ಹುಬ್ಬಳ್ಳಿ: ಅಂಜಲಿ ಹತ್ಯೆ, ಪೊಲೀಸರ ಕೈ ಸೇರದ ಚಾಕು!
ಹುಬ್ಬಳ್ಳಿ, ಮೇ 26: ಹುಬ್ಬಳ್ಳಿಯ ವೀರಾಪುರ ಓಣಿಯ ಯುವತಿ ಅಂಜಲಿ ಕೊಲೆ ಪ್ರಕರಣದ ಆರೋಪಿ ಗಿರೀಶ ಸಾವಂತನ ವಿಚಾರಣೆಯನ್ನು ಸಿಐಡಿ ಪೊಲೀಸರು ಮುಂದುವರೆಸಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೂ ವಿಚಾರಣೆ ನಡೆಯಿತು.
ವಿಚಾರಣೆ ವೇಳೆ ಆರೋಪಿ ಹೇಳಿಕೆ ಬದಲಿಸುತ್ತಿರುವುದರಿಂದ ಸಿಐಡಿ ಪೊಲೀಸರಿಗೆ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಕೃತ್ಯಕ್ಕೆ ಬಳಸಿದ್ದ ಚಾಕು ಸಹ ಪತ್ತೆಯಾಗದಿರುವುದು ಸಾಕ್ಷ್ಯದ ಕೊರತೆ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಆಳವಾದ ತನಿಖೆ ನಡೆಸಲು ಮುಂದಾಗಿರುವ ಪೊಲೀಸರು, ಮತ್ತೊಮ್ಮೆ ಆರೋಪಿಯ ಸ್ನೇಹಿತರ, ಸಂಬಂಧಿಕರ ಹಾಗೂ ಪೋಷಕರನ್ನು ಠಾಣೆಗೆ ಕರೆಸಿ ಇನ್ನಷ್ಟು ಮಾಹಿತಿ ಸಂಗ್ರಹಿಸಲು ಸಿದ್ಧತೆ ನಡೆಸಿದ್ದಾರೆ.

ಆಟೋದಲ್ಲಿ ಬಂದಿದ್ದ: ಆರೋಪಿ ಗಿರೀಶ ಮೇ 15ರಂದು ಯಾರ ಆಟೋದಲ್ಲಿ ಬಂದಿದ್ದ ಎನ್ನುವ ಜಾಡು ಹಿಡಿದು, ಆಟೋ ಚಾಲಕರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಅಂದು ಬೆಳಗ್ಗೆ 5.10ಕ್ಕೆ ಅಂಜಲಿ ಮನೆಗೆ ಆರೋಪಿ ಗಿರೀಶ ಆಟೋದಲ್ಲಿ ಬಂದು ಕೊಲೆ ಮಾಡಿದ್ದ.
ಆಟೋ ಚಾಲಕ ಲೋಹಿಯಾ ನಗರದವರಾಗಿದ್ದು, ಹೊಸ ಬಸ್ ನಿಲ್ದಾಣದಿಂದ ಆಟೋ ಬಾಡಿಗೆ ಓಡಿಸುತ್ತಿದ್ದರು. ಅಲ್ಲಿಂದ ಬೆಳಗ್ಗೆ 4.45ರ ವೇಳೆಗೆ ಆಟೋ ಬಾಡಿಗೆ ಮಾಡಿಕೊಂಡು ವೀರಾಪುರ ಓಣಿಗೆ ಗಿರೀಶ್ ಬಂದಿದ್ದ. ಚಾಲಕ ಅವನನ್ನು ಅಂಜಲಿ ಮನೆ ಬಳಿ ಬಿಟ್ಟು ತೆರಳಿದ್ದರು. ಹೊಸ ಬಸ್ ನಿಲ್ದಾಣದಿಂದ ವೀರಾಪುರ ಓಣಿಯ ಅಂಜಲಿ ಮನೆವರೆಗೆ ಲಭ್ಯವಿರುವ ಎಲ್ಲ ಸಿಸಿ ಟಿವಿ ಕ್ಯಾಮೆರಾಗಳನ್ನು ಸಿಐಡಿ ಪೊಲೀಸರು ಪರಿಶೀಲಿಸಿದ್ದಾರೆ.
ಆಟೋ ಚಾಲಕರನ್ನು ಬೆಂಡಿಗೇರಿ ಠಾಣೆಗೆ ಕರೆಸಿ ವಿಚಾರಣೆ ನಡೆಸಿರುವ ಪೊಲೀಸರು, ಆರೋಪಿ ಜೊತೆ ಇರುವ ಸಂಬಂಧದ ಕುರಿತು ಪ್ರಶ್ನಿಸಿದ್ದಾರೆ. ಆದರೆ, ಅವರಿಗೂ ಆರೋಪಿಗೂ ಯಾವುದೇ ಸಂಬಂಧವಿಲ್ಲದಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ತನಿಖೆಗೆ ಸಹಕರಿಸುವಂತೆ ಚಾಲಕರಿಗೆ ಪೊಲೀಸರು ತಿಳಿಸಿದ್ದು, ಅವರಿಂದ ಮುಚ್ಚಳಿಕೆ ಸಹ ಬರೆಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗಿರೀಶ ವಿರುದ್ಧ ಬೆಂಡಿಗೇರಿ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಅಪ್ರಾಪ್ತೆಯಿಂದ ಹಣ ಹಾಗೂ ಚಿನ್ನಾಭರಣಗಳನ್ನು ಪಡೆದಿದ್ದು, ಅದನ್ನು ವಾಪಸ್ ನೀಡದೆ ವಂಚಿಸಿದ ಪ್ರಕರಣ ಇದಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಶನಿವಾರ ಚಿನ್ನಾಭರಣ ಕೊಡುವ ಸಂದರ್ಭದಲ್ಲಿದ್ದ ಇಬ್ಬರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಆರೋಪಿ ಗಿರೀಶ ಪರ ವಕಾಲತ್ತು ವಹಿಸಲು ವಕೀಲರು ಮುಂದೆ ಬರದಿರಲು ನಿರ್ಧರಿಸಿದ್ದಾರೆ. ಸಮಾಜಘಾತುಕ ಶಕ್ತಿಗಳ ಪರವಾಗಿ ವಾದ ಮಂಡಿಸಲು ಮುಂದಾದರೆ, ಅಂತಹ ಮನಸ್ಥಿತಿಯವರಿಗೆ ಪ್ರಚೋದನೆ ನೀಡಿದಂತಾಗುತ್ತದೆ ಎನ್ನುತ್ತಿದ್ದಾರೆ ವಕೀಲರು.
ಈ ಕುರಿತು ಪ್ರತಿಕ್ರಿಯಿಸಿದ ಹುಬ್ಬಳ್ಳಿ ವಕೀಲರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಅಶೋಕ ಅಣೇಕರ, "ಅಂಜಲಿ ಕೊಲೆ ಆರೋಪಿ ಪರ ಯಾರೂ ವಕಲಾತ್ತು ವಹಿಸಬಾರದು ಎಂದು ನಾವು ಈಗಾಗಲೇ ಮೌಖಿಕವಾಗಿ ಚರ್ಚಿಸಿ ತೀರ್ಮಾನ ತೆಗೆದುಕೊಂಡಿದ್ದೇವೆ. ಅಂಥವರ ಪರ ನಾವು ವಾದ ಮಂಡಿಸಿದರೆ, ಕೊಲೆ ಮಾಡಿದರು ಸಹ ವಕೀಲರು ಸಹಾಯಕ್ಕೆ ಬರುತ್ತಾರೆ ಎನ್ನುವ ಹುಂಬುತನ ಪ್ರದರ್ಶಿಸಬಹುದು" ಎಂದರು.
"ಒಂದು ವೇಳೆ ಯಾವ ವಕೀಲರು ಅವನ ಪರ ವಾದ ಮಂಡಿಸದಿದ್ದರೆ, ಕೋರ್ಟ್ ಮೂಲಕ ಕಾನೂನು ಸೇವಾ ಪ್ರಾಧಿಕಾರ ಒಬ್ಬ ವಕೀಲರನ್ನು ನೇಮಕ ಮಾಡುತ್ತದೆ. ಚಾರ್ಚ್‌ಶೀಟ್ ಸಲ್ಲಿಕೆಯಾದ ನಂತರ ವಾದ-ಪ್ರತಿವಾದ ನಡೆಸಲು ವಕೀಲರು ಅಗತ್ಯವಿದೆ" ಎಂದು ಹೇಳಿದರು.
ಮಹಿಳೆಯ ವಿಚಾರಣೆ: ಆರೋಪಿ ಗಿರೀಶ ಅಂಜಲಿ ಕೊಲೆಯ ನಂತರ ರೈಲಿನ ತೆರಳಿದ್ದ. ಆಗ ಗದಗ ಮೂಲದ ಮಹಿಳೆ ಲಕ್ಷ್ಮೀ ಎನ್ನುವವರಿಗೆ ದಾವಣಗೆರೆ ಬಳಿ ರೈಲಿನಲ್ಲಿಯೇ ಚಾಕು ಇರಿದಿದ್ದ. ಭಾನುವಾರ ಪೊಲೀಸರು ಚಾಕು ಇರಿತಕ್ಕೆ ಒಳಗಾದ ಲಕ್ಷ್ಮೀಯನ್ನು ಕರೆಸಿಕೊಂಡು ಗಿರೀಶನ ಮುಂದೆಯೇ ಘಟನೆ ವಿವರಣೆ ಕೇಳಿ, ವಿಚಾರಣೆ ನಡೆಸಿದರು.
ಮತ್ತೊಂದು ಕಡೆ ಅಂಜಲಿ ಕೊಲೆ ಪ್ರಕರಣದ ತನಿಖೆ ಯಾರು ಮಾಡುತ್ತಿದ್ದಾರೆ? ಎಂದು ಮಾಹಿತಿ ಪಡೆದುಕೊಂಡಿದ್ದೇನೆ ಎಂದು ನೇಹಾ ತಂದೆ ನಿರಂಜನ ಹಿರೇಮಠ ಹೇಳಿದರು. ಸಿಐಡಿ ಅಧಿಕಾರಿಗಳನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, "ನಾನು ಇಂದು ಸಿಐಡಿ ಅಧಿಕಾರಿಗಳ ಭೇಟಿಗೆ ಸಮಯ ಕೇಳಿದ್ದೆ. ನಾನು ಕೂಡ ಕೆಲವು ಮಾಹಿತಿಯನ್ನು ಹೇಳಿದ್ದೇನೆ" ಎಂದರು.
"ಕಳೆದ ಒಂದು ತಿಂಗಳಿಂದ ನನ್ನ ಮಗಳಾದ ನೇಹಾ ಹತ್ಯೆ ಕೇಸ್ ತನಿಖೆ ನಡೆಯಿತ್ತಿದ್ದು, ಈ ಕುರಿತಾಗಿ ಕೆಲವು ಮಾಹಿತಿ ಕೇಳಿದ್ದೆ. ಅವರು ತನಿಖೆ ನಡೆಯುತ್ತಿದೆ ಅಂತ ತಿಳಿಸಿದರು. ಇದುವರೆಗೂ ನೇಹಾ ಕೇಸ್‌ನಲ್ಲಿ ಒಬ್ಬರನ್ನು ಮಾತ್ರ ಬಂಧಿಸಿದ್ದಾರೆ. ನಾನು ಇದನ್ನು ಅಧಿಕಾರಿಗಳ ಬಳಿ ಪ್ರಶ್ನೆ ಮಾಡಿದ್ದೇನೆ" ಎಂದು ಹೇಳಿದರು.












Click it and Unblock the Notifications