ದಾವಣಗೆರೆಯಲ್ಲಿ ಹೊಸ ವರ್ಷಾಚರಣೆಗೆ ಗಡುವು: ಮಹತ್ವದ ಸೂಚನೆ ನೀಡಿದ SP ರಿಷ್ಯಂತ್
ದಾವಣಗೆರೆ, ಡಿಸೆಂಬರ್ 28: ಇನ್ನು ಕೆಲವೇ ದಿನಗಳಲ್ಲಿ ಹೊಸ ವರ್ಷ. 2022 ಮುಗಿದು 2023ಕ್ಕೆ ಕಾಲಿಡಲು ಸನ್ನದ್ಧವಾಗುತ್ತಿರುವ ಈ ವೇಳೆಯಲ್ಲಿ ಕೊರೊನಾ ಆತಂಕ ಮತ್ತೆ ಶುರುವಾಗಿದೆ. ಹೀಗಾಗಿ ಹೊಸ ವರ್ಷ ಆಚರಣೆಗೆ ರಾಜ್ಯ ಸರ್ಕಾರವು ಕೆಲವು ನಿಬಂಧನೆಗಳನ್ನು ಹಾಕಿದೆ.
ಹೊಸ ವರ್ಷ ಆಚರಣೆಗೆ ಷರತ್ತುಗಳನ್ವಯ ಅನುಮತಿ ನೀಡಿದ್ದರೂ ವರ್ಷಾಚರಣೆ ಸ್ವಲ್ಪ ಮಟ್ಟಿಗೆ ಕಳೆಗುಂದುವುದು ಸತ್ಯವಾಗಿದೆ.
ದಾವಣಗೆರೆ ಜಿಲ್ಲೆಯಾದ್ಯಂತ ಹೊಸ ವರ್ಷಾಚರಣೆಯನ್ನು ಡಿಸೆಂಬರ್ 31ರ ಮಧ್ಯರಾತ್ರಿ 1ಗಂಟೆವರೆಗೆ ಮಾತ್ರ ಆಚರಿಸಬೇಕು. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಖಚಿತ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಜಿಲ್ಲಾಡಳಿತ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೂತನ ವರ್ಷಾಚರಣೆ ವೇಳೆ ದ್ವಿಚಕ್ರ ವಾಹನಗಳಲ್ಲಿ ತ್ರಿಬಲ್ ರೆಡ್ಡಿಂಗ್ ಮಾಡುವುದು. ರಸ್ತೆಯಲ್ಲಿ ಕಿರುಚಾಟ, ಕೂಗಾಟ ಮಾಡಿ ಸಾರ್ವಜನಿಜ ನೆಮ್ಮದಿಗೆ ಭಂಗ ತರುವುದು. ರಸ್ತೆ ಮಧ್ಯದಲ್ಲಿ ಕೇಕ್ ಕಟ್ ಮಾಡಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಕೊಡುವಂತಿಲ್ಲ. ಒಂದು ವೇಳೆ ಈ ರೀತಿ ವರ್ತಿಸಿದರೆ ಅಂತಹವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಹೊಸ ವರ್ಷಾಚರಣೆ ವೇಳೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಭೆ ನಡೆಸಲಾಗಿದೆ. ಪ್ರತ್ಯೇಕ ತಂಡಗಳನ್ನು ರಚಿಸಿದ್ದು, ಸಂಜೆಯಿಂದಲೇ ಕಾರ್ಯಾಚರಣೆ ನಡೆಸಲಿವೆ. ಗುಂಪಾಗಿ ಹೋಗಿ ಗಲಾಟೆ ಮಾಡುವವರು ಕಂಡುಬಂದರೆ ಅವರನ್ನು ವಶಕ್ಕೆ ಪಡೆಯಲಾಗುವುದು ಎಂದಿದ್ದಾರೆ.

ಈ ಬಗ್ಗೆ ಮಾತು ಮುಂದುವರಿಸಿದ ಸಿ.ಬಿ.ರಿಷ್ಯಂತ್, ಗೃಹ ರಕ್ಷಕ ದಳದ ಸಿಬ್ಬಂದಿ ಬಳಸಿಕೊಂಡು ಗಸ್ತು ಹೆಚ್ಚಿಸಲಾಗುವುದು. ಆದ್ದರಿಂದ ಸೀಮಿತ ಅವಧಿಯಲ್ಲಿಯೇ ಹೊಸ ವರ್ಷಾಚರಣೆಯನ್ನು ಮಾಡಬೇಕು. ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಮಾಸ್ಕ್ ಕಡ್ಡಾಯ. ಸೀಮಿತ ಜನರು ಇದ್ದರೆ ಮಾತ್ರ ಒಳಗೆ ಮನೆಯೊಳಗೆ ನೂತನ ವರ್ಷಾಚರಣೆ ಮಾಡಬೇಕು. ಹಿರಿಯ ನಾಗರಿಕರು ಹೊರಗೆ ಹೋಗಬಾರದು. ಕೊರೊನಾದ ಸಂಭವನೀಯ ಅಲೆ ಇರುವುದರಿಂದ ಹಿರಿಯ ನಾಗರಿಕರು ಎಚ್ಚರದಿಂದ ಇರಬೇಕು ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ.
ಇನ್ನು ರೆಸ್ಟೋರೆಂಟ್ ಮಾಲೀಕರು, ಸಿಬ್ಬಂದಿ, ಅಡುಗೆ ಸಿಬ್ಬಂದಿ ಎಲ್ಲರೂ ಕಡ್ಡಾಯವಾಗಿ ಬೂಸ್ಟರ್ ಡೋಸ್ ಹಾಕಿಸಿಕೊಂಡಿರಬೇಕು. ಚಲನ ಚಿತ್ರಮಂದಿರದಲ್ಲಿ ಎನ್ 95 ಮಾಸ್ಕ್ ಹಾಕಬೇಕು. ದೇಹದ ಉಷ್ಣಾಂಶವನ್ನು ಎಲ್ಲಾ ಕಡೆಗಳಲ್ಲಿ ಪರೀಕ್ಷೆ ಮಾಡಬೇಕು. ಕೊರೊನಾ ಲಕ್ಷಣಗಳು ಕಂಡು ಬಂದರೆ ಅಂತಹವರನ್ನು ಆಸ್ಪತ್ರೆಗೆ ಸೇರಿಸಬೇಕು ಎಂದು ಸಿ.ಬಿ.ರಿಷ್ಯಂತ್ ಸೂಚನೆಗಳನ್ನು ನೀಡಿದ್ದಾರೆ.












Click it and Unblock the Notifications