ಚಾಮರಾಜನಗರ: ಬರೋಬ್ಬರಿ 9 ವರ್ಷಗಳ ಬಳಿಕ ಕಾವೇರಿ ವನ್ಯಧಾಮದಲ್ಲಿ ಬಿಳಿಕಡವೆ ಪತ್ತೆ
ಚಾಮರಾಜನಗರ, ಸೆಪ್ಟೆಂಬರ್ 07: ಜಿಲ್ಲೆಯಲ್ಲಿರುವ ಅರಣ್ಯಗಳು ವಿಭಿನ್ನವಾಗಿದ್ದು, ಇಲ್ಲಿ ಆಗೊಮ್ಮೆ ಈಗೊಮ್ಮೆ ನಮಗೆ ಅಚ್ಚರಿಗಳು ಲಭ್ಯವಾಗುತ್ತಲೇ ಇರುತ್ತವೆ. ಇಲ್ಲಿ ಹಲವು ಬಗೆಯ ಜೀವರಾಶಿಗಳಿದ್ದು, ಅವು ಎಲ್ಲ ಸಂದರ್ಭದಲ್ಲಿ ನಮ್ಮ ಗಮನಕ್ಕೆ ಬಾರದಿದ್ದರೂ ಅವುಗಳನ್ನು ಹುಡುಕಿ ಹೋಗುವವರಿಗೆ ಮಾತ್ರ ವಿಸ್ಮಯ ಕಾದಿರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಚಾಮರಾಜನಗರ ಜಿಲ್ಲೆಯಲ್ಲಿ ಅಡ್ಡಾಡಿದರೆ ನಮಗೆ ಇಲ್ಲಿನ ಅರಣ್ಯ ಮತ್ತು ಅದರೊಳಗಿನ ವನ್ಯ ಜೀವಿ ಸಂಪತ್ತಿನ ಅರಿವಾಗುತ್ತದೆ. ಈ ಅರಣ್ಯದೊಳಗೆ ಒಂದು ಸುತ್ತು ಬಂದರೆ ಇಲ್ಲಿರುವ ಅಪರೂಪದ ಜೀವಗಳು ನಮ್ಮ ಗಮನಸೆಳೆಯುತ್ತವೆ. ಬಂಡೀಪುರ, ಮಲೆಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟ, ಹಿಮವದ್ ಗೋಪಾಲ ಸ್ವಾಮಿ ಬೆಟ್ಟಗಳು ಹಸಿರು ಅರಣ್ಯದ ಬೆಟ್ಟಗುಡ್ಡಗಳ ಸಿರಿಸಂಪತ್ತಿನೊಂದಿಗೆ ನಮ್ಮನ್ನು ಸೆಳೆಯುತ್ತವೆ.

ಇನ್ನು ಈ ವನ್ಯಪ್ರದೇಶದಲ್ಲಿ ಕರಡಿ, ಹುಲಿ, ಚಿರತೆ, ಕಾಡುಕೋಣಗಳು, ಅಪರೂಪದ ಚಿಟ್ಟೆ, ಜಿಂಕೆ, ಸಾರಂಗಿಗಳು ಸೇರಿದಂತೆ ಹಲವು ಜೀವ ಸಂಕುಲಗಳು ಇಲ್ಲಿದ್ದು, ಇವುಗಳಿಗೆಲ್ಲ ಆಸರೆ ನೀಡಿರುವುದು ಇಲ್ಲಿನ ಅರಣ್ಯ ಪ್ರದೇಶಗಳಾಗಿವೆ. ಅದರಲ್ಲೂ ಬಂಡೀಪುರ, ಬಿಳಿಗಿರಿರಂಗನಬೆಟ್ಟ, ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶಗಳು ನಿಸರ್ಗ ಪ್ರೇಮಿಗಳಿಗೆ ಮತ್ತು ವನ್ಯಜೀವಿಗಳ ಕುರಿತಂತೆ ಅಧ್ಯಯನ ಮಾಡುವವರಿಗೆ ಸೂಕ್ತಪ್ರದೇಶವಾಗಿದೆ. ಅಧ್ಯಯನ ಮಾಡುವಾಗಲೆಲ್ಲ ಅಪರೂಪದ ಜೀವರಾಶಿಗಳು ಪತ್ತೆಯಾಗಿರುವುದು ಇಲ್ಲಿನ ವಿಶೇಷತೆಯಾಗಿದೆ.
ಅಚ್ಚರಿ ಮೂಡಿಸಿದ ಬಿಳಿಕಡವೆ
ಇದೆಲ್ಲದರ ನಡುವೆ ಚಾಮರಾಜನಗರದಲ್ಲಿರುವ ಕಾವೇರಿ ವನ್ಯಧಾಮ ಇದೀಗ ಎಲ್ಲರ ಗಮನಸೆಳೆದಿದೆ. ಇತ್ತೀಚೆಗೆ ಇಲ್ಲಿ ಚಿರತೆಗಳ ಅಧ್ಯಯನ ಮಾಡಲು ಹೊರಟ ತಂಡದ ಕ್ಯಾಮರಾ ಕಣ್ಣಿಗೆ ಬಿಳಿ ಕಡವೆ ಬಿದ್ದಿದೆ. ಇದು ಈಗ ಎಲ್ಲರ ಗಮನಸೆಳೆದಿದ್ದು, ಅಯ್ಯೋ ಬಿಳಿಕಡವೆಯಾ ಎಂದು ಅಚ್ಚರಿಗೊಳ್ಳುತ್ತಿದ್ದಾರೆ. ಹಾಗೆಂದು ಚಾಮರಾಜನಗರದ ಅರಣ್ಯದಲ್ಲಿ ಇದೇ ಮೊದಲ ಬಾರಿಗೆ ಪತ್ತೆಯಾದ ಬಿಳಿಕಡೆವೆಯಲ್ಲ. ಈ ಹಿಂದೆ ಅಂದರೆ 2014ರಲ್ಲಿ ಬಂಡೀಪುರದಲ್ಲಿ ಬಿಳಿಕಡವೆ ಪತ್ತೆಯಾಗಿತ್ತಂತೆ. ಅದಾದ ನಂತರ ಸುಮಾರು ಒಂಬತ್ತು ವರ್ಷಗಳ ಬಳಿಕ ಜಿಲ್ಲೆಯ ಕಾವೇರಿ ವನ್ಯಧಾಮದಲ್ಲಿ ಪತ್ತೆಯಾಗಿರುವುದು ವಿಶೇಷವಾಗಿದೆ.

ಇಲ್ಲಿನ ಕಾವೇರಿ ವನ್ಯಧಾಮದ ಬಗ್ಗೆ ಹೇಳಬೇಕೆಂದರೆ ಈ ವನ್ಯಧಾಮ ಚಾಮರಾಜನಗರ ಜಿಲ್ಲೆಯಿಂದ ರಾಮನಗರ ಜಿಲ್ಲೆಯವರೆಗೂ ವಿಸ್ತರಿಸಿದೆ. ಈ ಅರಣ್ಯದಲ್ಲಿ ಬೇರೆ ಬೇರೆ ಬಗೆಯ ಜೀವ ಸಂಕುಲಗಳು ಬದುಕುತ್ತಿವೆ. ಈ ಜೀವ ಸಂಕುಲಗಳಲ್ಲಿ ಅಪರೂಪವಾದ ಬಿಳಿಕಡೆವೆ ಇದೀಗ ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. ಚಿರತೆಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಮತ್ತು ತಂಡ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್ ನಲ್ಲಿ ಇದು ಪತ್ತೆಯಾಗಿದೆ.
ಬಿಳಿಕಡವೆಯ ಸೃಷ್ಟಿ ಹೇಗೆ ಗೊತ್ತಾ?
ಈಗ ಪತ್ತೆಯಾಗಿರುವ ಬಿಳಿಕಡವೆ ಹೆಣ್ಣಾಗಿದೆ. ಇದು ಈ ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ಮೊದಲ ಬಿಳಿ ಕಡವೆ ಆಗಿದೆ. ಅಧ್ಯಯನ ನಡೆಸುತ್ತಿರುವ ತಂಡದ ಪ್ರಕಾರ 2014ರಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಿಳಿ ಬಣ್ಣದ ಕಡವೆ ಕಂಡು ಬಂದಿತಂತೆ. ಇಷ್ಟಕ್ಕೂ ಬಿಳಿಕಡವೆ ಹುಟ್ಟುವಾಗಲೇ ಹೀಗಿರುತ್ತದೆಯಾ? ಖಂಡಿತಾ ಇಲ್ಲ. ಇದು ಕಡವೆಯ ಒಂದು ಸ್ಥಿತಿಯಾಗಿದ್ದು, ಈ ಸ್ಥಿತಿಯನ್ನು ಲ್ಯೂಸಿಸ್ಟಿಕ್ ಎಂದು ಗುರುತಿಸಲಾಗಿದೆ. ಪ್ರಾಣಿಗಳ ಚರ್ಮದಲ್ಲಿ ವರ್ಣದ್ರವ್ಯದ ಕೊರತೆ ಉಂಟಾಗಿ, ಚರ್ಮ ಬಿಳಿ ಅಥವಾ ಮಂದ ಬಣ್ಣಕ್ಕೆ ಬದಲಾಗುವ ವಿರಳ ಪ್ರಕ್ರಿಯೆಯನ್ನು ಲ್ಯೂಸಿಸಮ್ ಎಂದು ಕರೆಯಲಾಗುತ್ತದೆ ಎಂದು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ತಂಡ ಹೇಳಿದೆ.

ಈ ಸ್ಥಿತಿ ಪ್ರಾಣಿಗಳ ಚರ್ಮದಲ್ಲಿ ಮೆಲನಿನ್ ಕೊರತೆಯಿಂದಾಗಿ ಉಂಟಾಗುವ ಅಲ್ಬಿನಿಸಂ ಸ್ಥಿತಿಗಿಂತ ಭಿನ್ನ. ಅಲ್ಬಿನಿಸಂ ಸ್ಥಿತಿಯಲ್ಲಿ ಪ್ರಾಣಿಗಳ ಕಣ್ಣು ಗುಲಾಬಿ ಅಥವಾ ಕೆಂಪು ಬಣ್ಣದಿಂದ ಕೂಡಿರುತ್ತದೆ ಆದರೆ ಲ್ಯೂಸಿಸಂನಲ್ಲಿ ಪ್ರಾಣಿಗಳ ಕಣ್ಣುಗಳು ಸಹಜ ಬಣ್ಣ ಹೊಂದಿರುತ್ತವೆ ಎಂದು ತಂಡ ವಿವರಿಸಿದೆ. ಕಡವೆಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಇಂತಹ ವಿಶೇಷ ಲಕ್ಷಣಗಳು ಕಂಡು ಬಂದಾಗ ಹೆಚ್ಚಿನ ಅಧ್ಯಯನ ಮಾಡುವುದು ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ. ಇನ್ನೊಂದು ವಿಶೇಷವೆಂದರೆ, ಇದೇ ಪ್ರದೇಶದಲ್ಲಿ ಈ ಹಿಂದೆ ಬಿಳಿ ಬಣ್ಣದ ಕೆನ್ನಾಯಿ ಕಂಡು ಬಂದಿತ್ತು ಅವರು ವಿವರಿಸಿದ್ದಾರೆ.
ವನ್ಯಧಾಮದ ಸಂರಕ್ಷಣೆ ನಮ್ಮ ಕರ್ತವ್ಯ
ಕಾವೇರಿ ವನ್ಯಜೀವಿಧಾಮದ ಬಗ್ಗೆ ಹೇಳಿರುವ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ' ಈ ವನ್ಯಧಾಮ ಇದುವರೆಗೆ ಒಂದು ಬಚ್ಚಿಟ್ಟ ಮುಕುಟವಾಗಿತ್ತು. ಈ ವನ್ಯಜೀವಿಧಾಮದಲ್ಲಿ ಹಲವು ವಿಶೇಷತೆಗಳು ಹೊಸದಾಗಿ ಪತ್ತೆಯಾಗಿವೆ. ಕರ್ನಾಟಕ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಜೇನ್ ಹೀರ್ಕ ಅಥವಾ ತರಕರಡಿ ದಾಖಲಾದದ್ದು ಇಲ್ಲಿಯೇ, ಭಾರತಕ್ಕೆ ತೋಳಗಳ ದಕ್ಷಿಣ ಗಡಿ ಪತ್ತೆಯಾದದ್ದು ಇಲ್ಲಿಯೇ, ಹೋದ ವರ್ಷ ಬಿಳಿ ಬಣ್ಣದ ಕೆನ್ನಾಯಿ ಕಂಡು ಬಂದಿದೆ, ಈಗ ಬಿಳಿ ಕಡವೆ ದಾಖಲಾಗಿದೆ. ಇತ್ತೀಚಿಗೆ ಅರಣ್ಯ ಇಲಾಖಾ ಸಿಬ್ಬಂದಿ ಇಲ್ಲಿ ಬಿಳಿ ನವಿಲನ್ನೂ ನೋಡಿದ್ದಾರೆ. ಇಷ್ಟೆಲ್ಲ ವಿಶೇಷತೆ ಇರುವ ಕಾಡನ್ನು ಸಂರಕ್ಷಿಸಲು ಎಲ್ಲರೂ ಕೂಡಿ ಶ್ರಮವಹಿಸಬೇಕು' ಎಂದು ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶಗಳು ಎಷ್ಟೊಂದು ವಿಶೇಷತೆ ಹೊಂದಿವೆ ಮತ್ತು ಎಂತಹ ಅಪರೂಪದ ಜೀವಿಗಳಿಗೆ ಬದುಕಲು ಅವಕಾಶ ಮಾಡಿಕೊಟ್ಟಿವೆ ಎಂಬುದು ಇದರಿಂದ ಮನದಟ್ಟಾಗುತ್ತದೆ. ಇಂತಹ ಅಪೂರ್ವ ಜೀವರಾಶಿಗಳನ್ನು ಹೊಂದಿರುವ ಅರಣ್ಯಪ್ರದೇಶವನ್ನು ನಾವೆಲ್ಲರೂ ರಕ್ಷಿಸಿಕೊಳ್ಳುವುದು ಬಹು ಮುಖ್ಯವಾಗಿದೆ.
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications