ಹುಬ್ಬಳ್ಳಿ: ಪಟಾಕಿ ಮಳಿಗೆಗಳ ಮಾಲೀಕರು ಕಡ್ಡಾಯವಾಗಿ ಪಾಲಿಸಬೇಕಾದ ಸುರಕ್ಷತಾ ಕ್ರಮಗಳಿವು
ಹುಬ್ಬಳ್ಳಿ, ಅಕ್ಟೋಬರ್, 13: ಬೆಂಗಳೂರಿನ ಅತ್ತಿಬೆಲೆಯ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ದುರಂತದಿಂದ ಎಚ್ಚೆತ್ತಕೊಂಡಿರುವ ಅಧಿಕಾರಿಗಳು ನಗರದ ಪಟಾಕಿ ಮಳಿಗೆಗಳಿಗೆ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು.
ತಹಶೀಲ್ದಾರ್ ಕಲಗೌಡ ಆರ್. ಪಾಟೀಲ ನೇತೃತ್ವದಲ್ಲಿ ಹುಬ್ಬಳ್ಳಿ ಉತ್ತರ ಮತ್ತು ದಕ್ಷಿಣ ವಿಭಾಗದ ಎಸಿಪಿಗಳಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಕಂದಾಯ ನಿರೀಕ್ಷಕರನ್ನೊಳಗೊಂಡ ತಂಡ 12 ಮಳಿಗೆಗಳು ಮತ್ತು 3 ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲಿಸಿತು. ಕೆಲವು ಮಾರಾಟಗಾರರು ಪಟಾಕಿ ಸಂಗ್ರಹ ಸ್ಥಳದಲ್ಲಿ ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸದಿರುವುದು, ಸ್ಫೋಟಕ ಸಂಗ್ರಹಣಾ ಸ್ಥಳ ಜನವಸತಿ ಪ್ರದೇಶದಲ್ಲಿರುವುದು ಕಂಡುಬಂದಿದೆ. ಕೂಡಲೇ ಸೂಚನಾ ಫಲಕಗಳನ್ನು ಅಳವಡಿಸಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

"ನಿಯಮ ಉಲ್ಲಂಘನೆ, ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡದ ಕೆಲವು ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ. 100 ಕೆ.ಜಿ ಪಟಾಕಿ ದಾಸ್ತಾನು ಮಾಡಿದ್ದರೆ ಅದರಲ್ಲಿ 8 ಅಗ್ನಿನಿರೋಧಕ ಸಿಲಿಂಡರ್ ಇರಬೇಕು. ಸ್ಥಳದಲ್ಲಿ 400 ಲೀಟರ್ ನೀರಿನ ಸಂಗ್ರಹ ಇರಬೇಕು. ಕೆಲವು ಅಂಗಡಿಗಳು ಇದನ್ನು ಪಾಲನೆ ಮಾಡದಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ" ಎಂದು ತಹಶೀಲ್ದಾರ್ ಕಲಗೌಡ ಆರ್.ಪಾಟೀಲ ಹೇಳಿದರು.
24 ಗಂಟೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಕೆಲವರು ಈಗಾಗಲೇ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿದ್ದಾರೆ. ಪರಿಶೀಲನೆ ವೇಳೆ ಕಂಡುಬಂದ ಲೋಪಗಳ ಕುರಿತು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್‌ಗೆ ವರದಿ ಸಲ್ಲಿಸಲಾಗುವುದು. ಮುಂಬರುವ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಗ್ನಿ ಅನಾಹುತಗಳನ್ನು ತಪ್ಪಿಸಲು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ಮಳಿಗೆಗಳ ಮಾಲೀಕರಿಗೆ ಕೆಲವು ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದರು.
ಅಗ್ನಿ ಶಮನ ವ್ಯವಸ್ಥೆಗೆ ಕೈಗೊಳ್ಳಬೇಕಾದ ಕ್ರಮಗಳು
1. ಪ್ರತಿ ಮಳಿಗೆಯಲ್ಲಿ 9 ಲೀಟರ್ ಸಾಮರ್ಥ್ಯದ ವಾಟರ್ ಪ್ರೆಜರ್ ಮಾದರಿ ಅಗ್ನಿನಂದಕ ಇರಬೇಕು.
2. ಎರಡು ಬಕೆಟ್‌ಗಳಲ್ಲಿ ನೀರು ಇಟ್ಟಿರಬೇಕು
3. ಮಳಿಗೆಗಳಲ್ಲಿ ಅಡುಗೆ, ಧೂಮಪಾನಕ್ಕೆ ಅವಕಾಶ ಕೊಡಬಾರದು.
4. ಹಗಲು ವೇಳೆ ಮಾತ್ರ ಪಟಾಕಿ ಮಾರಾಟ ಮಾಡಬೇಕು.
ರಾತ್ರಿ ವೇಳೆ ಮಳಿಗೆಯಲ್ಲಿ ಯಾರೂ ಮಲಗಬಾರದು ಎಂದು ಸೂಚಿಸಲಾಗಿದೆ. ಇನ್ನು ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಅವರು ಮಾಹಿತಿ ನೀಡಿದ್ದು, ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಪರವಾನಗಿ ಪಡೆದ 17 ಪಟಾಕಿ ಸಂಗ್ರಹ ಗೋದಾಮುಗಳಿವೆ. ಈ ಬಗ್ಗೆ ಅಧಿಕಾರಿಗಳು ಜಂಟಿ ಪರಿಶೀಲನೆ ಮಾಡಿದ್ದಾರೆ. ಜನವಸತಿ ಪ್ರದೇಶದಲ್ಲಿ ಗೋದಾಮುಗಳಿದ್ದರೆ ಅವುಗಳ ಸ್ಥಳಾಂತರಕ್ಕೆ ನೋಟಿಸ್ ನೀಡಲಾಗುವುದು ಎಂದರು.
ಮಳಿಗೆ ನಿರ್ಮಾಣ ಹೇಗಿರಬೇಕು?
1. ಗೋದಾಮುಗಳಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು.
2. ನಿರ್ಮಾಣಕ್ಕೆ ಬಳಸುವ ವಸ್ತುಗಳು ಸುಲಭವಾಗಿ ಬೆಂಕಿ ನಂದಿಸುವಂತಿರಬೇಕು.
3. ಪ್ರತಿ ಮಳಿಗೆಗೆ ಹಿಂದಿನಿಂದ ಮತ್ತು ಮುಂದಿನಿಂದ ಪ್ರವೇಶಕ್ಕೆ ವ್ಯವಸ್ಥೆ ಇರಬೇಕು.
4. ಮಳಿಗೆಗಳ ಗಾತ್ರ 10X10ಗೆ ಸೀಮಿತಗೊಳಿಸಬೇಕು, ಹೆಚ್ಚಿನ ದಾಸ್ತಾನು ಮಾಡಬಾರದು.
5. ಮಳಿಗೆಯಿಂದ ಮಳಿಗೆಗೆ 10 ಮೀಟರ್ ಅಂತರ ಕಾಯ್ದುಕೊಳ್ಳಬೇಕು.












Click it and Unblock the Notifications