ನಂಬಿಕೆ ದ್ರೋಹಿಗಳಿಗೆ ಜನಾರ್ದನ ರೆಡ್ಡಿ ಮಾತಿನ ಚಾಟಿ
ಹುಬ್ಬಳ್ಳಿ, ಜನವರಿ 31: ಸ್ವಜನ ಪಕ್ಷಪಾತದಿಂದ ನನ್ನ ಅಧಿಕಾರಕ್ಕೆ ಧಕ್ಕೆ ಬಂತು ಎಂದು ಗಾಲಿ ಜನಾರ್ಧನ ರೆಡ್ಡಿ ಅವರು ಪರೋಕ್ಷವಾಗಿ ಹೇಳಿದ್ದಾರೆ.
ಹುಬ್ಬಳ್ಳಿಯ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಸಂಘದಿಂದ ಆಯೋಜಿಸಿದ್ದ ಯೋಗಿ ವೇಮನ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು 'ಅಲ್ಪರಿಗೆ ಅಧಿಕಾರ ನೀಡಿದರೆ, ಒಳ್ಳೆಯವರನ್ನು ಅವರು ಓಡಿಸುತ್ತಾರೆ ಎಂದು ಯೋಗಿ ವೇಮನ ತಮ್ಮ ವಚನದಲ್ಲಿ ಹೇಳಿದ್ದಾರೆ. ನನ್ನ ವಿಷಯದಲ್ಲಿ ಈ ಮಾತು ಅಕ್ಷರಶಃ ನಿಜವಾಗಿದೆ' ಎಂದು ಹೇಳಿದರು.
ತಮ್ಮ ರಾಜಕೀಯ ವಿರೋಧಿಗಳ ಹೆಸರು ಹೇಳದೆ ಪರೋಕ್ಷವಾಗಿಯೇ ಮಾತಿನ ದಾಳಿ ಮಾಡಿದ ಅವರು 'ಚಪ್ಪಲಿ ತಿನ್ನುವ ಅಭ್ಯಾಸವಿರುವ ನಾಯಿಗೆ ಕಬ್ಬಿನ ರುಚಿಯ ಮಹತ್ವ ಅರಿವಾಗುವುದಿಲ್ಲ' ಎಂದರು.

'ಇತ್ತೀಚೆಗೆ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ನನ್ನ ಬಗ್ಗೆ ಲೇಖನ ಬಂದಿತ್ತು. ಶಿವರಾಜ್ ಕುಮಾರ ಅಭಿನಯದ 'ಮಫ್ತಿ' ಚಿತ್ರ ನನ್ನ ಜೀವನ ಆಧರಿಸಿದೆ ಎಂದು ಅದರಲ್ಲಿ ಬರೆಯಲಾಗಿತ್ತು. ಅಲ್ಲದೆ, ಜನಾರ್ದನ ರೆಡ್ಡಿ ರಾಜಕೀಯ ಅಸ್ಪೃಶ್ಯ ಎಂದೂ ಬರೆದಿದ್ದು ಆ ಸುದ್ದಿ ಓದಿ ತುಂಬಾ ನೋವಾಗಿತ್ತು' ಎಂದು ಅವರು ಬೇಸರ ವ್ಯಕ್ತಪಡಿಸಿದರು.
'ನಾನು ಕಷ್ಟದಲ್ಲಿದ್ದಾಗ ನನ್ನ ಜನಾಂಗದ ಪ್ರತಿಯೊಬ್ಬರೂ ನನಗಾಗಿ ಪ್ರಾರ್ಥಿಸಿದ್ದಾರೆ' ಎಂದ ಅವರು 'ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಬಳ್ಳಾರಿಯ ಕಾರ್ಯಕ್ರಮವೊಂದರಲ್ಲಿ ನನ್ನ ವಿರುದ್ಧ ಮಾತನಾಡಲು ಮುಂದಾದಾಗ, ಅಲ್ಲಿನ ಜನ ಎದ್ದು ನಿಂತು, ರೆಡ್ಡಿ ವಿರುದ್ಧ ಮಾತನಾಡಬೇಡಿ. ಅವರ ವಿರುದ್ಧ ಮಾತನಾಡಿದರೆ ನೀವು ಸೋಲುತ್ತೀರಿ ಎಂದರಂತೆ. ಇದಕ್ಕಿಂತ ಭಾಗ್ಯ ಬೇಕೆ?' ಎಂದು ರೆಡ್ಡಿ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದರು.












Click it and Unblock the Notifications