ದಾವಣಗೆರೆ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ: ಸಸ್ಪೆನ್ಸ್ ಆಗಿ ಉಳಿದ ಹರಿಹರ
ದಾವಣಗೆರೆ, ಏಪ್ರಿಲ್, 16: ನಾಮಪತ್ರ ಸಲ್ಲಿಕೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಕಾಂಗ್ರೆಸ್ ಪಕ್ಷವು ಎರಡು ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದೆ. ಜಗಳೂರು ಕ್ಷೇತ್ರಕ್ಕೆ ದೇವೇಂದ್ರಪ್ಪ ಹಾಗೂ ಹೊನ್ನಾಳಿ ಕ್ಷೇತ್ರಕ್ಕೆ ಶಾಂತನಗೌಡರಿಗೆ ಮಣೆ ಹಾಕಿದೆ. ಜಗಳೂರು ಕಾಂಗ್ರೆಸ್‌ನಲ್ಲಿ ಬಂಡಾಯ ಏಳುವ ಸಾಧ್ಯತೆ ಹೆಚ್ಚಿದ್ದು, ಟಿಕೆಟ್ ಆಕಾಂಕ್ಷಿಯಾಗಿದ್ದ ಹೆಚ್.ಪಿ.ರಾಜೇಶ್ ಪಕ್ಷೇತರರಾಗಿ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮತ್ತೊಂದೆಡೆ ಹರಿಹರ ಕ್ಷೇತ್ರಕ್ಕೆ ಟಿಕೆಟ್ ಘೋಷಿಸದೆ ಕಾಂಗ್ರೆಸ್ ಅಚ್ಚರಿ ಮೂಡಿಸಿದೆ.
ಹರಿಹರ ಕ್ಷೇತ್ರಕ್ಕೆ ಟಿಕೆಟ್ ಘೋಷಿಸದ ಕಾಂಗ್ರೆಸ್
ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಜಗಳೂರು, ಮಾಯಕೊಂಡ, ಚನ್ನಗಿರಿ ಹಾಗೂ ಹೊನ್ನಾಳಿಗೆ ತನ್ನ ಹುರಿಯಾಳುಗಳನ್ನು ಕಣಕ್ಕಿಳಿಸಿದ್ದರೆ, ಹರಿಹರ ಕ್ಷೇತ್ರಕ್ಕೆ ಮಾತ್ರ ಇನ್ನು ಟಿಕೆಟ್ ಘೋಷಣೆ ಮಾಡದೆ ಸಸ್ಪೆನ್ಸ್ ಮುಂದುವರೆಸಿದೆ. ಹಾಲಿ ಶಾಸಕ ರಾಮಪ್ಪ, ನಂದಿಗಾವಿ ಶ್ರೀನಿವಾಸ್, ನಾಗೇಂದ್ರಪ್ಪ ಸೇರಿದಂತೆ ಇನ್ನು ಕೆಲವರು ಟಿಕೆಟ್‌ಗೆ ಲಾಬಿ ನಡೆಸಿದ್ದರು. ಹಾಗೂ ಹರಿಹರ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂಬ ಗೊಂದಲ ಮುಂದುವರೆದಿದ್ದು, ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಸುವ ಸಾಧ್ಯತೆಯಿದೆ.

ಹೊಸಬರಿಗೆ ಆದ್ಯತೆ
ಮೂರನೇ ಪಟ್ಟಿಯಲ್ಲಿ ಕಾಂಗ್ರೆಸ್ ಪಕ್ಷವು ನಾಲ್ವರು ಶಾಸಕರಿಗೆ ಟಿಕೆಟ್ ನೀಡದೇ ಹೊಸಬರಿಗೆ ಆದ್ಯತೆ ನೀಡಿದೆ. ಹಾಗಾಗಿ ರಾಮಪ್ಪನವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ. ನಂದಿಗಾವಿ ಶ್ರೀನಿವಾಸ್ ಅವರು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಹಾಗೆಯೇ ನಾಗೇಂದ್ರಪ್ಪನವರು ಪಕ್ಷಕ್ಕಾಗಿ ದುಡಿದಿದ್ದಾರೆ. ಈ ಮೂವರು ಕುರುಬ ಸಮುದಾಯದ ಮುಖಂಡರಾಗಿದ್ದು, ಈ ಪೈಕಿ ಒಬ್ಬರಿಗೆ ಟಿಕೆಟ್ ನೀಡಲಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಹೊನ್ನಾಳಿಯಿಂದ ಸ್ಪರ್ಧಿಸಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ ತೀವ್ರ ಪೈಪೋಟಿ ನಡೆಸಿದ್ದರು. ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಶಾಂತನಗೌಡರಿಗೆ ಟಿಕೆಟ್ ಘೋಷಿಸಿದ್ದು, ಇವರು ಬಿಜೆಪಿ ಅಭ್ಯರ್ಥಿ ಎಂ.ಪಿ.ರೇಣುಕಾಚಾರ್ಯರ ವಿರುದ್ಧ ಕಣಕ್ಕಿಳಿದಿದ್ದಾರೆ.
ಸಭೆ ಕರೆದಿದ್ದ ಹೆಚ್.ಪಿ. ರಾಜೇಶ್
ಹಾಗೆಯೇ ಜಗಳೂರು ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಇಂದು ಸಭೆ ಕರೆದಿದ್ದ ಹೆಚ್.ಪಿ. ರಾಜೇಶ್ ಅವರು ಕಾಂಗ್ರೆಸ್ ಬಂಡಾಯವಾಗಿ ಕಣಕ್ಕಿಳಿಯುವುದು ನಿಶ್ಚಿತ ಎನ್ನಲಾಗುತ್ತಿದೆ. ಅಲ್ಲದೆ ಅವರನ್ನು ಪಕ್ಷದ ನಾಯಕರು ಮನವೊಲಿಸಲು ಯತ್ನಿಸುವ ಸಾಧ್ಯತೆ ಇದೆ. ಇದಕ್ಕೆ ಮಣಿಯುತ್ತಾಇರಾ, ಲ್ಲವೋ ಸ್ಪರ್ಧೆ ಮಾಡಿಯೇ ತೀರುತ್ತಾರಾ ಎನ್ನುವ ಕುತೂಹಲ ಇದೀಗ ಎಲ್ಲರಲ್ಲೂ ಮೂಡಿದೆ.
11 ಆಕಾಂಕ್ಷಿಗಳಿಂದ ತೀವ್ರ ವಿರೋಧ ವ್ಯಕ್ತ
ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಆಗಿದೆ. ಮಾಯಕೊಂಡ ಬಿಜೆಪಿಯಲ್ಲಿ ಬಂಡಾಯದ ಬೇಗುದಿ ಹೆಚ್ಚಾಗಿದೆ. ಬಿಜೆಪಿಯು ಬಸವರಾಜ್ ನಾಯ್ಕ್‌ಗೆ ಮಾಯಕೊಂಡದಲ್ಲಿ ಕಣಕ್ಕಿಳಿಸಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ 11 ಆಕಾಂಕ್ಷಿಗಳು ಜಿಲ್ಲಾ ನಾಯಕರು, ರಾಜ್ಯ ನಾಯಕರ ಮಾತಿಗೆ ಮಣಿಯುತ್ತಿಲ್ಲ. ಸಂಸದ ಜಿ.ಎಂ. ಸಿದ್ದೇಶ್ವರ ಭಿನ್ನಮತ ಶಮನಗೊಳಿಸುವ ಪ್ರಯತ್ನ ಮಾಡಿದ್ದರು. ಆದರೂ ಬಂಡಾಯಗಾರರು ಕ್ಯಾರೇ ಎನ್ನುತ್ತಿಲ್ಲ. ಇದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.
ಬಿಜೆಪಿ ಯುವ ಘಟಕದ ಜಿಲ್ಲಾಧ್ಯಕ್ಷ ಆರ್.ಎಲ್. ಶಿವಪ್ರಕಾಶ್ ಅವರನ್ನು ಆಕಾಂಕ್ಷಿಗಳೆಲ್ಲರೂ ಸೇರಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಿ, ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಕುರಡಿ ಗ್ರಾಮದಲ್ಲಿ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಜೊತೆಗೆ ಪ್ರಚಾರವನ್ನೂ ಶುರು ಮಾಡಿದ್ದಾರೆ. ಇನ್ನು ಬಂಡಾಯ ಅಭ್ಯರ್ಥಿ ಕಣಕ್ಕಿಳಿಯುವುದು ನಿಶ್ಛಿತ ಎಂದು ಹೇಳಲಾಗುತ್ತಿದೆ. ಆದರೂ ಕೊನೆಕ್ಷಣದಲ್ಲಿ ಏನಾದರೂ ಆಗಬಹುದು ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.
ಬಿಸಿಲಿನ ಝಳ ಏರುತ್ತಿರುವಂತೆ ನಿಧಾನವಾಗಿ ಚುನಾವಣಾ ಕಾವು ದಾವಣಗೆರೆ ಜಿಲ್ಲೆಯಲ್ಲಿ ಏರುತ್ತಿದೆ. ಹರಿಹರ ಒಂದು ಕ್ಷೇತ್ರ ಬಿಟ್ಟರೆ ಇನ್ನುಳಿದ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿ ಘೋಷಿಸಿರುವ ಕಾಂಗ್ರೆಸ್ ಗೆಲುವಿಗೆ ತಂತ್ರಗಾರಿಕೆ ರೂಪಿಸತೊಡಗಿದೆ. ಮತ್ತೊಂದೆಡೆ ನಾವೇನು ಕಡಿಮೆಯಿಲ್ಲ ಎನ್ನುವ ರೀತಿಯಲ್ಲಿ ಬಿಜೆಪಿಯು ಏಳು ಕ್ಷೇತ್ರಗಳಲ್ಲಿ ಅಭ್ಯರ್ಥಿ ಘೋಷಿಸಿದ್ದು, ಗೆಲುವಿನ ರಣತಂತ್ರವನ್ನು ರೂಪಿಸಿದೆ.












Click it and Unblock the Notifications