Hubballi Airport: ಹುಬ್ಬಳ್ಳಿ ವಿಶ್ವದರ್ಜೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಸ್ತು: ಪ್ರಧಾನಿ ಚಾಲನೆ, ವೆಚ್ಚದ ಅಂಕಿ-ಸಂಖ್ಯೆ
ಹುಬ್ಬಳ್ಳಿ, ಮಾರ್ಚ್ 08: ಉತ್ತರ ಕರ್ನಾಟಕದ ಭಾಗದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರೀತಿಯಲ್ಲಿ ಎಲ್ಲ ಸೌಲಭ್ಯವು ಇರುವಂತೆ ಹಾಲಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿಗೊಳ್ಳುವ ಕಾಲ ಕೂಡಿ ಬಂದಿದೆ. ಈ ಮೂಲಕ ಹುಬ್ಬಳ್ಳಿ ಭಾಗದ ಜನರ ಬಹುದಿನಗಳ ಕನಸು ನನಸಾಗಲಿದೆ.
ಹೌದು, ದೇಶಿಯ ಮಟ್ಟದ ಹುಬ್ಬಳ್ಳಿ ವಿಮಾನ ನಿಲ್ದಾಣದ ಅಭಿವೃದ್ಧಿ ಕುರಿತು ನಿರಂತರ ಚರ್ಚೆ, ಮನವಿಗಳ ಬಳಿಕ ಕೇಂದ್ರ ಸರ್ಕಾರ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ವಿಶ್ವದರ್ಜೆಯ ವಿಮಾನ ನಿಲ್ದಾಣವಾಗಿ ನಿರ್ಮಿಸಲು ಅಸ್ತು ಎಂದಿದೆ. ಇದರ ಭಾಗವಾಗಿ ಇದೇ ಮಾರ್ಚ್ 10ರಂದು ನಿಲ್ದಾಣ ಮೇಲ್ದರ್ಜೆಗೆ ಏರುವ ಕಾರ್ಯ ಆರಂಭಗೊಳ್ಳಲಿದೆ.

ಪ್ರಧಾನಿ ನರೇಂದ್ರ ಮೋದಿಯವರು ನಾಡಿದ್ದು ಭಾನುವಾರ ಮಧ್ಯಾಹ್ನ 12 ಗಂಟೆಗೆ ಉತ್ತರ ಪ್ರದೇಶದ ಅಜಂಗಢದಿಂದ ವರ್ಚ್ಯುವಲ್ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕಾಮಗಾರಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹುಬ್ಬಳ್ಳಿ ವಿಮಾನ ನಿಲ್ದಾಣ ಅಭಿವೃದ್ಧಿಯನ್ನು ಕೈಗೊಂಡಿದೆ. ವಿಶ್ವ ದರ್ಜೆಯ ವಿಮಾನ ನಿಲ್ದಾಣವನ್ನಾಗಿ ರೂಪಿಸಲು ಈ ಮೂಲಕ ಕ್ರಮ ಕೈಗೊಂಡಿದೆ ಎಂದು ವಿಮಾನ ನಿಲ್ದಾಣದ ಕಾರ್ಯ ನಿರ್ವಾಹಕ ನಿರ್ದೇಶಕ ಮನೋಜ್ ಶೇಖರನ್ ಮಾಹಿತಿ ನೀಡಿದರು.
ಕೇಂದ್ರ ಸಚಿವರ ನಿರಂತರ ಪ್ರಯತ್ನದ ಫಲ
ವಿಶ್ವದರ್ಜೆ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಕುರಿತು ಹಲವು ಬಾರಿ ಧಾರವಾಡ ಸಂಸದ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ನಾಗರೀಕ ವಿಮಾನಯಾನ ಸಚಿವಾಲಯ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದರು. ನಿರ್ಮಾಣದ ಅಗತ್ಯತೆ ಕುರಿತು ತಿಳಿಸಿದ್ದರು.

ವಿಮಾನ ನಿಲ್ದಾಣವನ್ನು ವಿಶ್ವದರ್ಜೆ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸುವಂತೆ ಕೇಳಿಕೊಂಡಿದ್ದರು. ಜತೆಗೆ ಈ ವಿಚಾರದಲ್ಲಿ ಅವರು ನಿರಂತರವಾಗಿ ಶ್ರಮಿಸುತ್ತಿದ್ದರು. ಅದಕ್ಕೆ ಇದೀಗ ಪ್ರತಿಫಲ ಸಿಕ್ಕಂತಾಗಿದೆ. ಇನ್ನೆರೆಡೇ ದಿನದಲ್ಲಿ ಪ್ರಧಾನಿ ಅವರಿಂದ ಶಂಕುಸ್ಥಾಪನೆ ನೆರವೇರಿಸುವಲ್ಲಿ ಸಚಿವರು ಸಫಲರಾಗಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಂಡು ನಿಲ್ದಾಣದ ಅಭಿವೃದ್ಧಿಗೆ ಅಗತ್ಯ ಮಾರ್ಗದರ್ಶನ ನೀಡುವಂತೆ ವಿಮಾನ ನಿಲ್ದಾಣ ಪ್ರಾಧಿಕಾರವು ಕೇಂದ್ರ ಸಿಚಿವ ಪ್ರಹ್ಲಾದ್ ಜೋಶಿ ಅವರನ್ನು ಆಹ್ವಾನಿಸಿದೆ.
ಎಷ್ಟು ಕೋಟಿ ವೆಚ್ಚದಲ್ಲಿ ನಿರ್ಮಾಣ
ಹುಬ್ಬಳ್ಳಿ ಇದುದು ಉತ್ತರ ಕರ್ನಾಟಕದ ಹೆಬ್ಬಾಗಿಲು ಮಾತ್ರವಲ್ಲ, ಪ್ರಮುಖ ವಾಣಿಜ್ಯ ಕೇಂದ್ರ ಬಿಂದುವಾಗಿದೆ. ಹೀಗಾಗಿ ಇಲ್ಲಿ ಉನ್ನತ ದರ್ಜೆಯ ವಿಮಾನ ನಿಲ್ದಾಣದ ಅಗತ್ಯವಿತ್ತು. ಹೀಗಾಗಿ ಮಾರ್ಚ್ 10ರಂದು 350 ಕೋಟಿ ರೂಪಾಯಿ ವೆಚ್ಚದಲ್ಲಿ ಮತ್ತೊಂದು ಟರ್ಮಿನಲ್ ಗೆ ಭೂಮಿಪೂಜೆ ನೆರವೇರಿಸಲಾಗುತ್ತದೆ ಎಂದು ಸಚಿವ ಜೋಶಿ ಅವರು ಧಾರವಾಡ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಪಕ್ಷಿ ನೋಟ ಬುಕ್ ಬಿಡುಗಡೆ ವೇಳೆ ತಿಳಿಸಿದರು.
ಹುಬ್ಬಳ್ಳಿ ಬೆಳೆಯುತ್ತಿರುವ ನಗರವಾದ್ದರಿಂದ ಅಗತ್ಯತೆ ಆಧಾರದಲ್ಲಿ ಭವಿಷ್ಯದ ದೃಷ್ಟಿ ಇಟ್ಟುಕೊಂಡು ಏರ್‌ಪೋರ್ಟ್ ವಿಸ್ತರಣೆಗೆ ಚರ್ಚೆಗಳು ನಡೆದಿದ್ದವು. ವಿಮಾನ ಸಂಚಾರ ಮತ್ತು ಮುಂದಿನ ಕೆಲವು ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ನಿಲ್ದಾಣ ವಿಸ್ತರಣೆಗೆ ಕೇಂದ್ರ ಸಚಿವರು ನಿರ್ಧರಿಸಿದ್ದರು. ಎಲ್ಲವು ಅಂದುಕೊಂಡಂತೆ ಆಗಿದ್ದರೆ, ಕಳೆವ ವರ್ಷ ಡಿಸೆಂಬರ್‌ನಲ್ಲಿಯೇ ಕೇಂದ್ರ ನಿಲ್ದಾಣ ವಿಸ್ತರಣೆಗೆ ಅನುಮೋದನೆ ನೀಡಬೇಕಿತ್ತು. ಸದ್ಯ ಈ ಮಾರ್ಚ್‌ನಲ್ಲಿ ಒಪ್ಪಿಗೆ ನೀಡಿದೆ.












Click it and Unblock the Notifications