ ಮಾಡಿಲ್ಲ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ತಿಳಿಸಿದ್ದಾರೆ. ಎಂಎಲ್ಸಿ ಪ್ರದೀಪ್ ಶೆಟ್ಟರ್ ಜೊತೆ ನಾನೇ ಮಾತನಾಡಿದ್ದೇನೆ. ಪ್ರದೀಪ್ ಶೆಟ್ಟರ್ ಪ್ರವಾಸದಲ್ಲಿದ್ದಾರೆ ಎಂದು ಹೇಳಿದರು.
ಕಾರ್ಯಾಲಯ ಉದ್ಘಾಟನೆಗೆ ಬ್ಯಾನರ್, ಪೋಸ್ಟರ್ಗಳನ್ನು ಹಾಕಿಲ್ಲ. ನನ್ನ ಅಧಿಕೃತ ಪೇಜ್ನಲ್ಲಿ ಪ್ರದೀಪ್ ಶೆಟ್ಟರ್ ಫೋಟೋ ಇದೆ. ಪ್ರದೀಪ್ ಶೆಟ್ಟರ್ ಹಾಗೂ ನಾನು ಸಹೋದರರಿದ್ದಂತೆ ಎಂದು ಟೆಂಗಿನಕಾಯಿ ಹೇಳಿದ್ದು, ಶೆಟ್ಟರ್ ಅನ್ಯಕೆಲಸ ನಿಮಿತ್ಯ ಊರಲ್ಲಿ ಇಲ್ಲ ನಂತರ ಕಚೇರಿ ಬರುವೆ ಎಂದರು.












Click it and Unblock the Notifications