ವೈದ್ಯರ ನಿರ್ಲಕ್ಷ್ಯ: ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಸಾವು
ಹಾಸನ, ಸೆಪ್ಟೆಂಬರ್ 18: ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಹಠಾತ್ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.
ವೈದ್ಯರ ಕರ್ತವ್ಯ ನಿರ್ಲಕ್ಷ್ಯತೆಯಿಂದ ಸಾವು ಸಂಭವಿಸಿದೆ ಎಂದು ಮೃತನ ಸಂಬಂಧಿಕರು ಬೇಲೂರು ಪಟ್ಟಣದ ತಾಲೂಕು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿ ಪ್ರತಿಭಟನೆ ಜೋರಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಡಿಎಚ್‌ಓ ಡಾ.ಶಿವಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೇಲ್ನೋಟಕ್ಕೆ ವೈದ್ಯನ ಕರ್ತವ್ಯ ಲೋಪ ಸಾಬೀತಾಗಿದೆ ಎನ್ನಲಾಗಿದೆ.

ಹೆಬ್ಬಾಳು ಗ್ರಾಮದ ಶಿವಣ್ಣ (60) ನಿನ್ನೆ ರಾತ್ರಿ ಎದೆ ನೋವಿನಿಂದ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ಅರವಳಿಕೆ ತಜ್ಞ ಡಾ.ಹರ್ಷ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡದೆ ಕರ್ತವ್ಯ ಲೋಪ ಎಸೆಗಿದ್ದಾರೆ ಎನ್ನಲಾಗಿದೆ. ಶಿವಣ್ಣ ಸೂಕ್ತ ಚಿಕಿತ್ಸೆ ಸಿಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಡಿಎಚ್‌ಓ ಡಾ.ಶಿವಸ್ವಾಮಿ ತಾಲೂಕು ವೈದ್ಯಾಧಿಕಾರಿ ಹಾಗೂ ರಾತ್ರಿ ಕರ್ತವ್ಯದಲ್ಲಿದ್ದ ನರ್ಸ್‌ಗೆ ನೋಟೀಸ್ ನೀಡುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಡಾ.ಹರ್ಷ ಅಮಾನತು ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಮೃತರ ಕುಟುಂಬಸ್ಥರು ಪ್ರತಿಭಟನೆ ವಾಪಾಸ್ ಪಡೆದಿದ್ದಾರೆ. ಈ ವೇಳೆ ಹೋರಾಟ ನಿರತರ ಪರ ನಿಂತು ವೈದ್ಯರ ನಿರ್ಲಕ್ಷದ ಬಗ್ಗೆ ಬೇಲೂರು ಶಾಸಕ ಎಚ್.ಕೆ.ಸುರೇಶ್ ಅಸಮಾಧಾನ ಹೊರಹಾಕಿದ್ದಾರೆ. ಮುಂದೆ ಇಂತಹ ಘಟನೆ ಮರುಕಳಿಸದಂತೆ ಸೂಚಿಸಿದ್ದಾರೆ. ಶಾಸಕರ ಮಾತಿನ ಬಳಿಕ ಪ್ರತಿಭಟನೆ ವಾಪಾಸ್ ಪಡೆದ ಮೃತರ ಕುಟುಂಬಸ್ಥರು ಶವವನ್ನು ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗಿದ್ದಾರೆ.












Click it and Unblock the Notifications