ಸಂಸತ್ತಿನಲ್ಲಿ ಪ್ರಧಾನಿ ಮೋದಿ ಆಧಾರ ರಹಿತ ಮಾಹಿತಿ ನೀಡಿದ್ದಾರೆ: ದಿಗ್ವಿಜಯ್ ಸಿಂಗ್
ಹುಬ್ಬಳ್ಳಿ, ಆಗಸ್ಟ್, 11: ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಪ್ಪು ಮಾಹಿತಿ ಕೊಡುತ್ತಿದ್ದಾರೆ. ಅಲ್ಲದೆ ಅವರು ಕೇವಲ ರಾಜಕೀಯ ಭಾಷಣ ಮಾಡಿದ್ದಾರೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ಹುಬ್ಬಳ್ಳಿಯಲ್ಲಿ ಗಂಭೀರ ಆರೋಪ ಮಾಡಿದರು.
ಹುಬ್ಬಳ್ಳಿಯ ಗೋಕುಲ ರಸ್ತೆಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಅವರು ತಪ್ಪು ಮಾಹಿತಿಗಳನ್ನು ಸಂಸತ್ ಮುಂದೆ ಇರಿಸಿದ್ದಾರೆ. ಅಲ್ಲದೆ ಯಾಕೆ ಮಣಿಪುರಕ್ಕೆ ಹೋಗಿಲ್ಲ ಎಂದು ಇಡೀ ದೇಶದ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಅವರಿಂದ ಸೂಕ್ತ ಉತ್ತರ ಬರುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಮಣಿಪುರದಲ್ಲಿ ಮೂರು ತಿಂಗಳು ಆದರೂ ಶಾಂತಿ ಸ್ಥಾಪನೆ ಆಗಿಲ್ಲ ಯಾಕೆ ಎಂದು ನೊಂದ ಜನರು ಪ್ರಶ್ನೆ ಮಾಡತ್ತಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತರ ಕೊಟ್ಟಿಲ್ಲ ಎಂದ ಅವರು, ಅಸ್ಸಾಂ ರೈಫಲ್ಸ್ ಮತ್ತು ಸ್ಥಳೀಯ ಪೊಲೀಸರ ನಡುವಿನ ವಿವಾದ ಹೆಚ್ಚಾಗುತ್ತಲೇ ಇದೆ. ಇದರ ಬಗ್ಗೆಯೂ ನರೇಂದ್ರ ಮೋದಿ ಅವರು ಮಾತನಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಸಂಸತ್ತಿನಲ್ಲಿ ಅವರು ಆಧಾರ ರಹಿತ ಮಾಹಿತಿ ಕೊಟ್ಟಿದ್ದಾರೆ ಎಂದು ಆರೋಪ ಮಾಡಿದರು.
ಕರ್ನಾಟಕದ 5 ಗ್ಯಾರಂಟಿಗಳ ಕುರಿತು ಮೋದಿ ಟೀಕೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯ ಸರ್ಕಾರದ 5 ಗ್ಯಾರಂಟಿಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಟೀಕೆಯಲ್ಲಿ ಯಾವುದೇ ಹುರುಳಿಲ್ಲ. ಎಲ್ಲ ಗ್ಯಾರಂಟಿಗಳ ಜಾರಿಗೆ ನಾವು ಬದ್ಧರಾಗಿದ್ದೇವೆ. ಹಾಗೆಯೇ ಕರ್ನಾಟಕದ ಜನತೆಗೆ ನಾವು ಕೃತಜ್ಞರಾಗಿದ್ದೇವೆ ಎಂದರು.
ಸಂಸತ್‌ನಲ್ಲಿ ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ವಿವಾದದ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಫ್ಲೈಯಿಂಗ್ ಕಿಸ್ ಅಲ್ಲವೇ ಅಲ್ಲ ಎಂದರು. ಹಾಗೆಯೇ ಆಗಷ್ಟ್ 27ರಂದು ಬೆಳಗಾವಿಗೆ ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಬರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.












Click it and Unblock the Notifications