ಮಾಹಿತಿ ನೀಡದ ತಹಶೀಲ್ದಾರ್‌ಗೆ ₹25 ಸಾವಿರ ದಂಡ: ಕರ್ತವ್ಯ ಲೋಪ ಎಸಗಿದ ಪಿಡಿಒ ಅಮಾನತು
ಚಾಮರಾಜನಗರ, ಡಿಸೆಂಬರ್ 27: ಕಾಲ ಮಿತಿಯೊಳಗೆ ಮಾಹಿತಿ ನೀಡದ ಕೊಳ್ಳೇಗಾಲದ ತಹಶೀಲ್ದಾರ್ ಎಂ.ಮಂಜುಳಾ ಅವರಿಗೆ ರಾಜ್ಯ ಮಾಹಿತಿ ಹಕ್ಕು ಆಯೋಗ 25 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ಕೆ.ಎಲ್. ಲಿಂಗರಾಜು ಎನ್ನುವವರು ನೀಡಿದ ದೂರಿನ ಹಿನ್ನಲೆಯಲ್ಲಿ ರಾಜ್ಯ ಮಾಹಿತಿ ಆಯುಕ್ತ ಎಚ್.ಸಿ ಸತ್ಯನ್ ತೆರೆದ ನ್ಯಾಯಾಲಯದಲ್ಲಿ ದಂಡ ವಿಧಿಸಿದ್ದಾರೆ.
ಏನಿದು ಪ್ರಕರಣ..?
ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ನಿವಾಸಿ ಕೆ.ಎಲ್. ಲಿಂಗರಾಜು ಎನ್ನುವವರು 2022ರ ಜನವರಿ 1ರಂದು ಮಾಹಿತಿ ಹಕ್ಕು ಕಾಯ್ದೆಯಡಿ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿ, ಕುಣಗಳ್ಳಿ ಗ್ರಾಮದ ಸರ್ವೇ ನಂ.785ರಲ್ಲಿ ವಿಸ್ತೀರ್ಣ 4 ಎಕರೆ 76 ಸೆಂಟು ಇದರ ಖಾತೆ ಆದೇಶ ಸಂಖ್ಯೆ ಕ.ಅ.16/16-17 ಕೋರ್ಟು ಆದೇಶ ದಿ.27.06.2016 ನೇ ಸಾಲು ವಹಿವಾಟು ಸಂಖ್ಯೆ 194ಎಂ.ಆರ್. ನಂಬರ್ ಎಚ್.90 ಇದರ ತಹಶೀಲ್ದಾರ್ ಆದೇಶ ಜೆರಾಕ್ಸ್ ಪ್ರತಿಗಳು ಮತ್ತು ಕಮಲಮ್ಮ, ಚೆನ್ನಶೆಟ್ಟಿ, ಫ್ರಂಕು ಲೂಯಿಸ್, ಇವರುಗಳು ತಹಶೀಲ್ದಾರ್ ಕೋರ್ಟ್‌ಗೆ ಸಲ್ಲಿಸಿದ್ದ ಪ್ರತಿ ಒಂದು ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಧೃಡಿಕರಿಸಿಕೊಡಲು ಕೋರಿದ್ದರು.

ಆದರೆ, ಇದಕ್ಕೆ ತಹಶೀಲ್ದಾರ್‌ಗೆ ಸಕಾಲಕ್ಕೆ ಮಾಹಿತಿ ನೀಡದ ಹಿನ್ನಲೆಯಲ್ಲಿ ಅರ್ಜಿದಾರರು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಪರಿಣಾಮ ರಾಜ್ಯ ಮಾಹಿತಿ ಹಕ್ಕಿನ ಆಯೋಗವು ತಹಶೀಲ್ದಾರ್ ಮಂಜುಳಾಗೆ ದಂಡವಿಧಿಸಿದ್ದು. ದಂಡದ ಮೊತ್ತವನ್ನು ಸರ್ಕಾರದ ಲೆಕ್ಕ ಶೀರ್ಷಿಕೆ ಖಾತೆಗೆ ಜಮಾ ಮಾಡಿಸುವಲ್ಲಿ ಸೂಕ್ತ ಕ್ರಮವಹಿಸುವಂತೆ ಉಪವಿಭಾಗಧಿಕಾರಿ ಗೀತಾ ಹುಡೇದ ಅವರಿಗೆ ಸೂಚಿಸಿದೆ.
ಕರ್ತವ್ಯ ಲೋಪ: ಚಿಕ್ಕಾಟಿ ಪಂಚಾಯತ್ ಪಿಡಿಒ ಅಮಾನತು
ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎನ್. ವಿಶ್ವನಾಥ್ ಎನ್ನುವವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಆದೇಶ ಹೊರಡಿಸಿದ್ದಾರೆ.
ಕಳೆದ 22ರಂದು ಬೆಳಗ್ಗೆ 10.40ಕ್ಕೆ ಗ್ರಾಮ ಪಂಚಾಯಿತಿ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿದ ವೇಳೆ ವಿಶ್ವನಾಥ್ ಅನಧಿಕೃತವಾಗಿ ಗೈರು ಹಾಜರಾಗಿದ್ದರು. ಅಲ್ಲದೇ ಇ-ಸ್ವತ್ತು ಅರ್ಜಿ ವಿಲೇವಾರಿ ಮಾಡದಿರುವ ಬಗ್ಗೆ ಸಾರ್ವಜನಿಕರು ದೂರಿದ್ದರು. ದಾಖಲೆ ಕಡತಗಳ ಸಮರ್ಪಕ ನಿರ್ವಹಣೆ ಮಾಡದೆ ಇರುವುದು ಇತರೆ ಕರ್ತವ್ಯ ಲೋಪಗಳು ಕಂಡು ಬಂದ ಹಿನ್ನೆಲೆಯಲ್ಲಿ ಎನ್. ವಿಶ್ವನಾಥ ಅವರನ್ನು ಅಮಾನತು ಮಾಡಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.












Click it and Unblock the Notifications