ಹುಬ್ಬಳ್ಳಿಯ ನೆಲದಲ್ಲಿ ಉಗ್ರರ ಕ್ಯಾಂಪ್ ಸ್ಥಾಪನೆಗೆ ಯತ್ನ: ಶಂಕಿತ ಐಸಿಸ್‌ ಉಗ್ರರ ಸೆರೆ

ಹುಬ್ಬಳ್ಳಿ, ಅಕ್ಟೋಬರ್‌ 03: ಅತ್ಯಂತ ದೊಡ್ಡ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯೊಂದರಲ್ಲಿ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಮೋಸ್ಟ್‌ ವಾಂಟೆಡ್‌ ಪಟ್ಟಿಯಲ್ಲಿದ್ದ ಮೂವರು ಶಂಕಿತ ಐಸಿಸ್ ಭಯೋತ್ಪಾದಕರನ್ನು ದೆಹಲಿ ವಿಶೇಷ ಸೆಲ್‌ ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಕರ್ನಾಟಕದ ಹುಬ್ಬಳ್ಳಿ-ಧಾರವಾಡ ಹಾಗೂ ಪಶ್ಚಿಮ ಘಟ್ಟದಲ್ಲಿ ಉಗ್ರರ ಕ್ಯಾಂಪ್‌ ಸ್ಥಾಪಿಸುವ ಉದ್ದೇಶ ಹೊಂದಿದ್ದರು ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಬಂಧಿತರನ್ನು ಶಹನವಾಜ್, ಮೊಹಮ್ಮದ್ ರಿಜ್ವಾನ್ ಮತ್ತು ಮೊಹಮ್ಮದ್ ಅರ್ಷದ್ ವಾರ್ಸಿ ಎಂದು ಗುರುತಿಸಲಾಗಿದೆ.

Delhi police Arrested Suspected ISIS Terrorist

ಈ ಪೈಕಿ ಶಹನವಾಜ್‌ನನ್ನು 2 ದಿನದ ಹಿಂದೆಯೇ ಬಂಧಿಸಲಾಗಿತ್ತಾದರೂ ಅಧಿಕೃತವಾಗಿ ಬಂಧನವನ್ನು ಘೋಷಿಸಿರಲಿಲ್ಲ. ಸೋಮವಾರ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಹುಬ್ಬಳ್ಳಿ ಧಾರವಾಡ ಪೊಲೀಸ್‌ ಆಯುಕ್ತೆ ರೇಣುಕಾ ಸುಕುಮಾರ್‌, 'ಸ್ಥಳೀಯರು ಇದರಲ್ಲಿ ಶಾಮೀಲಾದ ಮಾಹಿತಿ ಈವರೆಗೂ ಸಿಕ್ಕಿಲ್ಲ. ಬಂಧಿತರ ಬಗ್ಗೆ ದೆಹಲಿ ಪೊಲೀಸರ ಜೊತೆ ಸಂಪರ್ಕದಲ್ಲಿದ್ದೇವೆ. ನಮ್ಮ ವ್ಯಾಪ್ತಿಯಲ್ಲಿ ಅಂತಹ ಕೃತ್ಯಗಳು ನಡೆಯುತ್ತಿದ್ದರೆ ಕ್ರಮ ಕೈಗೊಳ್ಳಲಾಗುವುದು' ಎಂದಿದ್ದಾರೆ.

ಇವರೆಲ್ಲ ಕರ್ನಾಟಕದ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಘಟ್ಟ ಪ್ರದೇಶದಲ್ಲಿ ತಮ್ಮ ನೆಲೆ ಸ್ಥಾಪಿಸಿ, ಬಳಿಕ ದೇಶದಲ್ಲಿ ಐಸಿಸ್‌ ಉಗ್ರರ ನೆಲೆ ವಿಸ್ತರಿಸಿ ಭಯೋತ್ಪಾದಕ ದಾಳಿ ನಡೆಸಲು ಹಾಗೂ ಅಶಾಂತಿ ಸೃಷ್ಟಿಸಲು ಸಂಚು ರೂಪಿಸಿದ್ದರು. ಈ ಸಂಬಂಧ ದೇಶದ ಪಶ್ಚಿಮ ಮತ್ತು ದಕ್ಷಿಣದ ಭಾಗಗಳನ್ನು ಪರಿಶೀಲನೆ ಮಾಡಿದ್ದರು ಎಂದು ದಿಲ್ಲಿ ಪೊಲೀಸ್‌ ವಿಶೇಷ ಸೆಲ್‌ ಅಧಿಕಾರಿ ಧಾಲಿವಾಲ್‌ ಹೇಳಿದ್ದಾರೆ.

ಇಂಜಿನಿಯರ್‌ಗಳಾಗಿದ್ದ ಶಂಕಿತ ಉಗ್ರರು

ಈತನ ಸ್ನೇಹಿತರು ಪುಣೆ ಉಗ್ರ ಪ್ರಕರಣದಲ್ಲಿ ಕೆಲ ತಿಂಗಳ ಹಿಂದೆ ಬಂಧಿಯಾಗಿದ್ದರು. ಅವರು ಬೆಳಗಾವಿ ಸಮೀಪದ ಮಹಾರಾಷ್ಟ್ರದ ಅಂಬೋಲಿ ಅರಣ್ಯದಲ್ಲಿ ಉಗ್ರ ತರಬೇತಿ ಶಿಬಿರ ನಡೆಸಿದ್ದರು ಎಂದು ಬೆಳಕಿಗೆ ಬಂದಿದೆ‌.

ವಿಶೇಷವೆಂದರೆ ಎಲ್ಲ ಶಂಕಿತ ಉಗ್ರರೂ ಇಂಜಿನಿಯರ್‌ಗಳಾಗಿದ್ದು, ಈ ಪೈಕಿ ವಾರ್ಸಿ ಎಂಬಾತ ಪಿಎಚ್‌ಡಿ ಕೂಡ ಮಾಡುತ್ತಿದ್ದ. ಇವರೆಲ್ಲ ಬಾಂಬ್ ತಯಾರಿಯಲ್ಲಿ ಪರಿಣತರಾಗಿದ್ದರು ಎಂದು ದಿಲ್ಲಿ ಪೊಲೀಸ್‌ ವಿಶೇಷ ಸೆಲ್‌ ಮಾಹಿತಿ ನೀಡಿದೆ.

ದೆಹಲಿ ಪೊಲೀಸ್ ವಿಶೇಷ ಸೆಲ್ ಹಲವಾರು ರಾಜ್ಯಗಳಲ್ಲಿನ ಭಯೋತ್ಪಾದಕ ಜಾಲಗಳನ್ನು ಭೇದಿಸಲು ಎನ್‌ಐಎಯೊಂದಿಗೆ ಕೆಲಸ ಮಾಡುವ ಹಲವಾರು ಏಜೆನ್ಸಿಗಳಲ್ಲಿ ಒಂದಾಗಿದೆ.

ಪುಣೆ ಐಸಿಸ್‌ ಕೇಸಿನಲ್ಲಿ ಬೇಕಾಗಿದ್ದ ಶಹನವಾಜ್‌

ವೃತ್ತಿಯಲ್ಲಿ ಮೈನಿಂಗ್ ಇಂಜಿನಿಯರ್ ಆಗಿರುವ ಶಹನವಾಜ್ ಐಸಿಸ್ ಪುಣೆ ಮಾಡ್ಯೂಲ್ ಪ್ರಕರಣದಲ್ಲಿ ಬೇಕಾಗಿದ್ದ. ಮೂಲಗಳ ಪ್ರಕಾರ, ಶಹನವಾಜ್ ಮೂಲತಃ ದೆಹಲಿಯವನಾದರೂ ಪುಣೆಗೆ ತೆರಳಿದ್ದ. ಜುಲೈನಲ್ಲಿ ಪುಣೆಯಲ್ಲಿ ನಡೆದ ದಾಳಿಯ ವೇಳೆ ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿತ್ತು. ಶಹನವಾಜ್ ಪರಾರಿಯಾಗಿ, ದೆಹಲಿಗೆ ಮರಳಿದ್ದ. ಅಂದಿನಿಂದ ಅಡಗುದಾಣದಲ್ಲಿ ಆತ ವಾಸಿಸುತ್ತಿದ್ದ. ಈತ ತನ್ನ ಹೆಂಡತಿ ಬಸಂತಿಯನ್ನು ಇಸ್ಲಾಂಗೆ ಮತಾಂತರಿಸಿದ್ದ ಎಂದು ಮೂಲಗಳು ಹೇಳಿವೆ.

ಈ ತಿಂಗಳ ಆರಂಭದಲ್ಲಿ, ಶಹನವಾಜ್ ಮತ್ತು ಇತರ ಮೂವರು ಭಯೋತ್ಪಾದಕ ಶಂಕಿತರಾದ ರಿಜ್ವಾನ್ ಅಬ್ದುಲ್ ಹಾಜಿ ಅಲಿ, ಅಬ್ದುಲ್ಲಾ ಫಯಾಜ್ ಶೇಖ್ ಅಲಿಯಾಸ್ ಡಯಾಪರ್ವಾಲಾ ಮತ್ತು ತಲ್ಹಾ ಲಿಯಾಕತ್ ಖಾನ್ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ 3 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಎನ್‌ಐಎ ಘೋಷಿಸಿತ್ತು . ಈ ಪೈಕಿ ಡಯಪರ್ವಾಲಾ ಹಾಗೂ ತಲ್ಹಾ ಇನ್ನೂ ಸಿಕ್ಕಿಲ್ಲ. ಅವರಿಗಾಗಿ ಬಲೆ ಬೀಸಲಾಗಿದೆ.

ಶಹನವಾಜ್, ಅಬ್ದುಲ್ಲಾ ಮತ್ತು ರಿಜ್ವಾನ್ ಅವರು ಐಸಿಸ್ ಸಂಬಂಧಿ ಟೆಲಿಗ್ರಾಮ್ ಅಪ್ಲಿಕೇಶನ್ ಮೂಲಕ ಬ್ರೇನ್‌ವಾಶ್‌ ಆಗಿ ಭಯೋತ್ಪಾದಕರಾಗಿದ್ದರು. ಮಹಾರಾಷ್ಟ್ರದ ಪುಣೆಯಲ್ಲಿರುವ ಐಸಿಸ್ ಮಾಡ್ಯೂಲ್‌ನೊಂದಿಗೆ ಇವರಿಬ್ಬರೂ ನಂಟು ಹೊಂದಿದ್ದರು. ಅವರು ದೇಶಾದ್ಯಂತ ಹಿಂಸಾಚಾರ ಮತ್ತು ಭಯೋತ್ಪಾದನೆಯನ್ನು ಪ್ರಚುರಪಡಿಸಲು ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಮೂಲಗಳ ಪ್ರಕಾರ, ಅಬ್ದುಲ್ಲಾ ಡಯಾಪರ್ವಾಲಾ ಪುಣೆಯಲ್ಲಿ ಡಯಾಪರ್ ಅಂಗಡಿಯನ್ನು ನಡೆಸುತ್ತಿದ್ದ. ಅದನ್ನು ಸ್ಫೋಟಕ ಸಾಧನಗಳನ್ನು ಜೋಡಿಸಲು ಬಳಸಲಾಗುತ್ತಿತ್ತು. ಬಂಧಿತರಿಂದ ಪ್ಲಾಸ್ಟಿಕ್‌ ಟ್ಯೂಬ್‌, ಕಬ್ಬಿಣದ ಪೈಪ್‌, ವಿವಿಧ ರೀತಿಯ ರಾಸಾಯನಿಕ, ಟೈಮಿಂಗ್‌ ಉಪಕರಣ ಮೊದಲಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವೆಲ್ಲವೂ ಸುಧಾರಿತ ಸ್ಫೋಟಕ ತಯಾರಿಸಲು ಬಳಸುವ ವಸ್ತುಗಳಾಗಿರುವ ಕಾರಣ, ಇವರೆಲ್ಲಾ ದೊಡ್ಡ ದುಷ್ಕೃತ್ಯಕ್ಕೆ ಸಜ್ಜಾಗಿದ್ದು ಖಚಿತಪಟ್ಟಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+