ಚಾಮರಾಜನಗರದ ಸುವರ್ಣಾವತಿ ಜಲಾಶಯಲ್ಲಿ ಜಲಸಾಹಸ ಕ್ರೀಡೆ, ಎಂಜಾಯ್ ಮೂಡ್‌ನಲ್ಲಿ ಯುವಕ, ಯುವತಿಯರು
ಚಾಮರಾಜನಗರ, ಮೇ, 26: ಚಾಮರಾಜನಗರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಜಲಸಾಹಸ ಕ್ರೀಡೆಯನ್ನು ಆಯೋಜಿಸಲಾಗಿತ್ತು. ಇದು ನೋಡುಗರನ್ನು ಕೂಡ ಸೆಳೆಯುವಂತಿತ್ತು. ಇನ್ನು ಯುವಕ, ಯುವತಿಯರಂತೂ ನಾ ಮುಂದು ತಾ ಮುಂದು ಎಂದು ಸಾಹಸ ಜಲ ಕ್ರೀಡೆಯಲ್ಲಿ ಪಾಲ್ಗೊಂಡ ಕ್ಷಣವಂತೂ ನೋಡುಗರ ಗಮನ ಸೆಳೆದಿದೆ.
ಹೌದು.. ಚಾಮರಾಜನಗರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಜಲ ಸಾಹಸ ಕ್ರೀಡೆ ನಡೆಯಿತು. ಚಾಮರಾಜನಗರ ತಾಲೂಕಿನ ಸುವರ್ಣಾವತಿ ಜಲಾಶಯಲ್ಲಿ ನಡೆದ ಈ ಜಲ ಸಾಹಸ ಕ್ರೀಡೆ ಯುವ ಜನರಿಗೆ ಮೈ ನವಿರಿಳಿಸುವಂತೆ ಮಾಡಿತು. ಇನ್ನು ಮೈ ನವಿರಿಳಿಸುವ ರಾಫ್ಟಿಂಗ್, ಮೈ ಜುಮ್ಮೆನಿಸುವ ಕಯಾಕಿಂಗ್, ದೇಹ ತಂಪಾಗಿಸುವ ಬನಾನ ರೈಡ್, ರೋಚಕ ಸ್ಪೀಡ್ ಬೋಟ್, ನೀರನ್ನು ಸೀಳಿ ಮುನ್ನುಗ್ಗುವ ಜೆಟ್ ಸ್ಕೀ ರೈಡ್ ಹೀಗೆ ಹಲವು ಬಗೆಯ ಜಲಸಾಹಸ ಕ್ರೀಡೆಗಳಲ್ಲಿ ನೂರಾರು ಯುವಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಅಲ್ಲದೆ ಈ ಜಲ ಕ್ರೀಡೆಯನ್ನು ವರ್ಷವೀಡಿ ನಡೆಸುವುದರ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವಂತೆ ಒತ್ತಾಯವೂ ಕೂಡ ಕೇಳಿಬಂತು. ಇನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸಹಯೋಗದಲ್ಲಿ ಈ ಜಲಸಾಹಸ ಕ್ರೀಡೆಗಳನ್ನು ಆಯೋಜನೆ ಮಾಡಲಾಗಿದ್ದು, ಈ ಬಗ್ಗೆ ಇಲ್ಲಿ ನೆರೆದಿದ್ದ ಜನ ತಾವು ಅನುಭವಿಸಿದ ಸಂತೋಷದ ಕ್ಷಣಗಳ ಮೆಲುಕು ಹಾಕಿದರು.
ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿರುವ ಸುವರ್ಣಾವತಿ ಜಲಾಶಯದಲ್ಲಿ ಪ್ರಾಯೋಗಿಕವಾಗಿ, ಉಚಿತವಾಗಿ ಹಲವು ಜಲಸಾಹಸ ಕ್ರೀಡೆಗಳ ಆಯೋಜನೆ ಮಾಡಲಾಗಿತ್ತು. ಯುವ ಜನರ ಸ್ಪಂದನೆಯನ್ನು ಗಮನಿಸಿದ ಚಾಮರಾಜನಗರ ಜಿಲ್ಲಾಡಳಿತ ವರ್ಷವಿಡೀ ಜಲಸಾಹಸ ಕ್ರೀಡೆ ಆಯೋಜಿಸಲು ಚಿಂತನೆ ನಡೆಸಿದೆ.
ಒಟ್ಟಿನಲ್ಲಿ ಜಲ ಸಾಹಸ ಕ್ರೀಡೆ ನೋಡುವ ಯುವ ಮನಸ್ಸುಗಳನ್ನು ತನ್ನತ್ತ ಸೆಳೆದಿದ್ದಲ್ಲದೇ, ನಾವೂ ಒಂದು ರೈಡ್ ಹೋಗೆ ಬಿಡೋಣ ಎಂದು ಯುವಕ, ಯುವತಿಯರು ಭಾಗಿಯಾಗಿದ್ದು ಮಾತ್ರ ವಿಶೇಷವಾಗಿತ್ತು ಎಂದು ಇಲ್ಲಿ ನೆರೆದಿದ್ದ ಜನರು ಸಂತೋಷ ವ್ಯಕ್ತಪಡಿಸಿದರು.












Click it and Unblock the Notifications