ದಾವಣಗೆರೆಯ ಈ ಹೋಟೆಲ್‌ನಲ್ಲಿ ಸಿಗುವುದು ಅಪ್ಪು ಅಚ್ಚುಮೆಚ್ಚಿನ ಅಡುಗೆ!
ದಾವಣಗೆರೆ, ಅಕ್ಟೋಬರ್ 29: ಕರುನಾಡಿನ ಕಣ್ಮಣಿ, ಕೋಟ್ಯಂತರ ಅಭಿಮಾನಿಗಳ ಪಾಲಿನ ಆರಾಧ್ಯ ದೈವ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನಗಲಿ ಒಂದು ವರ್ಷವಾಗಿದೆ. ಹೀಗಾಗಿ ಅರ್ಥಪೂರ್ಣವಾಗಿ ಅಪ್ಪು ಅವರನ್ನು ಸ್ಮರಿಸುವ ಕಾರ್ಯ ದಾವಣಗೆರೆ ಜಿಲ್ಲೆಯಾದ್ಯಂತ ನಡೆಯಿತು.
ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ದಾವಣಗೆರೆ ವಿವಿಧೆಡೆ ಅನ್ನಸಂತರ್ಪಣೆ, ಪುನೀತ್ ಗಾನ ನಮನ, ರಕ್ತದಾನ, ಸೇರಿದಂತೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಸಾಮಾಜಿಕ ಸೇವಾ ಕೆಲಸಗಳನ್ನು ನೆರವೇರಿಸಿದ್ದಾರೆ.
ದಾವಣಗೆರೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ನಗರದ ಕೆ. ಬಿ. ಬಡಾವಣೆಯಲ್ಲಿ ಪುನೀತ್ ರಾಜಕುಮಾರ್ ನಮ್ಮನ್ನಗಲಿ ಒಂದು ವರ್ಷವಾದ ಕಾರಣ ಅನ್ನಸಂತರ್ಪಣೆ ಆಯೋಜಿಸಿದ್ದರು.

ಅಪ್ಪು ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿದ ಅಭಿಮಾನಿಗಳು
ಮಟಿಕಲ್ ಸ್ವಾಮಿ, ಬಸವರಾಜ್ ನೇತೃತ್ವದಲ್ಲಿ ಆಯೋಜಿಸಿದ್ದ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಮಂದಿ ಭೋಜನ ಸ್ವೀಕರಿಸಿದರು. ಅನ್ನದಾನ ಕಾರ್ಯಕ್ರಮದಲ್ಲಿ ಜನರಿಗಾಗಿ ಕೇಸರಿಬಾತ್, ಪಲಾವ್ ಸಿದ್ಧಪಡಿಸಲಾಗಿತ್ತು. ಮಹಾನಗರ ಪಾಲಿಕೆ ಮಾಜಿ ಮೇಯರ್‌ಗಳಾದ ಎಸ್. ಟಿ. ವೀರೇಶ್, ಅಜಯ್ ಕುಮಾರ್, ವಾಣಿ ಲ್ಯಾಂಡ್ ಲಿಂಕ್ಸ್ ಮಾಲೀಕರಾದ ನಾಗಭೂಷಣ್ ವಾಣಿ, ಸಾಮಾಜಿಕ ಸೇವಾಕರ್ತರಾದ ಮಹಾಂತೇಶ್ ಒಣರೊಟ್ಟಿ ಅವರು ಅಪ್ಪು ಅಭಿಮಾನಿಗಳಿಗೆ ಪಲಾವ್, ಕೇಸರಿಬಾತ್ ಬಡಿಸಿದರು. ದಾವಣಗೆರೆಯಲ್ಲಿ ಅಪ್ಪು ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ ಅಗಲಿದ ನಟನಿಗೆ ಗೌರವಪೂರ್ವಕವಾಗಿ, ಭಕ್ತಿಪೂರ್ವಕವಾಗಿ ನಮಿಸಿ, ಸ್ಮರಿಸಿಕೊಳ್ಳಲಾಯಿತು.

ಗ್ರೀನ್ ಪಾರ್ಕ್ ಹೊಟೇಲ್‌ನಲ್ಲಿ ಅಪ್ಪು ಮೆಚ್ಚಿನ ತಿನಿಸುಗಳು
"ಭೋಜನಪ್ರಿಯರಾದ ಅಪ್ಪು ಅಭಿಮಾನಿಗಳಿಗೆ ನಮ್ಮ ಕೈಯಲ್ಲಾದಷ್ಟರ ಮಟ್ಟಿಗೆ ಅನ್ನದಾಸೋಹ ಮಾಡಬೇಕೆಂಬ ಬಯಕೆ ಇತ್ತು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದೆವು. ಜನರು ಹಾಗೂ ಅಪ್ಪು ಅಭಿಮಾನಿಗಳ ಸ್ಪಂದನೆ ತುಂಬಾನೇ ಖುಷಿಕೊಟ್ಟಿದೆ" ಎಂದು ಮಟಿಕಲ್ ಸ್ವಾಮಿ ಮತ್ತು ಬಸವರಾಜ್ ತಿಳಿಸಿದರು. ಇನ್ನು ಶಾಮನೂರು ರಸ್ತೆಯಲ್ಲಿನ ಗ್ರೀನ್ ಪಾರ್ಕ್ ಹೊಟೇಲ್‌ನಲ್ಲಿ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ 1ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಅಪ್ಪು ಮೆಚ್ಚಿನ ತಿನಿಸುಗಳನ್ನು ತಯಾರಿಸಿ ಗ್ರಾಹಕರಿಗೆ ಬಡಿಸುವ ವಿಭಿನ್ನ ಕಾರ್ಯಕ್ರಮ ನಡೆಸಲಾಯಿತು. ಜೊತೆಗೆ ಯಶಸ್ವಿ ಪ್ರದರ್ಶನ ಕಾಣುತ್ತಿರುವ " ಗಂಧದ ಗುಡಿ " ಚಲನಚಿತ್ರ ತಂಡಕ್ಕೆ ಶುಭ ಕೋರಲಾಯಿತು.

ಗ್ರೀನ್ ಪಾರ್ಕ್ ಹೋಟೆಲ್‌ನಿಂದ ವಿಭಿನ್ನ ಕಾರ್ಯಕ್ರಮ
"ಸಂಪೂರ್ಣ ನವೆಂಬರ್ ತಿಂಗಳಲ್ಲಿ ಪುನೀತ್ ರಾಜ್‌ಕುಮಾರ್ ಮೆಚ್ಚಿನ ತಿನಿಸುಗಳನ್ನು ತಯಾರಿಸಿ ಬಡಿಸುವ ಸಂಕಲ್ಪ ಹೊಂದಿರುವ ಗ್ರೀನ್ ಪಾರ್ಕ್ ತಂಡದ ಸಿಬ್ಬಂದಿ ದಾವಣಗೆರೆ ಜನತೆಗೆ ಈ ಮೂಲಕ ಅಪ್ಪು ಅವರನ್ನು ಸ್ಮರಿಸುತ್ತಾರೆ. ಪುನೀತ್ ರಿಗೆ ಇಷ್ಟವಾದ ಸಸ್ಯಹಾರ ಹಾಗೂ ಮಾಂಸಹಾರ ಊಟವನ್ನು ರುಚಿಕಟ್ಟಾಗಿ ತಯಾರಿಸಿ ಬರುವ ಗ್ರಾಹಕರಿಗೆ ನೀಡುವ ಉದ್ದೇಶ ಹೊಂದಿದೆ. ಈ ಮೂಲಕ ಪುನೀತ್ ರಾಜಕುಮಾರ್ ಭೋಜನಪ್ರಿಯತೆಯು ಅಭಿಮಾನಿಗಳಿಗೂ ಸಿಗುವ ಅವಕಾಶ ಕಲ್ಪಿಸಿಕೊಡಲಾಗುವುದು. ಕೇವಲ ವ್ಯಾವಹರಿಕವಾಗಿ ಮಾಡುತ್ತಿಲ್ಲ. ಇದೊಂದು ಅಪ್ಪು ಸ್ಮರಿಸಿಕೊಳ್ಳುವ ಉದ್ದೇಶದಿಂದ ಮಾಡಲಾಗುತ್ತಿದೆ," ಎಂದು ಹೊಟೇಲ್ ಗ್ರೀನ್ ಪಾರ್ಕ್ ಮಾಲೀಕರು ತಿಳಿಸಿದ್ದಾರೆ.

ಅಪ್ಪು ಮಾರ್ಗದಲ್ಲೇ ನಡೆಯುತ್ತಿರುವ ಅಭಿಮಾನಿಗಳು
ದಾವಣಗೆರೆ ನಗರದ ಜಯದೇವ ವೃತ್ತದಲ್ಲಿಯೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಒಂದನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಅನ್ನದಾಸೋಹ ಏರ್ಪಡಿಸಲಾಗಿತ್ತು. ರಾಮ್ ಅಂಡ್ ಕೋ ಸರ್ಕಲ್, ಹೊಟೇಲ್ ಗ್ರೀನ್ ಪಾರ್ಕ್ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿಯೂ ಅನ್ನದಾಸೋಹ ನೆರವೇರಿತು. ಎಲ್ಲಾ ತಾಲೂಕುಗಳಲ್ಲಿಯೂ ಅಪ್ಪು ಸ್ಮರಣೆ ನಡೆಯಿತು. ಅಪ್ಪು ಬದುಕು ಅವರ ಕೋಟ್ಯಂತರ ಅಭಿಮಾನಿಗಳಿಗೆ ಆದರ್ಶವಾಗಿದ್ದು, ಪುನೀತ್ ರಾಜ್‌ಕುಮಾರ್ ಅವರಂತೆ ಅಭಿಮಾನಿಗಳು ಕೂಡ ಸಾಮಾಜಿಕ ಕಳಕಳಿಯ ಕೆಲಸಗಳನ್ನು ನೆರವೇರಿಸುತ್ತಿದ್ದಾರೆ.












Click it and Unblock the Notifications