ಪುಣಜನೂರು ಚೆಕ್‌ಪೋಸ್ಟ್ ಬಳಿ ಸೂಕ್ತ ದಾಖಲೆ ಇಲ್ಲದ ₹45 ಲಕ್ಷ ಹಣ ವಶಪಡಿಸಿಕೊಂಡ ಚಾಮರಾಜನಗರ ಪೊಲೀಸರು
ಯಾವುದೇ ದಾಖಲಾತಿಯಿಲ್ಲದೆ ಅಕ್ರಮವಾಗಿ ಹಣ ಸಾಗಾಟ ಮಾಡುತ್ತಿದ್ದ ಘಟನೆ ಚಾಮರಾಜನಗರ ಜಿಲ್ಲೆಯ ಪುಣಜನೂರು ಚೆಕ್‌ಪೋಸ್ಟ್‌ನಲ್ಲಿ ನಡೆದಿದೆ
ಚಾಮರಾಜನಗರ, ಮಾರ್ಚ್, 21: ಯಾವುದೇ ದಾಖಲಾತಿ ಇಲ್ಲದೇ ಅಕ್ರಮವಾಗಿ ಹಣ ಸಾಗಾಟ ಮಾಡುತ್ತಿದ್ದ ಘಟನೆ ಚಾಮರಾಜನಗರ ಜಿಲ್ಲೆಯ ಪುಣಜನೂರು ಚೆಕ್ ಪೋಸ್ಟ್‌ನಲ್ಲಿ ನಡೆದಿದೆ.
ಕೇರಳದ ಎರ್ನಾಕುಲಂ ನಿವಾಸಿ ಸಜಿ ಬಿನ್ ವರ್ಗೀಸ್ ಹಣ ಸಾಗಾಟ ಮಾಡುತ್ತಿದ್ದ ಆರೋಪಿಯಾಗಿದ್ದಾನೆ. ದಾಖಲೆ ಇಲ್ಲದೆ ಗುಂಡ್ಲುಪೇಟೆ ಕಡೆಗೆ ಹಣ ಸಾಗಾಟ ಮಾಡುತ್ತಿದ್ದ ಎನ್ನುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಚಾಮರಾಜನಗರ ಪೂರ್ವ ಠಾಣೆ ಪಿಐ ಶ್ರೀಕಾಂತ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯಿಂದ 45 ಲಕ್ಷ ರೂಪಾಯಿ ನಗದನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ, ಆರೋಪಿ ಎನ್ನಲಾದ ಸಜಿ ಬಿನ್ ವರ್ಗೀಸ್ ವಿರುದ್ಧ ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತನ ಬಳಿಯಿದ್ದ ಕಾರನ್ನೂ ಕೂಡ ಜಪ್ತಿ ಮಾಡಿದ್ದಾರೆ.
ಹೈ ಅಲರ್ಟ್ ಆದ ಅಬಕಾರಿ ಇಲಾಖೆ
ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಂದ ಮದ್ಯ, ಹಣ ಹಂಚುವ ಕಾರ್ಯ ಹೆಚ್ಚಾಗಿದೆ. ಇದನ್ನರಿತ ಚಾಮರಾಜನಗರ ಅಬಕಾರಿ ಇಲಾಖೆಯು ಹೈ ಅಲರ್ಟ್ ಆಗಿದ್ದು, ಕಾರ್ಯಾಚರಣೆಯನ್ನು ಮುಂದುವರೆಸಿದೆ.
ಚುನಾವಣೆ ಹತ್ತಿರ ಬಂತೆಂದರೆ ಸಾಕು ಮದ್ಯ, ಹಣ ಹಂಚುವುದು ಸಾಮಾನ್ಯವಾಗಿರುತ್ತದೆ. ಆದ್ದರಿಂದ ಎಚ್ಚೆತ್ತ ಅಬಕಾರಿ ಇಲಾಖೆ ಈಗಿನಿಂದಲೇ ಕಾರ್ಯಚರಣೆ ಮುಂದುವರೆಸಿದೆ. ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಬೇಕು, ಅಕ್ರಮ ಮದ್ಯ ಹಂಚಿಕೆ ಆಗಬಾರದೆಂದು ಈಗಿನಿಂದಲೇ ಅಲರ್ಟ್ ಆಗಿರುವ ಅಬಕಾರಿ ಇಲಾಖೆ ಕಳೆದ ಒಂದು ತಿಂಗಳಿನಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ 115 ಕಡೆಗಳಲ್ಲಿ ದಾಳಿ ನಡೆಸಿದೆ. ಈ ವೇಳೆ 58 ಜನರನ್ನು ಬಂಧಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಫೆ. 19 ರಿಂದ ದಾಳಿ ಪ್ರಾರಂಭಿಸಿದ್ದ ಇಲಾಖೆ
ಕಳೆದ ಫೆಬ್ರವರಿ 19 ರಿಂದ ಮಾರ್ಚ್ 20ರವರೆಗೆ ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯು ಒಟ್ಟು 115 ಕಡೆ ದಾಳಿ ನಡೆಸಿದ್ದು, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ 58 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಸಂಬಂಧ 85 ಪ್ರಕರಣಗಳು ಕೂಡ ದಾಖಲಾಗಿದ್ದು, ಕಾರ್ಯಾಚರಣೆ ವೇಳೆ 96 ಲೀಟರ್ ಮದ್ಯ 1 ಲೀಟರ್ ಬಿಯರ್ ಸೇರಿದಂತೆ 3 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಯಾವೆಲ್ಲ ಸ್ಥಳಗಳಲ್ಲಿ ಅಕ್ರಮ ಮದ್ಯ ವಶ?
ವಶಪಡಿಸಿಕೊಂಡ ಮದ್ಯ, ವಾಹನಗಳ ಒಟ್ಟು ಮೌಲ್ಯವೂ ಒಂದೂವರೆ ಲಕ್ಷ ರೂಪಾಯಿ ಆಗಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ಹಳೇ ಹಾಗೂ ಹೊಸ ಆರೋಪಿಗಳು ಸೇರಿದಂತೆ ಒಟ್ಟು 40 ಆರೋಪಿಗಳಿಂದ ಬಾಂಡ್ ಅನ್ನು ಅಬಕಾರಿ ಇಲಾಖೆ ಪಡೆದಿದೆ. ಅಷ್ಟೇ ಅಲ್ಲದೇ ಕೊಳ್ಳೇಗಾಲ ತಾಲೂಕಿನಲ್ಲಿ 10, ಚಾಮರಾಜನಗರ ತಾಲೂಕಿನಲ್ಲಿ 12, ಗುಂಡ್ಲುಪೇಟೆ ತಾಲೂಕಿನಲ್ಲಿ 14 ಸೂಕ್ಷ್ಮ ಸ್ಥಳಗಳ ಮೇಲೆ ದಿಢೀರ್ ದಾಳಿ ನಡೆಸಲಾಗಿದೆ.
ಯಳಂದೂರಿನ ಗುರುಕೃಪ ವೈನ್ಸ್ ಎಂಬ ಸನ್ನದಿಗೆ ದಿಢೀರ್ ದಾಳಿ ನಡೆಸಿ ದಾಸ್ತಾನು ಸಂಖ್ಯೆ ತಾಳೆಯಾಗದಿರುವುದರಿಂದ 1555 ಲೀಟರ್ ಮದ್ಯ, 670 ಲೀಟರ್ ಬಿಯರ್ ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ 8 ಲಕ್ಷ ರೂಪಾಯಿ ಎಂದು ಅಬಕಾರಿ ಆಯುಕ್ತರಾದ ನಾಗಶಯನ ಮಾಹಿತಿ ನೀಡಿದ್ದಾರೆ.
ಮಾರ್ಚ್ 15ರಂದು ಸುದ್ದಿಗೋಷ್ಠಿ
ಇದೇ ರೀತಿಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ನಿಷೇಧದ ಭರವಸೆ ನೀಡುವ ಅಭ್ಯರ್ಥಿಗೆ ಬೆಂಬಲ ನೀಡಲು ಮಹಿಳೆಯರು ಮುಂದಾಗಿದ್ದರು. ಹೀಗಾಗಿ ಮದ್ಯ ನಿಷೇಧ ಆಂದೋಲನದ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ರಾಜ್ಯ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ಮೋಕ್ಷಮ್ಮ ತಿಳಿಸಿದ್ದರು.
ಮಾರ್ಚ್ 15ರಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮದ್ಯ ಮಾರಾಟ ನಿಷೇಧಕ್ಕೆ ಒತ್ತಾಯಿಸಿ ಕಳೆದ 7 ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಜೊತೆಗೆ ಜಿಲ್ಲೆಯಲ್ಲಿಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಅಬಕಾರಿ, ಪೊಲೀಸ್ ಅಧಿಕಾರಿಗಳಿಗೆ ದಾಖಲೆ ಸಮೇತ ಪಟ್ಟಿ ನೀಡಿದರೂ ಇದುವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದರು.












Click it and Unblock the Notifications