Davangere Lok Sabha Election: ಕುರುಬ ಸಮುದಾಯಕ್ಕೆ ಟಿಕೆಟ್ ನೀಡದ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ
ದಾವಣಗೆರೆ, ಮೇ. 05 : ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಮೇ 7 ರಂದು ನಡೆಯಲಿದೆ. ರಾಜ್ಯದಲ್ಲಿ ಇದು ಎರಡನೇ ಹಂತದ ಮತದಾನವಾಗಿದ್ದು, ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿವೆ. ಇವತ್ತಿಗೆ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಲಾಗಿದೆ. ಬಹಿರಂಗ ಪ್ರಚಾರದ ಭಾನುವಾರ ಸಿಎಂ ಸಿದ್ದರಾಮಯ್ಯ ದಾವಣಗೆರೆಯಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ.
ದಾವಣಗೆರೆ ಲೋಕಸಭಾ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರ ಪರ ಪ್ರಚಾರದ ಅಂಗವಾಗಿ ನಡೆದ ಪ್ರಜಾಧ್ವನಿ ಜನಸಮಾವೇಶವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿ ಮಾತನಾಡಿದ್ದಾರೆ. ಈ ವೇಳೆ ರಾಜ್ಯದಲ್ಲಿ 7% ಇರುವ ಕುರುಬ ಸಮುದಾಯಕ್ಕೆ ಕರ್ನಾಟಕ ಬಿಜೆಪಿ ಒಂದೂ ಟಿಕೆಟ್ ಕೊಟ್ಟಿಲ್ವಲ್ಲಾ ನಿಮಗೆ ಸಿಟ್ಟು ಬರಲ್ವಾ..? ಎಂದು ಪ್ರಶ್ನಿಸಿದ್ದಾರೆ.

"ಬಿಜೆಪಿ ಸೋತಾಗಿದೆ. ಮೋದಿ ಮತ್ತೆ ಪ್ರಧಾನಿಯಾಗಲ್ಲ. ದಾವಣಗೆರೆಯಲ್ಲಿ ಗಾಯತ್ರಿ ಸಿದ್ದೇಶ್ವರ್ ಯಾವುದೇ ಕಾರಣಕ್ಕೂ ಗೆಲ್ಲಲ್ಲ. ಬಿಜೆಪಿ ಕುಮ್ಮಕ್ಕಿನಿಂದ ಪಕ್ಷೇತರವಾಗಿ ಸ್ಪರ್ಧಿಸಿರುವ ವಿನಯ್ ಕುಮಾರ್‌ಗೆ ಒಂದೂ ಮತ ಹಾಕಬೇಡಿ. ವಿನಯ್‌ಗೆ ಬೀಳುವ ಮತ ಬಿಜೆಪಿಗೆ ಬಿದ್ದ ಹಾಗೆ. ಕಾಂಗ್ರೆಸ್ ಪಕ್ಷದ ಪ್ರಭಾ ಮಲ್ಲಿಕಾರ್ಜುನ್ ಗೆದ್ದರೆ ಮುಖ್ಯಮಂತ್ರಿಯಾಗಿ ನನಗೆ ಶಕ್ತಿ ಬರುತ್ತದೆ. ಆದ್ದರಿಂದ ಕಾಂಗ್ರೆಸ್ ಗೆಲ್ಲಿಸಿ ಎಂದು ಮನವಿ ಮಾಡುತ್ತೇನೆ" ಎಂದು ಸಮಾವೇಶದಲ್ಲಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
"ರಾಜ್ಯದ ಪರವಾಗಿ, ದಾವಣಗೆರೆ ಜಿಲ್ಲೆಯ ಪರವಾಗಿ, ಹೊನ್ನಾಳಿ ಜನರ ಪರವಾಗಿ ಒಂದೇ ಒಂದು ದಿನವೂ ಬಿಜೆಪಿ ಸಂಸದ ಸಿದ್ದೇಶ್ವರ್ ಅವರು ಪಾರ್ಲಿಮೆಂಟಿನಲ್ಲಿ ಬಾಯಿ ಬಿಡಲಿಲ್ಲ. ಹೀಗಾಗಿ ಬಿಜೆಪಿಗೆ ನೀವು ಹಾಕುವ ಮತಕ್ಕೆ ಬೆಲೆ ಬರಲಿಲ್ಲ. ರಾಜ್ಯಕ್ಕೆ ಆರ್ಥಿಕವಾಗಿ ಬಿಜೆಪಿ ಸರ್ಕಾರ ತೀವ್ರ ಅನ್ಯಾಯ ಮಾಡಿತು" ಎಂದು ಆರೋಪಿಸಿದ್ದಾರೆ.
ಹತ್ತತ್ತು ವರ್ಷ ಪ್ರಧಾನಿಯಾಗಿರುವ @narendramodi ಅವರೇ ಕೇವಲ ಹತ್ತೇ ಹತ್ತು ಜನೋಪಯೋಗಿ ಕೆಲಸ ಮಾಡಿದ್ದರೆ ತೋರಿಸಿ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ.
— Siddaramaiah (@siddaramaiah) May 5, 2024
ಎರಡು ಬಾರಿ ಮುಖ್ಯಮಂತ್ರಿಯಾಗಿ ನಾವು ರಾಜ್ಯದಲ್ಲಿ ಜಾರಿಮಾಡಿದ ಅಭಿವೃದ್ಧಿ ಕಾರ್ಯಗಳು, ಯೋಜನೆಗಳು, ಭಾಗ್ಯಗಳ ಪಟ್ಟಿ ನಾಡಿನ ಜನರ ಬಳಿ ಕೇಳಿ ಅವರೇ ಕೊಡುತ್ತಾರೆ. ನೀವು ಪ್ರಧಾನಿಯಾಗಿ… pic.twitter.com/R37B831aCM
"ಬರಗಾಲ ಬಂದಾಗ, ಪ್ರವಾಹ ಬಂದಾಗಲೂ ರಾಜ್ಯಕ್ಕೆ ಅನ್ಯಾಯವಾಯಿತು. ಆಗಲೂ ಸಿದ್ದೇಶ್ವರ್ ಬಾಯಿ ಬಿಡಲಿಲ್ಲ. ಮತ್ತೆ ಇವರು ಪಾರ್ಲಿಮೆಂಟಿಗೆ ಕಳುಹಿಸಿ ಏನು ಪ್ರಯೋಜನ ಆಯ್ತು..? ಬರಿ ಟಿಎ, ಡಿಎ ತಗೊಳೋಕೆ, ದೆಹಲಿಯಲ್ಲಿ ಶೋಕಿ ಮಾಡೋಕೆ ಪಾರ್ಲಿಮೆಂಟಿಗೆ ಕಳಿಸಿದ್ದಾ..?" ಎಂದು ಟೀಕಿಸಿದ್ದಾರೆ.
ಪ್ರಧಾನಿ ಮಾಡಿದ ಹತ್ತು ಕೆಲಸ ತೋರಿಸಿ: ಸಿಎಂ ಸವಾಲು
"ಹತ್ತತ್ತು ವರ್ಷ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರೇ ಕೇವಲ ಹತ್ತೇ ಹತ್ತು ಜನೋಪಯೋಗಿ ಕೆಲಸ ಮಾಡಿದ್ದರೆ ತೋರಿಸಿ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಎರಡು ಬಾರಿ ಮುಖ್ಯಮಂತ್ರಿಯಾಗಿ ನಾವು ರಾಜ್ಯದಲ್ಲಿ ಜಾರಿಮಾಡಿದ ಅಭಿವೃದ್ಧಿ ಕಾರ್ಯಗಳು, ಯೋಜನೆಗಳು, ಭಾಗ್ಯಗಳ ಪಟ್ಟಿ ನಾಡಿನ ಜನರ ಬಳಿ ಕೇಳಿ ಅವರೇ ಕೊಡುತ್ತಾರೆ. ನೀವು ಪ್ರಧಾನಿಯಾಗಿ ಮಾಡಿದ ಸಾಧನೆಗಳನ್ನು ತಾಕತ್ತಿದ್ದರೆ ಭಾರತೀಯರ ಮುಂದೆ ಹೇಳಿ ನೋಡೋಣ" ಎಂದು ಸವಾಲು ಹಾಕಿದ್ದಾರೆ.
" ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳ ಪಟ್ಟಿ ಹಾಕಬೇಕು ಎಂದರೆ ಅವರು ಹೇಳಿದ ಸುಳ್ಳುಗಳ ಪಟ್ಟಿ ಮಾಡಬಹುದು. ಭಾರತೀಯರಿಗೆ ಹಾಕಿದ ಮೂರು ನಾಮಗಳ ಪಟ್ಟಿ ಮಾಡಬಹುದು. ಕನ್ನಡಿಗರ ಕೈಗೆ ಕೊಟ್ಟ ಚೊಂಬಿನ ಪಟ್ಟಿ ಮಾಡಬಹುದು ಅಷ್ಟೆ" ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಇತ್ತೀಚಿಗೆ ನಿಧನರಾದ ಹೊನ್ನಾಳಿಯ ಕಾಂಗ್ರೆಸ್ ಮುಖಂಡ, ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯ ಎಂ.ರಮೇಶ್ ಅವರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.












Click it and Unblock the Notifications