ಕುತೂಹಲಕಾರಿ ಕರಪತ್ರ ಹಂಚಿದ ಜಗದೀಶ್ ಶೆಟ್ಟರ್: ಮಾಜಿ ಸಿಎಂ ಮನವಿ ಏನು?
ಹುಬ್ಬಳ್ಳಿ, ಮೇ 04: ಮೂರು ದಶಕದ ನಂಟು ತೊರೆದು ಇತ್ತೀಚಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇದೀಗ ರಾಜಕೀಯ ಜೀವನದಲ್ಲಿ ಮತೊಂದು ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ. ಚುನಾವಣೆಗೂ ಮುನ್ನವೇ ಜಗದೀಶ್ ಶೆಟ್ಟರ್ ತಮ್ಮ ರಾಜಕೀಯ ನಿವೃತ್ತಿ ಯಾವಾಗ ಎನ್ನುವುದನ್ನು ಘೋಷಣೆ ಮಾಡಿದ್ದಾರೆ.
ಇದು ನನ್ನ ಕೊನೆಯ ಚುನಾವಣೆ. ಇದೊಂದು ಬಾರಿಗೆ ನನಗೆ ಅವಕಾಶ ಮಾಡಿಕೊಡಿ ಎಂದು ಕರಪತ್ರಗಳ ಮುಖಾಂತರವೇ ಜಗದೀಶ್ ಶೆಟ್ಟರ್ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಚುನಾವಣಾ ಕರಪತ್ರಗಳಲ್ಲಿ ಇದು ನನ್ನ ಕೊನೆಯ ಚುನಾವಣೆ, ನನಗೆ ಮತ ನೀಡಿ ಆರಿಸಿ ತರಬೇಕು ಎಂದು ಜಗದೀಶ ಶೆಟ್ಟರ್ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದ್ದಾರೆ.

ನಾನು ಓರ್ವ ಜನಪ್ರತಿನಿಧಿಯಾಗಿ ಅನೇಕ ಸಾಧನೆ ಮಾಡಿದ್ದೇನೆ. ನಾನು ಅಧಿಕಾರಕ್ಕಾಗಿ ಪಕ್ಷ ಬಿಟ್ಟಿದ್ದೇನೆ ಎಂಬ ಅಪಪ್ರಚಾರ ಭರಾಟೆಯಿಂದ ಸಾಗಿದೆ. ಅದರ ಬಗ್ಗೆ ನಾನು ತೆಲೆ ಕೆಡಸಿಕೊಂಡಿಲ್ಲ. ನಾನು ಎಂದು ಕೂಡ ಅಧಿಕಾರಕ್ಕೆ ದುಂಬಾಲು ಬಿದ್ದಿಲ್ಲ. ರಾಜಕೀಯ ಜೀವನ ಆರಂಭದಿಂದಲೂ ತತ್ವ, ಸಿದ್ದಾಂತ ಆಧಾರದ ರಾಜಕಾರಣ ಮಾಡಕೊಂಡು ಬಂದವನು. ಈಗ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿರುವುದು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ. ಕುಲಗೆಟ್ಟು ಹೋಗುತ್ತಿರುವ ವ್ಯವಸ್ಥೆಯಲ್ಲಿ ಪರಿವರ್ತನೆ ಆಗಬೇಕಿದೆ ಎಂದಿದ್ದಾರೆ.
ಇದು ನನ್ನ ಕಟ್ಟ ಕಡೆಯ ಚುನಾವಣೆ, 7ನೇ ಬಾರಿಗೆ ಚುನಾವಣೆ ಎದುರಿಸುತ್ತಿರುವ ನಾನು ಗೆದ್ದೇ ಗೆಲ್ಲುತ್ತೇನೆ. ಈ ಅವಧಿ ಮುಗಿದ ಬಳಿಕ ಚುನಾವಣಾ ರಾಜಕಾರಣದಿಂದ ನಿರ್ಗಮಿಸುತ್ತೇನೆ ಎಂದು ಕರಪತ್ರದಲ್ಲಿ ಉಲ್ಲೇಖ ಮಾಡಿರುವ ಶೆಟ್ಟರ್. ನನ್ನ ಮಾತಿಗೆ ಕಟ್ಟಬದ್ಧನಾಗಿದ್ದೇನೆ ಎಂದು ಚುನಾವಣಾ ಪ್ರಚಾರದ ಕರಪತ್ರದಲ್ಲಿ ತಿಳಿಸಿದ್ದಾರೆ.

ಬಿಜೆಪಿ ತೊರೆದ ಜಗದೀಶ್ ಶೆಟ್ಟರ್ ಬೆಂಬಲಿಗರು
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟಿಕೆಟ್ ಅಸಮಾಧಾನದ ಹಿನ್ನೆಲೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಕಾಂಗ್ರೆಸ್ ಪಕ್ಷದಿಂದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ಭರ್ಜರಿ ಪ್ರಚಾರ ಕೂಡ ನಡೆಸಿದ್ದಾರೆ. ಇದೀಗ ಜಗದೀಶ್ ಶೆಟ್ಟರ್ ನೂರಾರು ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಹುಬ್ಬಳ್ಳಿ ನಗರದ ಹೊಸೂರಿನಲ್ಲಿ ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ, ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ, 12 ವರ್ಷಗಳ ಕಾಲ ಬಿಜೆಪಿಯಲ್ಲಿದ್ದ ದೇವೇಂದ್ರ ಹರಿವಾಣ ತಮ್ಮ ನೂರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಜಿದ್ದಾಜಿದ್ದಿ ಇದ್ದು, ಈಗಾಗಲೇ ಕ್ಷೇತ್ರದ ಚುನಾವಣಾ ಕಣ ರಂಗೇರಿದೆ.












Click it and Unblock the Notifications