ದೆಹಲಿ ಚಲೋ: ರೈತರ ಹೊಸ ಬೇಡಿಕೆಗಳ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದೇನು?
ಹುಬ್ಬಳ್ಳಿ, ಫೆಬ್ರವರಿ 14: ಕಲ್ಲು ಹೊಡೆಯುವುದು ನಿಮ್ಮ ಕೆಲಸವಲ್ಲ. ರೈತರು ಮಾತುಕತೆಗೆ ಬರಬೇಕು. ಅನುಮತಿ ಇಲ್ಲದೆ ಬಂದವರನ್ನು ಪೊಲೀಸರು ತಡೆಯುತ್ತಿದ್ದಾರೆ. ಕೇಂದ್ರ ಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ರೈತರ ಬೇಡಿಕೆ ಈಡೇರಿಸಲು ಸರಕಾರ ಬದ್ಧ ಎಂದು ತಿಳಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಸಚಿವರು, ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ ಸರಿಯಲ್ಲ ಕೃಷಿ ಸಚಿವರು ರೈತ ಮುಖಂಡರ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ರೈತರ ಹೊಸ ಬೇಡಿಕೆಯನ್ನು ಕೇಂದ್ರ ಬಿಜೆಪಿಯು ಪರಿಶೀಲನೆ ಮಾಡುತ್ತಿದೆ. ಸಹಾನುಭೂತಿಯಿಂದ ಎಲ್ಲ ಬೇಡಿಕೆ ಪರಿಶೀಲನೆ ಮಾಡಲಾಗುತ್ತಿದ್ದು, ರೈತರ ಬಗ್ಗೆ ನಾವು ಸಹಾನುಭೂತಿ ಹೊಂದಿದ್ದೇವೆ ಎಂದು ತಿಳಿಸಿದರು.

ಸುಳ್ಳುರಾಮಯ್ಯ ಎಂದು ಕರೆಯುತ್ತೇನೆ: ಜೋಶಿ
ಮುಖ್ಯಮಂತ್ರಿಸಿದ್ದರಾಮಯ್ಯ ಸುಳ್ಳು ಹೇಳೋದನ್ನು ಕಾಯಕ ಮಾಡಿಕೊಂಡಿದ್ದಾರೆ. ಅವರು ಸುಳ್ಳುರಾಮಯ್ಯ. ಅವರನ್ನು ನಾನುಸುಳ್ಳು ರಾಮಯ್ಯ ಎಂದು ಕರೆಯುತ್ತಿದ್ದೇನೆ. ಸಿದ್ದರಾಮಯ್ಯ ಆರ್ಥಿಕ ದುಸ್ಥಿತಿಗೆ ತಂದು ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮೊದಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪರಿಹಾರ ನಿಧಿ ಅಡಿ ಇಷ್ಟು ಪ್ರಮಾಣದ ಹಣ ಕೊಡುತ್ತಿರಲಿಲ್ಲ. ನಾವು ಹೆಚ್ಚು ಕೊಡುತ್ತಿದ್ದೇವೆ. ಬಿ.ಎಸ್. ಯಡಿಯೂರಪ್ಪ ಅದೇ ಹಣವನ್ನು ಬರಗಾಲ ಬಂದಾಗ ಹಂಚಿಕೆ ಮಾಡಿದ್ದಾರೆ. ಸಿದ್ದರಾಮಯ್ಯ ಆರ್ಥಿಕ ದುಸ್ಥಿತಿಗೆ ತಂದು ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ.

ಬಿಜೆಪಿ ಸರ್ಕಾರ ನೀಡಿದ್ದ ಅನುದಾನದ ಲೆಕ್ಕ ಕೊಟ್ಟ ಸಚಿವರು
ನಾವು ಒಂದೇ ಒಂದು ರೂಪಾಯಿ ಜಿಎಸ್‌ಟಿ ಹಣ ಕೊಡೋದು ಕೂಡ ಬಾಕಿ ಇಲ್ಲ ಎಂದು ಸಿದ್ದರಾಮಯ್ಯನವರ ಆರೋಪ ಸರಿಯಲ್ಲ. NDRF ನಲ್ಲಿ ನಾವು 12 ಸಾವಿರ ಕೋಟಿ ಕೊಟ್ಟಿದ್ದೇವೆ. ಡೆವಲೂಷನ್ ಫಂಡ್ ಅವರ ಕಾಲದಲ್ಲಿ 60 ಸಾವಿರ ಕೋಟಿ ಇತ್ತು.
ನಮ್ಮ ಕಾಲದಲ್ಲಿ 2 ಲಕ್ಷ 36 ಸಾವಿರ ಕೋಟಿ ಕೊಟ್ಟಿದ್ದೇವೆ. ತೆರಿಗೆ ಹಂಚಿಕೆಯಲ್ಲಿ 10 ವರ್ಷದಲ್ಲಿ 81 ಸಾವಿರ ಕೋಟಿ ಹೆಚ್ಚಿದೆ.ಇವರು ಯಾವುದೇ ಅನುದಾನ ಕೊಟ್ಟಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ನಾವು ಬಡ್ಡಿ ರಹಿತ ಸಾಲ ಕೊಟ್ಟಿದ್ದೇವೆ. 2004 ರಿಂದ 2014 ರಲ್ಲಿ 1667 ಕೋಟಿ ಹಣ ಬಿಡುಗಡೆ ಆಗಿತ್ತು. ಇನ್ನೂ ಮಹದಾಯಿ ವಿಚಾರ ಅರಣ್ಯ ಇಲಾಖೆ ನಿರಾಕರಣೆ ಮಾಡಿಲ್ಲ ಎಂದು ತಿಳಿಸಿದರು.
ಸಿಎಂ ವಿರುದ್ಧ ಗಂಭೀರ ಆರೋಪ
ಅನುದಾನ ವಿಚಾರವಾಗಿ ಡ್ಯಾಶ್ ಬೋರ್ಡ್ನಲ್ಲಿ ಎಲ್ಲ ಮಾಹಿತಿ ಹಾಕಿದ್ದರು. ಅದನ್ನು ಡೌನ್ಲೋಡ್ ಮಾಡಲು ಬಿಜೆಪಿ ನಾಯಕರಿಗೆ ಸೂಚಿಸಿದ್ದೇವೆ. ಇದೀಗ ಅಂಕಿ-ಅಂಶವೇ ಡಿಲೀಟ್ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಜೋಶಿ ಗಂಭೀರ ಆರೋಪ ಮಾಡಿದರು.
ಸದ್ಯ ವಿವಿಧ ರಾಜ್ಯಗಳ ಜನರು ಕನಿಷ್ಠ ಬೆಂಬಲ ಬೆಲೆಗೆ ಕಾನೂನು ರೂಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ದೆಹಲಿ ಚಲೋ ನಡೆಸಿದ್ದಾರೆ. ದೆಹಲಿಯಲ್ಲಿ ಪ್ರತಿಭಟನೆಗೆ ಸಜ್ಜಾಗಿದ್ದ ರೈತರನ್ನು ಭೂಪಾಲ್, ಹರಿಯಾಣ ಗಡಿಯಲ್ಲಿ ಪೊಲೀಸರು ತಡೆದಿದ್ದಾರೆ. ಮಂಗಳವಾರ ಪೊಲೀಸರ ಜತೆ ರೈತರ ವಾಗ್ವಾದ ಎಲ್ಲೆ ಮೀರಿದ್ದು, ಕಲ್ಲು ತೂರಾಟ ಸಹ ನಡೆದಿವೆ. ದೆಹಲಿ ಚಲೋ ನಡೆಸಿರುವ ರೈತರು ಸಮಾರು ಆರು ತಿಂಗಳಿಗೆ ಆಗುವಷ್ಟು ಬದುಕಿಗೆ ಅಗತ್ಯವಾದ ಸರಕು ತಂದಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications