ಹುಬ್ಬಳ್ಳಿಯಲ್ಲಿ ಮೊದಲಿಗೆ ದೀಪಕ್ ಚಿಂಚೋರೆ ಬೆಂಬಲಿಗನಿಗೆ ಐಟಿ ಗುನ್ನಾ, ನಂತರ ಆಪ್ತೆಗೆ ಚುನಾವಣಾ ಅಧಿಕಾರಿಗಳ ಶಾಕ್
ಹುಬ್ಬಳ್ಳಿ, ಮೇ, 09: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ರಾಜ್ಯದ ಹಲವೆಡೆ ಐಟಿ ಅಧಿಕಾರಿಗಳ ದಾಳಿಯು ಮುಂದುವರೆದಿದ್ದು, ಮತ್ತೊಂದೆ ಚುನಾವಣೆ ಅಧಿಕಾರಿಗಳು ಕೂಡ ದಾಳಿ ಮುಂದುವರೆಸಿದ್ದಾರೆ. ಅದೇ ರೀತಿ ಸೋಮವಾರ (ಮೇ 08) ತಡರಾತ್ರಿ ಕಾಂಗ್ರೆಸ್ ನಾಯಕಿ ದೇವಕಿ ಯೋಗಾನಂದ ಮನೆ ಮೇಲೆ 12 ಜನ ಚುನಾವಣಾಧಿಕಾರಿಗಳು ದಾಳಿ ಮಾಡಿ ಶೋಧ ನಡೆಸಿದ್ದಾರೆ.
ಹುಬ್ಬಳ್ಳಿಯ ಗಾಮನಗಟ್ಟಿಯಲ್ಲಿರುವ ಕಾಂಗ್ರೆಸ್ ನಾಯಕಿ ದೇವಕಿ ನಿವಾಸದಲ್ಲಿ ಮೂರು ಗಂಟೆಗಳ ತಪಾಸಣೆ ನಡೆಸಿದ ಚುನಾವಣಾ ಅಧಿಕಾರಿಗಳು, ಏನು ಸಿಗದೆ ಬರಿಗೈಲ್ಲಿ ವಾಪಾಸ್ ಹೋಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ದೇವಕಿ ಅವರು ಹುಬ್ಬಳ್ಳಿ - ಧಾರವಾಡ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದೀಪಕ್ ಚಿಂಚೋರೆಯ ಆಪ್ತೆ ಎಂದು ತಿಳಿದುಬಂದಿದೆ.

ದೀಪಕ್ ಚಿಂಚೋರೆ ಬೆಂಬಲಿಗನಿಗೆ ಐಟಿ ಶಾಕ್
ಹಾಗೆಯೆ ಸೋಮವಾರವೇ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದೀಪಕ್ ಚಿಂಚೋರೆ ಅವರ ಬೆಂಬಲಿಗ ರಾಬರ್ಟ್ ದದ್ದಾಪುರಿ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು.
ಧಾರವಾಡದ ವಿವೇಕಾನಂದ ನಗರದಲ್ಲಿರುವ ರಾಬರ್ಟ್ ದದ್ದಾಪುರಿ ಅವರ ಮನೆಗೆ ಬಂದ 6 ಜನ ಐಟಿ ಅಧಿಕಾರಿಗಳ ತಂಡ ವಿವಿಧ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ. ಮತ್ತೊಂದೆಡೆ ರಾಬರ್ಟ್ ದದ್ದಾಪುರಿ ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದೀಪಕ್ ಚಿಂಚೋರೆ ಅವರೊಂದಿಗೆ ಗುರುತಿಸಿಕೊಂಡು ಅವರ ಪರ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.












Click it and Unblock the Notifications