ದಾವಣಗೆರೆಯಲ್ಲಿ ಡಿ ಬಾಸ್; ಕ್ರಾಂತಿ ಸಿನಿಮಾ ಬೆಂಬಲಿಸಲು ಮನವಿ ಮಾಡಿದ ದರ್ಶನ್
ದಾವಣಗೆರೆ, ಸೆಪ್ಟೆಂಬರ್ 23: ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಹೆಸರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗುರುವಾರ ಮಾಜಿ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ ಜನ್ಮದಿನ ಪ್ರಯುಕ್ತ ದಾವಣಗೆರೆಗೆ ಆಗಮಿಸಿದ್ದು, ತಮ್ಮ ನೆಚ್ಚಿನ ನಟನನ್ನು ನೋಡು ಸಾವಿರಾರು ಅಭಿಮಾನಿಗಳು ಆಗಮಿಸಿ ಡಿ. ಬಾಸ್... ಡಿ. ಬಾಸ್... ಎಂದು ಹರ್ಷೋದ್ಘಾರ ಮೊಳಗಿಸಿದರು.
ದಾವಣಗೆರೆಯ ಬಾಪೂಜಿ ಎಂಬಿಎ ಗ್ರೌಂಡ್‌ನಲ್ಲಿ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹುಟ್ಟುಹಬ್ಬದ ಪ್ರಯುಕ್ತ ಎಸ್. ಎಸ್. ಮಲ್ಲಿಕಾರ್ಜುನ್ ಅಭಿಮಾನಿಗಳ ಬಳಗ ಆಯೋಜಿಸಿದ್ದ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ದರ್ಶನ ಆಗಮಿಸಿದ್ದರು. ದರ್ಶನ್ ಬರುವ ಸುದ್ದಿ ತಿಳಿದಿದ್ದ ಅವರ ಅಭಿಮಾನಿಗಳು ದಾವಣಗೆರೆ ಹಾಗೂ ಅಕ್ಕಪಕ್ಕದ ಜಿಲ್ಲೆಯ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ನೆಚ್ಚಿನ ನಟನನ್ನು ನೋಡಲು ಬಂದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹಾಗೂ ಕಾರ್ಯಕ್ರಮದ ಸಂಘಟಕರು ಹರ ಸಾಹಸ ಪಡಬೇಕಾಯಿತು.
ನಟ ದರ್ಶನ್ ತೂಗುದೀಪ ಅವರನ್ನು ಕಣ್ತುಂಬಿಕೊಳ್ಳಲು ದಾವಣಗೆರೆ, ಹಾವೇರಿ, ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಕೆಲ ಅಭಿಮಾನಿಗಳನಂತೂ ಬೆಳಗ್ಗೆ 11ಗಂಟೆಗೆ ಆಗಮಿಸಿದ್ದರು. ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ಇಲ್ಲಿಗೆ ಬಂದಿದ್ದ ಅಭಿಮಾನಿಗಳು ಡಿ ಬಾಸ್ ಜಪ ಮಾಡಿದರು.
ಮಲ್ಲಿಕಾರ್ಜುನ್, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ವೇದಿಕೆ ಮೇಲೆ ಭಾಷಣ ಮಾಡುವಾಗ ಡಿ ಬಾಸ್ ಜೈಕಾರ ಮೊಳಗಿತು. ಡಿಕೆಶಿ ಭಾಷಣದವ ವೇಳೆ ಸಿಡಿಮಿಡಿಗೊಂಡರೂ ಅಭಿಮಾನಿಗಳು ತಲೆಕೆಡಿಸಿಕೊಳ್ಳಲಿಲ್ಲ. ಘೋಷಣೆ ಹಾಕುತ್ತಲೇ ಇದ್ದರು. ಸಂಜೆ ಆರು ಗಂಟೆಗೆ ದರ್ಶನ್ ಬರುತ್ತಾರೆ ಎಂದರೂ ಅಭಿಮಾನಿಗಳು ತಲೆಕೆಡಿಸಿಕೊಳ್ಳಲಿಲ್ಲ. ಕೂಗಾಟ ಮುಂದುವರಿಸಿದ್ದರು.

40 ಸಾವಿರಕ್ಕೂ ಹೆಚ್ಚು ಜನರ ಆಗಮನ
ರಾತ್ರಿಯಾಗುವ ವೇಳೆಗೆ ದರ್ಶನ್ ಅಭಿಮಾನಿಗಳ ಜನಸಾಗರವೇ ಹರಿದು ಬಂದಿತ್ತು. ಸುಮಾರು 40 ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದರು. ಪೊಲೀಸರಂತೂ ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸ ಪಟ್ಟು ಸುಸ್ತಾದರು.
ಸಂಜೆ ಆರು ಗಂಟೆಗೆ ಬರುತ್ತಾರೆ ದರ್ಶನ್ ಎಂಬ ಮಾಹಿತಿ ನೀಡಲಾಗಿತ್ತು. ಜನರು ಹೆಚ್ಚಾಗಿ ಆಗಮಿಸಿದ ಕಾರಣ ದರ್ಶನ್ ತೂಗುದೀಪ ಅವರು ವೇದಿಕೆಗೆ ಬಂದಿದ್ದು ರಾತ್ರಿ 9 ಗಂಟೆಗೆ. ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ದರ್ಶನ್ ವೇದಿಕೆಗೆ ಬರುತ್ತಿದ್ದಂತೆ ಫ್ಯಾನ್ಸ್ ಅಭಿಮಾನದ ಮೇರೆ ಮೀರಿತ್ತು. ವೇದಿಕೆ ಮೇಲೆ ಕುಳಿತಿದ್ದ ಕಾಂಗ್ರೆಸ್ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪರ ಕಾಲಿಗೆ ನಮಸ್ಕರಿಸಿ ದರ್ಶನ್ ತೂಗುದೀಪ ಆಶೀರ್ವಾದ ಪಡೆದರು

ಅಭಿಮಾನಿಗಳ ವರ್ತನೆಗೆ ದರ್ಶನ್
ಇನ್ನು ದರ್ಶನ್ ವೇದಿಕೆಗೆ ಬರುತ್ತಿದ್ದಂತೆ ತಳ್ಳಾಟ, ನೂಕಾಟ ಹೆಚ್ಚಾಯಿತು. ಕಾಂಗ್ರೆಸ್ ಮುಖಂಡರು, ಅಭಿಮಾನಿಗಳು ನುಗ್ಗಲು ಶುರು ಮಾಡಿದರು. ವೇದಿಕೆ ಅಕ್ಕಪಕ್ಕದಲ್ಲಿ ಹೆಚ್ಚಾಗಿ ಜನರು ಸೇರಿದ್ದರು. ಪೊಲೀಸರು, ಆಯೋಜಕರು ಮನವಿ ಮಾಡಿದರೂ ಕ್ಯಾರೇ ಎನ್ನಲಿಲ್ಲ.
ಮೈಕ್ ಹಿಡಿದು ಮಾತನಾಡಲು ಶುರು ಮಾಡಿದ ದರ್ಶನ್ ಅಭಿಮಾನಿಗಳ ಅತಿರೇಕ ವರ್ತನೆಗೆ ಸಿಡಿಮಿಡಿಗೊಂಡರು. ಅಣ್ಣಾ ಯಾಕ್ರೀ ಅಡ್ಡ ನಿಲ್ತೀರಾ. ತಳ್ಳಾಟ, ನೂಕಾಟ ಮಾಡಬೇಡಿ. ವೇದಿಕೆ ಮೇಲೆ ನುಗ್ಗಬೇಡಿ. ಸೈಡ್‌ಗೆ ಹೋಗಿ ಅಂತಾ ಗದರಿದರು. ನಿಮ್ಮ ಕೈಯಲ್ಲೇ ಅಭಿಮಾನಿಗಳನ್ನು ಸರಿಸಲು ಆಗಲ್ಲ. ನಾನೇ ಮಾಡ್ತೇನೆ ಎಂದು ಮಾತನಾಡಲು ಶುರು ಮಾಡಿದ ಬಳಿಕ ಸ್ವಲ್ಪ ಮಟ್ಟಿಗೆ ಅಭಿಮಾನಿಗಳ ವರ್ತನೆ ಕಡಿಮೆಯಾಯಿತು.

ಮಲ್ಲಿಕಾರ್ಜುನ್ ನನ್ನ ಸಹೋದರನಿದ್ದಂತೆ
ದರ್ಶನ್ ಮಾತನಾಡಲು ಶುರು ಮಾಡಿದಾಗ ಮಲ್ಲಿಕಾರ್ಜುನ್ ಹಾಗೂ ನನ್ನ ನಡುವೆ ಅತ್ಯುತ್ತಮ ಸ್ನೇಹವಿದೆ. ಅವರು ನನ್ನ ಸಹೋದರರು. ನಾನು ಯಾವಾಗಲೂ ದಾವಣಗೆರೆಗೆ ಬಂದರೆ ತುಂಬಾನೇ ಪ್ರೀತಿ, ಕಾಳಜಿ, ಅಭಿಮಾನ ತೋರಿಸುತ್ತಾರೆ. ಇದಕ್ಕೆ ನನ್ನ ನಮಸ್ಕಾರ. ಕ್ರಾಂತಿ ಸಿನಿಮಾ ನನ್ನದಲ್ಲ. ನಿಮ್ಮ ಸಿನಿಮಾ. ಕನ್ನಡ ಚಿತ್ರಗಳನ್ನು ನೋಡುವ ಮೂಲಕ ಕನ್ನಡ ಚಿತ್ರೋದ್ಯಮ ಬೆಳೆಸಿ ಎಂದು ಮನವಿ ಮಾಡಿದರು.
ಮಲ್ಲಿಕಾರ್ಜುನ್ ಅವರೆಂದರೆ ತುಂಬಾ ಇಷ್ಟ. ಅವರಲ್ಲಿ ಕುದುರೆಗಳಿವೆ. ಅವುಗಳನ್ನು ನೋಡಲು ನಾನು ಇಲ್ಲಿಗೆ ಬರುತ್ತೇನೆ. ಇದು ಖುಷಿಯ ವಿಚಾರ. ಮಲ್ಲಿಕಾರ್ಜುನ್ ಅವರಿಗೆ ಕೇವಲ 55 ವರ್ಷ. ಅವರನ್ನು ನೋಡಿದರೆ ಚಿರಯುವಕರಂತೆ ಕಾಣುತ್ತಾರೆ. ಜನರಿಗೆ ಸೇವೆ ಮಾಡಲು ಮಲ್ಲಿಕಾರ್ಜುನ್ ಅವರಿಗೆ ಅವಕಾಶ ನೀಡಿ. ಮಲ್ಲಿಕಾರ್ಜುನ್ ನನಗೆ ತೋರಿಸುವ ಪ್ರೀತಿ ಮರೆಯಲಾಗದು, ನನ್ನ ಮುಂದಿನ ಕ್ರಾಂತಿ ಸಿನಿಮಾವನ್ನು ಬೆಂಬಲಿಸಿ, ನಿಮ್ಮ ಪ್ರೋತ್ಸಾಹ ಇರಲಿ ಎಂದರು.
ಬೆಣ್ಣೆದೋಸೆಯಷ್ಟೇ ಇಲ್ಲಿನ ಜನರ ಮನಸ್ಸು ಮತ್ತು ಮಾತು ಇಷ್ಟ. ನಾನು ಡಯಟ್ ಮಾಡುತ್ತಿದ್ದರೂ ಬೆಣ್ಣೆದೋಸೆ ತಿಂದೇ ಹೋಗುತ್ತೇನೆ. ನನಗೆ ಬೆಣ್ಣೆದೋಸೆ ಅಂದ್ರೆ ತುಂಬಾನೇ ಇಷ್ಟ. ಇಷ್ಟೊಂದು ಸಂಖ್ಯೆಯಲ್ಲಿ ಜನರು ಆಗಮಿಸಿರುವುದು ಖುಷಿ ತಂದಿದೆ ಎಂದರು.

ಮ್ಯೂಸಿಕಲ್ ನೈಟ್‌ನಲ್ಲಿ ಹುಚ್ಚೆದ್ದು ಕುಣಿದ ಅಭಿಮಾನಿಗಳು
ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ನಡೆಸಿಕೊಟ್ಟ ಮ್ಯೂಸಿಕಲ್ ನೈಟ್ ಕಾರ್ಯಕ್ರಮಕ್ಕೆ ಅಭಿಮಾನಿಗಳು ಫಿದಾ ಆದರು. ಹರಿಕೃಷ್ಣ ಸಂಗೀತ ನಿರ್ದೇಶನದ ಸಿನಿಮಾಗಳ ಹಾಡಿಗೆ ಹುಚ್ಚೆದ್ದು ಕುಣಿದರು. ಇನ್ನು ಕಾಮಿಡಿ ಕಿಲಾಡಿಗಳು ತಂಡದವರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.
ವೇದಿಕೆ ಮೇಲೆ ಶಾಮನೂರು ಶಿವಶಂಕರಪ್ಪ, ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಸೇರಿದಂತೆ ಕುಟುಂಬದವರು ಹಾಜರಿದ್ದರು. ಮಲ್ಲಿಕಾರ್ಜುನ್‌ಗೆ ದರ್ಶನ್ ಕೇಕ್ ತಿನ್ನಿಸಿದರು. ಇಬ್ಬರು ಆಲಿಂಗಿಸಿಕೊಂಡರು. ಈ ವೇಳೆ ಅಭಿಮಾನಿಗಳ ಜೈಕಾರ ಮತ್ತಷ್ಟು ಜೋರಾಯಿತು.












Click it and Unblock the Notifications