Breaking; ಬಿಜೆಪಿ ಸೇರುವುದಾಗಿ ಘೋಷಿಸಿದ ಬಸವರಾಜ ಹೊರಟ್ಟಿ
ಹುಬ್ಬಳ್ಳಿ, ಏಪ್ರಿಲ್ 03; ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ್ದಾರೆ. ಪ್ರಸ್ತುತ ವಿಧಾನ ಪರಿಷತ್ ಸದಸ್ಯರಾಗಿರುವ ಹೊರಟ್ಟಿ ಅವರ ಅವಧಿ ಜೂನ್ ತಿಂಗಳ ತನಕ ಇದೆ.
ಭಾನುವಾರ ಹುಬ್ಬಳ್ಳಿಯಲ್ಲಿ ಮಾತನಾಡಿದ ಬಸವರಾಜ ಹೊರಟ್ಟಿ, "ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲಾಗುವುದು" ಎಂದರು.
"ನಮ್ಮ ಪಕ್ಷದಿಂದಲೇ ಸ್ಪರ್ಧಿಸುವಂತೆ ಬಿಜೆಪಿ ನಾಯಕರು ಹೇಳಿದ್ದಾರೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಬಿ. ಎಸ್. ಯಡಿಯೂರಪ್ಪ ಅವರು ನನ್ನ ಜೊತೆ ಮಾತನಾಡಿದ್ದಾರೆ. ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಬಿಜೆಪಿ ಸೇರ್ಪಡೆ ದಿನಾಂಕ ನಿಗದಿ ಮಾಡಲಾಗುತ್ತದೆ" ಎಂದು ಬಸವರಾಜ ಹೊರಟ್ಟಿ ಹೇಳಿದರು.

"ಬಿಜೆಪಿಯಿಂದ ಸ್ಪರ್ಧೆಗೆ ಎಚ್. ಡಿ. ಕುಮಾರಸ್ವಾಮಿ ಅವರು ಮುಕ್ತವಾಗಿ ಒಪ್ಪಿದ್ದಾರೆ. ಬಿಜೆಪಿ ಸೇರ್ಪಡೆಗೆ ಕರ್ನಾಟಕದ ಎಲ್ಲಾ ನಾಯಕರು ಒಪ್ಪಿದ್ದಾರೆ" ಎಂದು ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದರು.
"ಬಿಜೆಪಿ ಸೇರ್ಪಡೆಗೆ ಯಾರು ವಿರೋಧ ಮಾಡುತ್ತಿದ್ದಾರೆ ಎಂಬುದು ನನಗೆ ಬೇಕಾಗಿಲ್ಲ. ಶನಿವಾರ ಯಡಿಯೂರಪ್ಪ ನನ್ನ ಜೊತೆ ಮಾತನಾಡಿದ್ದಾರೆ" ಎಂದು ಬಸವರಾಜ ಹೊರಟ್ಟಿ ತಿಳಿಸಿದರು.
ಕೆಲವು ದಿನಗಳ ಹಿಂದೆ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, "ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ ಸೇರಲಿದ್ದಾರೆ ಎಂಬ ವಿಚಾರದ ಬಗ್ಗೆ ಚರ್ಚೆ ಬೇಡ" ಎಂದು ಹೇಳಿದ್ದರು.
"ಶಿಕ್ಷಕರ ಕ್ಷೇತ್ರದಿಂದ 7 ಬಾರಿ ಗೆಲುವು ಸಾಧಿಸಿರುವ ಹೊರಟ್ಟಿ ಅವರಿಗೆ ಎಲ್ಲಾ ವಿಚಾರವೂ ಗೊತ್ತಿದೆ. ಅವರು ಹಿರಿಯರು, ಅವರ ಬಗ್ಗೆ ಹೆಚ್ಚು ಹೇಳಬೇಕಿಲ್ಲ" ಎಂದು ಕುಮಾರಸ್ವಾಮಿ ತಿಳಿಸಿದ್ದರು.












Click it and Unblock the Notifications