Budget 2023: ಧಾರವಾಡಕ್ಕೂ, ನಿರ್ಮಲಾ ಸೀತಾರಾಮನ್ ಕೆಂಪು ಸೀರೆಗೂ ನಂಟು!
ಧಾರವಾಡ ಫೆಬ್ರವರಿ 1: ಸಂಸತ್ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-2024ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ. ತಮ್ಮ 5ನೇ ಬಜೆಟ್ ಮಂಡನೆಗಾಗಿ ಬುಧವಾರ ನಿರ್ಮಲಾ ಸೀತಾರಾಮನ್ ಸಂಸತ್ತಿಗೆ ಆಗಮಿಸಿದ್ದು, ಧಾರವಾಡ ಜಿಲ್ಲೆಯ ನವಲಗುಂದದ ಕಸೂತಿ ಕಲೆ ಇರುವ ಕೆಂಪು (ಮರೂನ್) ಬಣ್ಣದ ಸೀರೆಯುಟ್ಟು ಬಂದಿರುವುದು ವಿಶೇಷವಾಗಿತ್ತು.
ಧಾರವಾಡ ಕಸೂತಿ ಕಲೆಯಿರುವ ಸೀರೆಯುಟ್ಟು ಕೇಂದ್ರ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ @nsitharaman.
— Pralhad Joshi (@JoshiPralhad) Februar…
ನಮ್ಮ ಜಿಲ್ಲೆಯ ನವಲಗುಂದ ಕಸೂತಿ ಕಲೆ ಇರುವ ಕೆಂಪು (ಮರೂನ್ ಕಲರ್) ಬಣ್ಣದ ಸೀರೆಯುಟ್ಟು ಬಂದು ಅತ್ಯಂತ ಅಭಿವೃದ್ಧಿ ಪೂರಕ ಬಜೆಟ್ ಮಂಡಿಸಿದ್ದು ನಮಗೇಲ್ಲರಿಗೂ ಹೆಮ್ಮೆಯ ವಿಷಯ.#AmritKaalBudget #Budget2023 pic.twitter.com/WMauxOPU2oನಿರ್ಮಲಾ ಸೀತಾರಾಮನ್ ಸಂಸತ್ತಿಗೆ ಧರಿಸಿ ಬಂದಿದ್ದ ಆಕರ್ಷಣೀಯವಾಗಿದ್ದ ಸೀರೆಗೆ ಕಸೂತಿ ಹಾಕಿ ವಿಶೇಷವಾಗಿ ರೂಪಿಸಿದ್ದು ಕರ್ನಾಟಕದ ಧಾರವಾಡ ನಗರದ ನಾರಾಯಣಪುರದಲ್ಲಿ ಇರುವ ಆರತಿ ಹಿರೇಮಠ ಮಾಲೀಕತ್ವದ ಆರತಿ ಕ್ರಾಪ್ಟ್ಸ್ ನ ಮಹಿಳಾ ಸಿಬ್ಬಂದಿ ಎನ್ನುವುದು ಇನ್ನೂ ವಿಶೇಷವಾಗಿದೆ.
ಜಿಲ್ಲೆಯ ಸಂಸದರು, ಕೇಂದ್ರ ಸಚಿವರು ಆಗಿರುವ ಪ್ರಹ್ಲಾದ ಜೋಶಿ, ನವಲಗುಂದ ಕಸೂತಿ ಕಲೆ ಬಗ್ಗೆ, ಸಾಂಸ್ಕೃತಿಕ ಶ್ರೀಮಂತಿಕೆ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಾರ್ಯಕ್ರಮ ಒಂದರಲ್ಲಿ ವಿವರಿಸಿ, ಕೆಲವು ಸೀರೆಗಳನ್ನು ಜಿಲ್ಲೆಯ ಪರವಾಗಿ ಉಡುಗೊರೆಯಾಗಿ ನೀಡಿದ್ದರು. ಈ ಸೀರೆಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿ ಸೈಯದ್ ನಯೀಮ್ ಅಹ್ಮದ್ ಮೂಲಕ ಕಸೂತಿ ಪರಿಣಿತರನ್ನು ಗುರುತಿಸಿ, ಕಸೂತಿ ಸೀರೆ ತಯಾರಿಕೆಗೆ ಸೂಚಿಸಿದ್ದರು.
ಆರತಿ ಕ್ರಾಪ್ಟ್ಸ್ ಮಾಲೀಕರಾದ ಆರತಿ ಹಿರೇಮಠ ಅವರು ಸಂತಸದಿಂದ ಸೀರೆ ಕಸೂತಿ ಕಾರ್ಯ ಆರಂಭಿಸಿದ್ದರು. ಕಳೆದ 32 ವರ್ಷಗಳಿಂದ ಕಸೂತಿ ಕ್ಷೇತ್ರದಲ್ಲಿ ತೊಡಗಿ ಕೊಂಡಿರುವ ಆರತಿ ಅವರು, ಸುಮಾರು 210 ಜನ ಮಹಿಳೆಯರ ತಂಡ ಕಟ್ಟಿ, ಅವರಿಗೆ ಅಗತ್ಯವಿರುವ ಕಸೂತಿ ತರಬೇತಿ ನೀಡಿ, ಸ್ವಯಂ ಉದ್ಯೋಗ ನೀಡಿದ್ದಾರೆ.
ಗ್ರಾಹಕರಿಂದ ಕಸೂತಿ ಸಾರಿ, ಶಲ್ಯೆ, ಉಡುಗೆಗಳ ಬೇಡಿಕೆ ಪಡೆಯುವ ಆರತಿ ಹಿರೇಮಠ ಅವರು ಕಸೂತಿ ಮಾಡುವ ತಮ್ಮ ಮಹಿಳಾ ಸಿಬ್ಬಂದಿ ಮನೆಗೆ ತೆರಳಿ, ಪರಿಕರ ಪೂರೈಸುತ್ತಾರೆ ಮತ್ತು ಸಿದ್ಧವಾದ ವಸ್ತುಗಳನ್ನು ತಾವೇ ಸಂಗ್ರಹ ಮಾಡುತ್ತಾರೆ.
ಕೇಂದ್ರ ಹಣಕಾಸು ಸಚಿವರಿಗೆ ಕಳುಹಿಸಿದ್ದ ಸೀರೆಗಳ ವಿಶೇಷತೆ ಏನು..?
ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮ್ ಅವರ ಆಸಕ್ತಿ ಹಾಗೂ ಬೇಡಿಕೆಯಂತೆ ಧಾರವಾಡದಿಂದ ಸೀರೆಗಳನ್ನು ಕಳುಹಿಸಲಾಗಿದ್ದು, ಅದರಲ್ಲಿ ಬಜೆಟ್ ಮಂಡನೆ ವೇಳೆ ಅವರು ತೊಟ್ಟಿರುವ ಕೆಂಪು(ಮರೂನ್) ಬಣ್ಣದ ಸೀರೆಯೂ ಒಂದಾಗಿದೆ.
ಕೈಮಗ್ಗದಲ್ಲಿ ನೇಯ್ದ ಇಳಕಲ್ ರೇಷ್ಮೆ ಸೀರೆಗಳಿಗೆ ಸಾಂಪ್ರದಾಯಿಕ ಧಾರವಾಡ ಕಸೂತಿ ಹಾಕಲಾಗಿದೆ. ಐದೂವರೇ ಮೀಟರ್ ಉದ್ದದ ಇಳಕಲ್ ಸೀರೆಗೆ ಚಿಕ್ಕಪರಾಸ್ ದಡಿಯಿದ್ದು, ತೇರು, ಗೋಪುರ, ನವಿಲು, ಕಮಲದ ಚಿತ್ರಗಳ ಕಸೂತಿ ಹಾಕಲಾಗಿದೆ.
ಕೈಮಗ್ಗ ಉದ್ಯಮಕ್ಕೆ ಪ್ರೋತ್ಸಾಹಿಸುವ ಮತ್ತು ಸ್ವಯಂ ಉದ್ಯೋಗ ನಿರತ ಮಹಿಳೆಯರನ್ನು ಬೆನ್ನು ತಟ್ಟುವ ಕೇಂದ್ರ ಸಚಿವರ ಈ ನಡೆ ಧಾರವಾಡ ಜನತೆಯ ಖುಷಿಗೆ ಕಾರಣವಾಗಿದೆ.
"ಕೇಂದ್ರ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಇಡೀ ದೇಶ, ಜಗತ್ತು ನಿರ್ಮಲಾ ಸೀತಾರಾಮನ್ ಅವರತ್ತ ದೃಷ್ಟಿ ನೆಟ್ಟಿರುತ್ತದೆ. ಅವರು ನಮ್ಮೂರಿನ ಸೀರೆಯಲ್ಲಿ ಬಲಿಷ್ಠ ಭಾರತ ದೇಶದ ಬಜೆಟ್ ಮಂಡಿಸುತ್ತಿರುವುದು ನಮ್ಮ ಜಿಲ್ಲೆ, ರಾಜ್ಯಕ್ಕೆ ಹೆಮ್ಮೆ ಮೂಡಿಸಿದೆ. ಮತ್ತು ಕಸೂತಿ ಅಂತಹ ಗ್ರಾಮೀಣ ಕಲೆಗಳಿಗೆ, ಮಹಿಳೆಯರಿಗೆ ಈ ಮೂಲಕ ಬೆಂಬಲಿಸಿ, ಪ್ರೋತ್ಸಾಹ ನೀಡುತ್ತಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಸೂತಿ ಕಲೆ ತಜ್ಞೆ ಆರತಿ ಹಿರೇಮಠ ಕೃತಜ್ಞತೆ ಸಲ್ಲಿಸಿದ್ದಾರೆ"














Click it and Unblock the Notifications