ರಸ್ತೆ ಗುಂಡಿಗಳಿಗೆ ನಾಮಕರಣ ಮಾಡಿದ ರಾಜ್ಯ ಆಟೋ ಚಾಲಕ ಸಂಘ: ಅನಾಥ ರಸ್ತೆಗಳ ದುರಸ್ತಿಗೆ ಆಗ್ರಹ
ಹುಬ್ಬಳ್ಳಿ, ಅಕ್ಟೋಬರ್ 09: ರಸ್ತೆ ಗುಂಡಿ ಸಮಸ್ಯೆ, ಸವಾರರು ಪ್ರಯಾಣಿಕರ ಪರದಾಟ ಕೇವಲ ರಾಜ್ಯ ರಾಜಧಾನಿಗೆ ಮಾತ್ರವೇ ಸೀಮೀತವಾಗಿಲ್ಲ. ಬದಲಾಗಿ ಇದು ಛೋಟಾ ಮುಂಬೈ ಅಂತಲೇ ಕರೆಸಿಕೊಳ್ಳುವ ರಾಜ್ಯ ವಾಣಿಜ್ಯ ನಗರಿ ಹುಬ್ಬಳ್ಳಿಗೂ ಕಾಡುತ್ತಿದೆ. ಇಲ್ಲಿನ ರಸ್ತೆಗಳು ಹಾಳಾಗಿದ್ದು, ದುರಸ್ತಿ ಮಾಡದ ಸರ್ಕಾರದ ವಿರುದ್ಧ ಆಟೋ ಚಾಲಕರ ಸಂಘವು ಅನಾಥ ರಸ್ತೆ ನಾಮಕರಣ ಮಾಡಿ ವಿನೂತನವಾಗಿ ಪ್ರತಿಭಟನೆ ಮಾಡಿದೆ.
ಹುಬ್ಬಳ್ಳಿ ನಗರದ ಬಹುತೇಕ ರಸ್ತೆಗಳು ದುರಸ್ತಿ ಎದುರು ನೋಡುತ್ತಿವೆ. ನಗರದಲ್ಲಿ ಪ್ರಮುಖ ರಸ್ತೆಗಳೇ ಹಾಳಾಗಿವೆ. ಸಾರ್ವಜನಿಕರು, ವಾಹನ ಸವಾರರು ಹಾಗೂ ಮಹಿಳೆಯರು ವಯೋವೃದ್ಧರು ರಸ್ತೆಗೆ ಇಳಿಯಲು ಭಯಪಡಬೇಕಾದ ಸ್ಥಿತಿ ಇದೆ. ಮನೆಯಿಂದ ವಾಹನಗಳ ಮೇಲೆ ಬರಲು ಸಾವಿರ ಬಾರಿ ಯೋಚಿಸಬೇಕಾದ ಸ್ಥಿತಿ ಇಲ್ಲಿದೆ.

ಅನಾಥ ರಸ್ತೆಗಳು: ಸರ್ಕಾರದ ವಿರುದ್ದ ಘೋಷಣೆ
ಈ ಸಂಬಂಧ ಉತ್ತರ ಕರ್ನಾಟಕ ಅಟೋ ಚಾಲಕರ ಸಂಘ ಹಾಗೂ ಹುಬ್ಬಳ್ಳಿ ಆಟೋ ಚಾಲಕರ ಸಂಘದ ವತಿಯಿಂದ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಹಳೆ ಬಸ್ ನಿಲ್ದಾಣ ಬಳಿ ತಗ್ಗು ಗುಂಡಿಯ ರಸ್ತೆಯಲ್ಲಿ ಅನಾಥ ರಸ್ತೆ ಅಂತಾ ನಾಮಕರಣ ಮಾಡಿ ವಿನೂತನ ಪ್ರತಿಭಟನೆ ಮಾಡಲಾಯಿತು. ಸಂಘದ ಸದಸ್ಯರು ಸೇರಿದಂತೆ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನಾಕಾರರು ರಸ್ತೆ ಸಮಸ್ಯೆಗಳ ಕುರಿತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಸ್ತೆಗುಂಡಿ ನಾಮಕರಣಕ್ಕಾಗಿ ಮಾಡಿಸಿದ್ದ ಬ್ಯಾನರ್‌ಗೆ ಹಾರ ಹಾಕಿ, ರಸ್ತೆಗುಂಡಿಗಳಿಗೆ ಕರ್ಪೂರದ ದೀಪ ಬೆಳಗಿಸಿ ಪರಿಸ್ಥಿತಿ ಬಗ್ಗೆ ಸರ್ಕಾರದ ಗಮನ ಸೆಳೆದರು. ರಸ್ತೆಗುಂಡಿ ಮುಚ್ಚುವಂತೆ ಹಲವು ಬಾರಿ ಮನವಿ ಮಾಡಿದ್ದರು ಯಾವ ಪ್ರಯೋಜನೆ ಆಗಿಲ್ಲ ಎಂದು ಸರ್ಕಾರದ ವಿರುದ್ಧ ದೂರಿದರು.
ಅವಘಡ ಮುನ್ನವೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು
ಸರ್ಕಾರ ಹಾಗೂ ಸಂಬಂಧಿಸಿದ ನಾಯಕರು ರಸ್ತೆಗುಂಡಿಯಲ್ಲಿ ಬಿದ್ದು ಅಪಘಾತ, ಅನಾಹುತ, ಜೀವ ಹಾನಿ ಆಗುವ ಮುನ್ನವೇ ಎಚ್ಚೆತ್ತುಕೊಳ್ಳುವಂತೆ ಅವರು ಮನವಿ ಮಾಡಿದರು. ಇದಕ್ಕು ಮೊದಲೇ ಪ್ರತಿಭಟನಾಕಾರರು, ಹಳೇ ಬಸ್ ನಿಲ್ದಾಣದಿಂದ ಮಹಾನಗರ ಪಾಲಿಕೆವರೆಗೆ ಮೆರವಣಿಗೆ ಮೂಲಕ ತೆರಳಿದರು.
ಹುಬ್ಬಳ್ಳಿಯಲ್ಲಿ ಎಲ್ಲಿ ನೋಡಿದರೂ ತಗ್ಗು ಗುಂಡಿಗಳು ಕಾಣಿಸುತ್ತವೆ. ಆಗಾಗ ಮಳೆ ಬರುತ್ತಿದ್ದು, ಇಲ್ಲಿನ ಜನರ ಸಮಸ್ಯೆ ಹೇಳತೀರದಾಗಿದೆ. ಸಾರ್ವಜನಿಕರಿಗೆ ಸಮಸ್ಯೆ ಆಗುವ ಮೊದಲೇ ಇತ್ತ ತುರ್ತು ಗಮನ ಹರಿಸಬೇಕಿದೆ ಎಂದು ಅವರು ಒತ್ತಾಯಿಸಿದರು.
ನಗರದ ಯಾವುದೇ ರಸ್ತೆಯಲ್ಲಿ ನೀವು ಓಡಾಡಿದರೂ ಸಹ ಕಣ್ಣು ಹಾಯಿಸಿದಷ್ಟೂ ದೂರ ರಸ್ತೆ ಗುಂಡಿಗಳು ಕಾಣಿಸುತ್ತವೆ.
ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ಬಳಿಯ ಮೇಲ್ಸುತುವೆ ಹಾಗೂ ಸ್ಮಾರ್ಟ್ ಕಾಮಗಾರಿ ಹೆಸರಿನಲ್ಲಿ ಎಲ್ಲವೋ ಅವೈಜ್ಞಾನಿಕ ಕಾಮಗಾರಿ ಎಂದು ಇದೇ ವೇಳೆ ಸಂಘದ ಮುಖ್ಯಸ್ಥರು ಆರೋಪಿಸಿದರು.
ನಗರದಲ್ಲಿ ಬೇಕಾಬಿಟ್ಟಿಯಾಗ ರಸ್ತೆ ಅಗೆದು ಪೂರ್ಣಗೊಳಿಸದೇ ಅರ್ಧ ಮರ್ಧ ಕಾಮಗಾರಿ ಮಾಡಿ ಕೈ ಬಿಡಲಾಗಿದೆ. ಜನರು ಕೈಯಲ್ಲಿ ಜೀವ ಇರಿಸಿಕೊಂಡು ಓಡಾಡಬೇಕಾದ ಸ್ಥಿತಿ ಇದೆ. ಚೆನ್ನಮ್ಮ ವೃತ್ತ, ಸಂಗೋಳ್ಳಿ ರಾಯಣ್ಣ , ಭಗತ್ ಸಿಂಗ್ ಸರ್ಕಲ್ ಹಾಗೂ ನೀಲಿಂಜನ್ ರಸ್ತೆ ಗಳು ಸಂಪೂರ್ಣ ಹಾಳಾಗಿವೆ. ಸುತ್ತಮಮುತ್ತಲಿನ ಪ್ರದೇಶಗಳ ರಸ್ತೆಗಳಲ್ಲಿ ಇದೇ ಕಥೆಯಾಗಿದೆ.
ಮುಖ್ಯ ರಸ್ತೆಗಳದ್ದು ಒಂದು ಕಥೆಯಾದರೆ, ಈ ಬಡಾವಣೆಗಳಲ್ಲಿನ ಉಪ ರಸ್ತೆಗಳದ್ದು ಮತ್ತೊಂದು ಕಥೆ, ಇಕ್ಕಟ್ಟಾದ ರಸ್ತೆಯಲ್ಲಿ ಒಳಚರಂಡಿ ದುರಸ್ತಿ ಕಾರ್ಯ ಆರಂಭಿಸಿದರೆ, ತಿಂಗಳಾದರೂ ಪೂರ್ಣಗೊಳ್ಳುವುದಿಲ್ಲ. ಕೆಲವೆಡೆ ವರ್ಷಗಟ್ಟಲೆಯಾದರೂ ಕಾಂಕ್ರಿಟ್ ಹಾಕುವುದು ಮುಗಿದಿರುವುದಿಲ್ಲ. ಅಲ್ಲದೇ ಮಳೆಗಾಲದಲ್ಲಿ ಇಲ್ಲಿನ ಜನರು ಮತ್ತಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.












Click it and Unblock the Notifications