ವಿದ್ಯುತ್ ತಂತಿ ಬೇಲಿ ಸ್ಪರ್ಶಿಸಿ ಹುಲಿ ಸಾವು: ಕಳೇಬರವನ್ನು ಕಲ್ಲು ಕಟ್ಟಿ ಕೆರೆಗೆ ಎಸೆದ ಕಿಡಿಗೇಡಿಗಳ ಬಂಧನ
ಫೆಬ್ರವರಿ 7ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯ ವ್ಯಾಪ್ತಿಯ ಕೆಬ್ಬೇಪುರ ಗ್ರಾಮದ ಮಲ್ಲಯ್ಯನಕಟ್ಟೆ ಕೆರೆಯಲ್ಲಿ ಹುಲಿ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಚಾಮರಾಜನಗರ, ಫೆಬ್ರವರಿ 27: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯ ವ್ಯಾಪ್ತಿಯ ಕೆಬ್ಬೇಪುರ ಗ್ರಾಮದ ಮಲ್ಲಯ್ಯನಕಟ್ಟೆ ಕೆರೆಯಲ್ಲಿ ಫೆಬ್ರವರಿ 7ರಂದು ಪತ್ತೆಯಾಗಿದ್ದ ಗಂಡು ಹುಲಿಯ ಕಳೇಬರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಸಾವಿಗೆ ಕಾರಣ ಪತ್ತೆಹಚ್ಚಿದ್ದು ಈ ಸಂಬಂಧ ವ್ಯಕ್ತಿಯೊಬ್ಬನನ್ನು ಯಶಸ್ವಿಯಾಗಿದ್ದಾರೆ.
ಹುಲಿ ಕಳೇಬರ ಪತ್ತೆಯಾದ ಬೆನ್ನಲ್ಲೇ ಸಾವು ಸ್ವಾಭಾವಿಕವಲ್ಲ ಎಂಬುದು ಪತ್ತೆಯಾಗಿತ್ತು. ಹೀಗಾಗಿ ಅಧಿಕಾರಿಗಳು ಹುಲಿ ಸಾವಿನ ಕುರಿತಂತೆ ತನಿಖೆಯನ್ನು ಆರಂಭಿಸಿದ್ದರು. ಇದೀಗ ಹುಲಿ ಸಾವಿಗೆ ಜಮೀನಿಗೆ ಅಕ್ರಮವಾಗಿ ಹರಿಸಿದ್ದ ವಿದ್ಯುತ್ ಕಾರಣ ಎಂಬುದು ದೃಢಪಟ್ಟಿದೆ. ಜೊತೆಗೆ ಹುಲಿ ಸಾವಿನ ಹಿಂದೆ ಆರು ಜನರ ಕೈವಾಡವಿದ್ದು, ಈ ಪೈಕಿ ಒಬ್ಬ ಸಿಕ್ಕಿದ್ದು, ಉಳಿದವರ ಪತ್ತೆಗೆ ಬಲೆ ಬೀಸಲಾಗಿದೆ.

ಕೆಬ್ಬೇಪುರ ಗ್ರಾಮದ ರೇಚಪ್ಪ (34) ಎಂಬಾತನನ್ನು ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ನ್ಯಾಯಾಲಯಕ್ಕೆ ಒಪ್ಪಿಸಿದ ಮೇರೆಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನುಳಿದ ಐದು ಮಂದಿಯ ಬಂಧನಕ್ಕೆ ಅರಣ್ಯ ಇಲಾಖೆಯು ಎರಡು ವಿಶೇಷ ತಂಡಗಳನ್ನು ರಚಿಸಿ ಪತ್ತೆ ಕಾರ್ಯವನ್ನು ಮುಂದುವರೆಸಿದೆ.
ಅಂದಾಜು ಐದು ವರ್ಷ ವಯಸ್ಸಿನ ಗಂಡು ಹುಲಿಯ ಮೃತದೇಹ ಫೆಬ್ರವರಿ 7ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯ ವ್ಯಾಪ್ತಿಯ ಕೆಬ್ಬೇಪುರ ಗ್ರಾಮದ ಮಲ್ಲಯ್ಯನಕಟ್ಟೆ ಕೆರೆಯಲ್ಲಿ ಪತ್ತೆಯಾಗಿತ್ತು. ಹುಲಿಯ ಕಾಲುಗಳು ಹಾಗೂ ಕುತ್ತಿಗೆಗೆ ತಂತಿಯಿಂದ ಕಟ್ಟಿ, ಅದಕ್ಕೆ ಭಾರವಾದ ಕಲ್ಲು ಕಟ್ಟಿ ಕೆರೆಗೆ ಹಾಕಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.
ಹೀಗಾಗಿ ಹುಲಿಯ ಸಾವಿನ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿದ್ದವು. ಹುಲಿಯ ಕಳೇಬರವನ್ನು ಬೇರೆ ಕಡೆಯಿಂದ ತಂದು ಕೆರೆಗೆ ಹಾಕಲಾಗಿದೆ ಎಂದು ಹೇಳಿದ್ದ ಅಧಿಕಾರಿಗಳು, ವಿದ್ಯುತ್ ಆಘಾತದಿಂದ ಮೃತಪಟ್ಟಿಲ್ಲ ಎಂದು ಹೇಳಿದ್ದರು ಆದರೆ, ತನಿಖೆ ವೇಳೆ ಹುಲಿಯ ಸಾವಿಗೆ ವಿದ್ಯುತ್ ಆಘಾತವೇ ಕಾರಣ ಎಂಬುದು ಈಗ ಬೆಳಕಿಗೆ ಬಂದಿದೆ.
ಹುಲಿ ಕೂದಲಿನ ಜಾಡು ಹಿಡಿದು ತನಿಖೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಹತ್ವರವಾದ ಮಾಹಿತಿ ದೊರೆತಿತ್ತು. 'ಕೆಬ್ಬೇಪುರ ಗ್ರಾಮದ ಶಿವಬಸಪ್ಪ ಎಂಬ ರೈತರಿಗೆ ಸೇರಿದ ಸರ್ವೆ ನಂಬರ್ 262ರಲ್ಲಿ ಬೆಳೆ ರಕ್ಷಣೆಗಾಗಿ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಈ ಜಮೀನಿನತ್ತ ಬಂದಿದ್ದ ಹುಲಿ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿತ್ತು. ಜಮೀನಿನ ಬಳಿಯೇ ಹುಲಿ ಕಳೇಬರ ಸಿಕ್ಕಿದರೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ರೈತ ಶಿವಬಸಪ್ಪ ಅವರ ಮಗ ರೇಚಪ್ಪ ಹಾಗೂ ಇತರ ಐವರಿದ್ದ ತಂಡ ಹುಲಿಯ ಕುತ್ತಿಗೆ ಮತ್ತು ಕಾಲುಗಳಿಗೆ ಕಲ್ಲುಗಳನ್ನು ಕಟ್ಟಿ ಕೆರೆಗೆ ಎಸೆದಿದ್ದರು ಎಂಬುದು ತನಿಖೆ ವೇಳೆ ತಿಳಿದಿದೆ.
ಈ ಕುರಿತು ಮಾಹಿತಿ ನೀಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ , "ಕಳೆದ 15 ದಿನಗಳಿಂದ ತೀವ್ರ ತನಿಖೆ ನಡೆಸುತ್ತಿದ್ದೇವು. ಸರ್ವೆ ನಂಬರ್ 262ರಲ್ಲಿರುವ ಜಮೀನಿನಲ್ಲಿ ಹುಲಿಯ ಕೂದಲುಗಳು ಕಂಡು ಬಂದಿದ್ದವು. ಇದರ ಆಧಾರದಲ್ಲಿ ನಮಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ರೇಚಪ್ಪ ಅವರನ್ನು ಕರೆಸಿ ವಿಚಾರಣೆ ಮಾಡಿದಾಗ, ನಿಜಾಂಶ ಒಪ್ಪಿಕೊಂಡರು. ಆರು ಮಂದಿ ಸೇರಿ ಈ ಕೃತ್ಯ ನಡೆಸಿರುವುದಾಗಿ ಅವರು ತಪ್ಪೊಪ್ಪಿಕೊಂಡಿದ್ದಾರೆ. ಉಳಿದ ಐವರನ್ನು ಶೀಘ್ರ ಬಂಧಿಸಲಾಗುವುದು" ಎಂದು ತಿಳಿಸಿದರು.
ಇದೀಗ ಜಮೀನಿನ ಮಾಲೀಕ ರೇಚಪ್ಪ ಒಪ್ಪಿಕೊಂಡಿರುವಂತೆ ಹುಲಿಯು ಜಮೀನಿನಲ್ಲಿ ಅಳವಡಿಸಿದ್ದ ವಿದ್ಯುತ್ ತಂತಿ ಬೇಲಿ ಸ್ಪರ್ಶಿಸಿ ಮೃತಪಟ್ಟಿರುವುದು ಖಚಿತವಾಗಿದ್ದು, ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಹರಿಸಿರುವುದು ತನಿಖೆಯಿಂದ ಗೊತ್ತಾಗಿದೆ. ವಿದ್ಯುತ್ ತಂತಿ ಸ್ಪರ್ಶಿಸಿ ಹುಲಿ ಸತ್ತಿರುವ ಸಂಗತಿಯನ್ನು ಮುಚ್ಚಿ ಹಾಕುವುದಕ್ಕಾಗಿ ಆರು ಮಂದಿ ಒಟ್ಟಾಗಿ ಹುಲಿಯ ಮೃತದೇಹವನ್ನು ಕೆರೆಗೆ ಎಸೆದಿದ್ದಾರೆ ಎಂದು ಹೇಳಿದರು.












Click it and Unblock the Notifications