Suraj Revanna: ಎಂಎಲ್‌ಸಿ ಸೂರಜ್ ರೇವಣ್ಣ ಕೇಸ್ ಸಿಐಡಿಗೆ ಹಸ್ತಾಂತರ
ಹಾಸನ, ಜೂನ್ 23: ಮಾಜಿ ಸಚಿವ, ಜೆಡಿಎಸ್ ನಾಯಕ ಎಚ್. ಡಿ. ರೇವಣ್ಣ ಪುತ್ರ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಬಂಧಿಸಲಾಗಿದೆ. ಸೂರಜ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ಕರ್ನಾಟಕ ಸರ್ಕಾರ ಸಿಐಡಿಗೆ ವಹಿಸಿದೆ.
ಭಾನುವಾರ ಮುಂಜಾನೆ ಹಾಸನದ ಹೊಳೆನರಸೀಪುರದ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಪ್ರರಕಣದ ಸಂಬಂಧ ಸೂರಜ್ ರೇವಣ್ಣ ಬಂಧಿಸಲಾಗಿದೆ. ಸದ್ಯ ಆರೋಪಿಯ ವೈದ್ಯಕೀಯ ಪರೀಕ್ಷೆ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ನಡೆಯುತ್ತಿದೆ.

ಈ ನಡುವೆ ಕರ್ನಾಟಕ ಸರ್ಕಾರ ಸೂರಜ್ ರೇವಣ್ಣ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಆದೇಶಿಸಿದೆ. ಸೂರಜ್ ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್ 377, 342, 506 ಅಡಿ ಕೇಸ್ ದಾಖಲಾಗಿದ್ದು, ಸದ್ಯ ಆರೋಪಿ ಹಾಸನ ಪೊಲೀಸರ ವಶದಲ್ಲಿದ್ದಾರೆ.
ಸಿಐಡಿ ತನಿಖೆಗೆ ಆದೇಶ: ಜೆಡಿಎಸ್ ನಾಯಕ, ಎಂಎಲ್‌ಸಿ ಸೂರಜ್ ರೇವಣ್ಣ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವ ಕುರಿತು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆರ್. ಹಿತೇಂದ್ರ ಆದೇಶ ಹೊರಡಿಸಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಸಂಖ್ಯೆ 92/2024 ಅನ್ನು ಮುಂದಿನ ತನಿಖೆಗಾಗಿ ತಕ್ಷಣದಿಂದಲೇ ಸಿಐಡಿಗೆ ವಹಿಸಲಾಗಿದೆ. ಪ್ರಕರಣವನ್ನು ತನಿಖೆಗಾಗಿ ಸಿಐಡಿಗೆ ವಹಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗೆ ಕಡತಗಳನ್ನುಸಿಐಡಿಗೆ ಖುದ್ದಾಗಿ ಹಸ್ತಾಂತರ ಮಾಡಲು ಸೂಚನೆ ನೀಡಬೇಕು. ಸಿಐಡಿ ಡಿಜಿಪಿ ಪ್ರಕರಣದ ತನಿಖೆಗೆ ಅಗತ್ಯವಿರುವ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹಾಸನ ಪೊಲೀಸರು ಸೂರಜ್ ರೇವಣ್ಣ ವಿರುದ್ಧ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ವಿಚಾರಣೆಗಾಗಿ ಸಕಲೇಶಪುರ ಡಿವೈಎಸ್ಪಿ ಪ್ರಮೋದ್ ಕುಮಾರ್ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಿದ್ದರು.
ಶನಿವಾರ ಸಂಜೆಯಿಂದ ಭಾನುವಾರ ಮುಂಜಾನೆ 4 ಗಂಟೆವರೆಗೂ ತನಿಖಾಧಿಕಾರಿ ಹಾಸನ ನಗರದ ಸೆನ್ ಠಾಣೆಯಲ್ಲಿ ಸೂರಜ್ ರೇವಣ್ಣ ವಿಚಾರಣೆ ನಡೆಸಿದ್ದರು. ಬಳಿಕ ಅಲ್ಲೇ ಅವರಿಗೆ ಮಲಗಲು ವ್ಯವಸ್ಥೆ ಮಾಡಿದ್ದರು. ಭಾನುವಾರ ಮುಂಜಾನೆ 8 ಗಂಟೆಗೆ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಯುವಕ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ಸೂರಜ್ ರೇವಣ್ಣ ಆಪ್ತ ದೂರು ದಾಖಲು ಮಾಡಿದ್ದಾರೆ. ಈ ಕುರಿತು ವಿವರಣೆ ನೀಡಲು ಠಾಣೆಗೆ ಬಂದಿದ್ದ ಸೂರಜ್ ರೇವಣ್ಣರನ್ನು ಪೊಲೀಸರು ಶನಿವಾರ ತಮ್ಮ ವಶಕ್ಕೆ ಪಡೆದಿದ್ದರು. ಭಾನುವಾರ ಬಂಧಿಸಿದ್ದಾರೆ.
ಸೂರಜ್ ರೇವಣ್ಣ ಹಾಲಿ ವಿಧಾನ ಪರಿಷತ್ ಸದಸ್ಯರು. ಆದ್ದರಿಂದ ಅವರ ವಿರುದ್ಧದ ಪ್ರಕರಣದ ವಿಚಾರಣೆ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ನಡೆಯಲಿದೆ. ವೈದ್ಯಕೀಯ ಪರೀಕ್ಷೆ ಬಳಿಕ ನ್ಯಾಯಾಧೀಶರ ಮುಂದೆ ಆರೋಪಿಯನ್ನು ಹಾಜರುಪಡಿಸಿ ಬಳಿಕ ಹಾಸನ ಪೊಲೀಸರು ಅವರನ್ನು ಬೆಂಗಳೂರಿಗೆ ಕರೆದುಕೊಂಡು ಬರಲಿದ್ದಾರೆ.
ಬೆಂಗಳೂರಿನ ಸಿಐಡಿ ಕಛೇರಿಗೆ ಸಂಜೆ ಸೂರಜ್ ರೇವಣ್ಣರನ್ನು ಕರೆದುಕೊಂಡು ಬಂದು ಪ್ರಕರಣವನ್ನು ಸಿಐಡಿ ತನಿಖೆಗೆ ಹಸ್ತಾಂತರ ಮಾಡಲಾಗುತ್ತದೆ. ಸೋಮವಾರ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮುಂದೆ ಸೂರಜ್ ರೇವಣ್ಣರನ್ನು ಸಿಐಡಿ ಪೊಲೀಸರು ಹಾಜರುಪಡಿಸುವ ಸಾಧ್ಯತೆ ಇದೆ.












Click it and Unblock the Notifications