NWKRTC: ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ನಿಗಾ ವಹಿಸಲು ಸಿಬ್ಬಂದಿಗೆ ಸೂಚನೆ
ಹುಬ್ಬಳ್ಳಿ, ಮಾರ್ಚ್ 25: ಲೋಕಸಭಾ ಚುನಾವಣೆ ಘೋಷಣೆ ಆದ ದಿನದಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಹೀಗಾಗಿ ಅಕ್ರಮ ಹಣ, ಮದ್ಯೆ, ಇನ್ನಿತರ ವಸ್ತುಗಳನ್ನು ಸಾಗಿಸುವುದು ಅಪರಾಧವಾಗಿದೆ. ಇದರ ಭಾಗವಾಗಿ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC)ಯು ತನ್ನ ಸಿಬ್ಬಂದಿಗೆ ಕೆಲವು ಕಟ್ಟುನಿಟ್ಟಿನ ಸೂಚನೆ ನೀಡಿದೆ.
NWKRTC ಸಾರಿಗೆ ನಿಗಮದ ಬಸ್‌ಗಳಲ್ಲಿ ಅನಧಿಕೃತ ಹಣ, ನಿರ್ಬಂಧಿತ ವಸ್ತುಗಳ ಸಾಗಾಣಿಕೆಗೆ ಅವಕಾಶ ನೀಡದಂತೆ ಸಿಬ್ಬಂದಿ ಮುಂಜಾಗ್ರತೆ ವಹಿಸುವಂತೆ ಸೂಚನೆಗಳನ್ನು ನೀಡಿದ್ದೇವೆ. ಅಂತಹದ್ದೇನಾದರೂ ಬಂದರೆ ಗಮನಕ್ಕೆ ತರಲು ಸೂಚಿಸಿದ್ದೇವೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.

ನಿತ್ಯ 465 ಬಸ್ ಸಂಚಾರ
ರಾಜ್ಯ ವಾಯುವ್ಯ ರಸ್ತೆ ಸಾರಿಗೆ ಬಸ್‌ಗಳು ಧಾರವಾಡ, ವಿಜಯಪುರ, ಗದಗ, ಹಾವೇರಿ, ಬಾಗಲಕೋಟೆ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ 465 ಬಸ್ಸುಗಳು ಜಿಲ್ಲೆಯ ಒಳಗೆ ಮತ್ತು ರಾಜ್ಯದ ವಿವಿಧ ಭಾಗಗಳಿಗೆ ಸಂಚರಿಸುತ್ತವೆ.
ಕೆಲವು ಬಸ್‌ಗಳು ನೆರೆಯ ಮಹಾರಷ್ಟ್ರ, ಗೋವಾ, ಆಂಧ್ರಪ್ರದೇಶ, ತೆಲಂಗಾಣ ಮತ್ತಿತರ ರಾಜ್ಯಗಳ ಪ್ರಮುಖ ಸ್ಥಳಗಳ ನಡುವೆ ಪ್ರತಿದಿನ 1.60 ಲಕ್ಷ ಕಿಲೋ ಮೀಟರಗಳಷ್ಟು ಸಂಚರಿಸುತ್ತವೆ. ನಿತ್ಯ 1.65 ರಿಂದ 1.70 ಲಕ್ಷ ದಷ್ಟು ಜನರು ಪ್ರಯಾಣ ಮಾಡುತ್ತಾರೆ.
ಬಸ್, ನಿಲ್ದಾಣದಲ್ಲಿ ಹೆಚ್ಚು ನಿಗಾ ವಹಿಸಲು ಸೂಚನೆ
ಚುನಾವಣೆ ದೃಷ್ಟಿಯಿಂದ ಕೆಲವರು ಸಾರಿಗೆ ಬಸ್ಸುಗಳಲ್ಲಿ ಅನಧಿಕೃತ ಹಣ ಹಾಗೂ ನಿರ್ಬಂಧಿತ ವಸ್ತುಗಳನ್ನು ಸಾಗಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದ್ದರಿಂದ ನಿಲ್ದಾಣಗಳ ಕಾರ್ಗೋ ಸಿಬ್ಬಂದಿಗಳು, ಚಾಲಕರು, ನಿರ್ವಾಹಕರು ಹಾಗೂ ಬಸ್ ನಿಲ್ದಾಣಗಳ ಸಿಬ್ಬಂದಿ ಹೆಚ್ಚು ಜಾಗರೂಕರಾಗಿರುವಂತೆ ನಿರ್ದೇಶನ ನೀಡಲಾಗಿದೆ ಎಂದರು.

ಬಸ್‌ನಲ್ಲಿ ನಿರ್ಬಂಧಿತ ವಸ್ತು ಸಾಗಿಸುವಂತಿಲ್ಲ
ಕೇಂದ್ರ ಮೋಟಾರು ವಾಹನ ಕಾಯ್ದೆ ಪ್ರಕಾರ ಸಾರ್ವಜನಿಕ ಸಾರಿಗೆ ಬಸ್ಸುಗಳಲ್ಲಿ ಅನಧಿಕೃತ ಹಣ, ನಿರ್ಬಂಧಿತ ವಸ್ತುಗಳನ್ನು ಸಾಗಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಪ್ರಯಾಣಿಕರಿಗೆ ಈ ಬಗ್ಗೆ ತಿಳುವಳಿಕೆ ನೀಡಿ ಜಾಗೃತಿ ಮೂಡಿಸಬೇಕು. ಯಾವುದೇ ಕಾರಣಕ್ಕೂ ಅನಧಿಕೃತ ಹಣ, ನಿರ್ಬಂಧಿತ ವಸ್ತುಗಳ ಸಾಗಾಣಿಕೆಗೆ ಅವಕಾಶ ನೀಡಬಾರದು.
ಮುಖ್ಯವಾಗಿ ಅನಧಿಕೃತ ಹಣ, ಅನುಮಾನಾಸ್ಪದ ವಸ್ತುಗಳ ಸಾಗಾಣಿಕೆ ಬಗ್ಗೆ ಕಂಡುಬಂದಲ್ಲಿ ಕೂಡಲೇ ಮೇಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ. ಅಲ್ಲದೆ ಮಾರ್ಗ ಮಧ್ಯದಲ್ಲಿ ಅನಿರೀಕ್ಷಿತವಾಗಿ ಬಸ್ಸುಗಳ ತಪಾಸಣೆ ಕೈಗೊಳ್ಳುವ ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಧಾರವಾಡದಲ್ಲಿ 300 ಸೀರೆ ವಶಕ್ಕೆ
ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ದಾಖಲೆಯೇ ಇಲ್ಲದ 300 ಸೀರೆಗಳು ವಶಕ್ಕೆ ಪಡೆಯಲಾಗಿದೆ. ಜಿಲ್ಲೆಯ ತೇಗೂರು ಚೆಕ್ ಪೋಸ್ಟ ಬಳಿ 300 ಸೀರೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. KA 2 Z8098 ನೋಂದಣಿ ಸಂಕ್ಯೆ ಮಾರುತಿ ಓಮ್ನಿ ಕಾರನಲ್ಲಿ ಸಾಗಿಸುತ್ತಿದ್ದಾಗ ಚೆಕ್ ಪೋಸ್ಟ್‌ನಲ್ಲಿ ಪರಿಶೀಲನೆ ವೇಳೆ ಪತ್ತೆ ಆಗಿದೆ. ಚಾಲಕನನ್ನು ಪ್ರಶಾಂತ್ ಎಂದು ಗುರುತಿಸಲಾಗಿದೆ. ಚುನಾವಣಾ ಆಯೋಗವು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದೆ.












Click it and Unblock the Notifications