ಚಂದ್ರಯಾನ-3 ಯಶಸ್ವಿಗೆ ವಿಭಿನ್ನ ರೀತಿಯಲ್ಲಿ ಹಾರೈಸಿದ ಹುಬ್ಬಳ್ಳಿ ಕಲಾವಿದ
ಹುಬ್ಬಳ್ಳಿ, ಆಗಸ್ಟ್, 23: ಭಾರತದ ಐತಿಹಾಸಿಕ ಕ್ಷಣ ಚಂದ್ರಯಾನ-3 ಯಶಸ್ಸಿಗೆ ಇನ್ನೊಂದೇ ಮೆಟ್ಟಿಲಷ್ಟೇ ಬಾಕಿಯಿದ್ದು, ಇಸ್ರೋದ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಂದು ಸಂಜೆ ಲ್ಯಾಂಡ್ ಆಗಲಿದೆ. ಇದಕ್ಕಾಗಿ ಇಡೀ ವಿಶ್ವವೇ ಅದರ ಮೇಲೆ ದೃಷ್ಟಿ ನೆಟ್ಟಿದೆ. ಅಲ್ಲದೆ ಚಂದ್ರಯಾನ-3 ಯಶಸ್ವಿಯಾಗಲೆಂದು ರಾಜ್ಯದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಹಾಗೆಯೇ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಲಾವಿದರೊಬ್ಬರು ರಂಗೋಲಿಯಲ್ಲಿ ಚಂದ್ರಯಾನ -3ರ ವಿಕ್ರಮ್ ಲ್ಯಾಂಡರ್ ಅನ್ನು ತಯಾರು ಮಾಡಿ ಗಮನ ಸೆಳೆದಿದ್ದಾರೆ.
ಹುಬ್ಬಳ್ಳಿಯಲ್ಲಿ ಕಲಾವಿದರೊಬ್ಬರು ಮುಂಜಾಗ್ರತಾ ಕ್ರಮ, ಮಾಹಿತಿ ತಂತ್ರಜ್ಞಾನ ಹಾಗೂ ಉಡಾವಣೆ ಪ್ರಕ್ರಿಯೆಯನ್ನು ರಂಗೋಲಿಯಲ್ಲಿ ತಮ್ಮದೇ ಶೈಲಿಯಲ್ಲಿ ಬಿಡಿಸುವ ಮೂಲಕ ಶುಭಹಾರೈಸಿದ್ದಾರೆ. ನಗರದ ಶಾಂತಿನಿಕೇತನ ಬಡಾವಣೆ ನಿವಾಸಿ ಕಲಾವಿದ ದಿನೇಶ್ ಚಿಲ್ಲಾಳ ಅವರ ರಂಗೋಲಿ ಕಲೆಯಲ್ಲಿ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್‌ನ ಪ್ರತಿಕೃತಿ ಅರಳಿದೆ.

ನಾಲ್ಕು ವರ್ಷಗಳ ಹಿಂದೆ 2019ರಲ್ಲಿ ಚಂದ್ರಯಾನ-2 ರ ಉಡಾವಣೆ ವಿಫಲವಾದ ನಂತರ ಚಂದ್ರಯಾನ-3 ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯಲು ಕ್ಷಣಗಣೆ ಆರಂಭವಾಗಿದೆ. 615 ಕೋಟಿ ರೂಪಾಯಿ ಬಜೆಟ್‌ನೊಂದಿಗೆ ಮಹತ್ವಾಕಾಂಕ್ಷೆಯ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡ್ ಆಗಲಿದೆ.
ನಂತರ ರೋವರ್‌ನ ನಿಯೋಜನೆಯು ವಿವಿಧ ಪ್ರಯೋಗಗಳನ್ನು ನಡೆಸುತ್ತದೆ. ಮತ್ತು ಚಂದ್ರನ ಗುಣಲಕ್ಷಣಗಳಾದ ಭೂಕಂಪನ, ಪ್ಲಾಸ್ಮಾ ಪರಿಸರ ಮತ್ತು ಸಂಯೋಜನೆಯನ್ನು ಅಧ್ಯಯನ ಮಾಡಿರುವ, ಹಾಗೂ ಚಂದ್ರಯಾನ-3 ಮಿಷನ್‌ಗಾಗಿ ಇಸ್ರೋ ಮೂರು ಮುಖ್ಯ ಉದ್ದೇಶಗಳಾದ ಚಂದ್ರನ ಮೇಲೆ ಸುರಕ್ಷಿತ ಮತ್ತು ಸೌಮ್ಯವಾದ ಲ್ಯಾಂಡಿಂಗ್ ಅನ್ನು ಯಶಸ್ವಿಯಾಗಿ ಸಾಧಿಸುವುದು, ಚಂದ್ರನ ಮೇಲ್ಮೈಯಲ್ಲಿ ಚಲಿಸುವ ರೋವರ್ ಸಾಮರ್ಥ್ಯವನ್ನು ಪ್ರದರ್ಶಿಸುವುದು, ನೇರವಾಗಿ ವೈಜ್ಞಾನಿಕ ವೀಕ್ಷಣೆಗಳನ್ನು ನಡೆಸುವುದು ಮುಂತಾದ ಮಾಹಿತಿಯನ್ನು ರಂಗೋಲಿ ಮೂಲಕ ಬಿಂಬಿಸಿದ್ದಾರೆ.
ಹೀಗೆ ಕಲಾವಿದ ದಿನೇಶ್ ಚಿಲ್ಲಾಳ ಅವರು ಚಂದ್ರಯಾನ-5 ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.












Click it and Unblock the Notifications