ಎತ್ತ ತಾಯಿಗೆ ಬೇಡವಾದ ಮಗು: ಕಸದ ರಾಶಿಗೆ ಬಿಸಾಡಿ, ಮತ್ತೆ ದಿಢೀರ್ ಪ್ರತ್ಯಕ್ಷ
ಚಾಮರಾಜನಗರ, ಜುಲೈ 4: ಮಕ್ಕಳಿಲ್ಲ ಎಂದು ಮಂದಿರ, ಮಸೀದಿ ಸುತ್ತುತ್ತಾರೆ. ಹರಕೆಗಳನ್ನು ಕಟ್ಟಿಕೊಳ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ತಾನೇ ಜನ್ಮ ನೀಡಿದ ಮಗುವನ್ನು ಕಸದ ರಾಶಿಯಲ್ಲಿ ಬಿಟ್ಟು ಹೋಗಿದ್ಧಾಳೆ.
ನವಜಾತ ಶಿಶು ಹೀಗೆ ಬಿಟ್ಟು ಹೋಗುವುದು ಹೊಸ ವಿಷಯವೇನಲ್ಲ. ಈ ಪ್ರಕರಣ ಕೊಂಚ ಭಿನ್ನವಾಗಿದೆ. ತಾನೇ ಜನ್ಮ ನೀಡಿದ ಮಗುವನ್ನು ಬಿಟ್ಟು ಹೋಗಿದ್ದ ತಾಯಿ, ದಿಢೀರ್ ಪೊಲೀಸರ ಮುಂದೆ ಪ್ರತ್ಯಕ್ಷವಾಗಿ ಮಗುವನ್ನು ನೀಡುವಂತೆ ಮನವಿ ಮಾಡಿದ್ದಾಳೆ.
ಕೊಳ್ಳೇಗಾಲ ತಾಲೂಕಿನ ಮತ್ತೀಪುರ ಬಸ್ ನಿಲ್ದಾಣದ ಸಮೀಪದಲ್ಲಿ ಸೋಮವಾರ ಮುಂಜಾನೆ ಎರಡು ದಿನದ ನವಜಾತ ಗಂಡು ಶಿಶು ಪತ್ತೆಯಾಗಿದೆ. ಪುಟ್ಟ ಮಗುವನ್ನು ಕಂಡು ಮರುಗಿದ ಸ್ಥಳೀಯ ಜನರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮಗುವನ್ನು ತೆಗದುಕೊಂಡು, ಪರಿಶೀಲನೆ ನಡೆಸಿದ್ದಾರೆ.

ಮಗುವಿಗಾಗಿ ವಾಪಸ್ ಬಂದ ತಾಯಿ
ಪೊಲೀಸರು ಪರಿಶೀಲನೆ ನಡೆಸುವಾಗ ಮಗುವಿನ ತಾಯಿ ನಾನೆ ಎಂದುಕೊಂಡು ಮಹಿಳೆಯೊಬ್ಬಳು ಪ್ರತ್ಯಕ್ಷಳಾಗಿದ್ದಾಳೆ. "ನಾನೇ ಆ ಮಗುವಿನ ತಾಯಿ, ಇಲ್ಲಿ ಮಗುವನ್ನು ಬಿಟ್ಟು ಹೋಗಿದ್ದು ನಾನೇ, ನನ್ನ ಗಂಡ ಬಿಟ್ಟು ಹೋಗಿದ್ದಾನೆ. ಹಾಗಾಗಿ ಮಗುವನ್ನು ಸಾಕುವ ಶಕ್ತಿ ನನ್ನಲ್ಲಿರಲಿಲ್ಲ, ಅದಕ್ಕಾಗಿ ಮಗುವನ್ನು ಇಲ್ಲಿ ಬಿಟ್ಟು ಹೋಗಿದ್ದೆ, ನನ್ನ ಮಗುವನ್ನು ನನಗೆ ಕೊಡಿ" ಎಂದು ಅಲವತ್ತುಕೊಂಡಿದ್ದಾಳೆ.

ಕಾನೂನಿನ ಪ್ರಕಾರ ದತ್ತು ನೀಡಲು ಸಲಹೆ
ಮಗು ಸಾಕಲಯ ನನ್ನ ಕೈಯಲ್ಲಿ ಸಾಧ್ಯವಿಲ್ಲ ಎಂದು ತಾಯಿಯೇ ಹೇಳಿರುವುದಕ್ಕೆ, ಆ ಮಗುವನ್ನು ಕಾನೂನಿನ ಮೂಲಕ ಯಾರಾದರೂ ದತ್ತು ತೆಗೆದುಕೊಳ್ಳುವವರೆಗೆ ಮಗುವಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ತಾಯಿಗೆ ಪೊಲೀಸರು ಎಚ್ಚರಿಕೆ ನೀಡಿ ಹೋಗಿದ್ದಾರೆ.

ಜಿಲ್ಲೆಯ ನಾಲ್ಕುಕಡೆ ಅಪಘಾತ
ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಗರಗನಹಳ್ಳಿ ಗೇಟಿನಲ್ಲಿ ಕೇರಳ ಮೂಲದ ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕಿನ ಲ್ಲಿದ್ದ ಅದ್ವೈತ್ ಹಾಗೂ ಅಲೆಕ್ಸ್ ಮತ್ತು ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಇದರಲ್ಲಿ ಅದ್ವೈತ್ ಎಂಬಾತನ ಸ್ಥಿತಿ ಚಿಂತಾಜನಕವಾಗಿದೆ.
ತೊಂಡವಾಡಿ ಗೇಟಿನಲ್ಲಿ ಬಸ್ ಮತ್ತು ಟಾಟಾ ಏಸ್ ಮುಖಾಮುಖಿ ಡಿಕ್ಕಿಯಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಎರಡು ವಾಹನಗಳು ಜಖಂಗೊಂಡಿದ್ದು ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಬೇರೊಂದು ಬಸ್ಸಿನ ಮೂಲಕ ಗುಂಡ್ಲುಪೇಟೆಗೆ ಕಳುಹಿಸಲಾಗಿದೆ. ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ನಿಂತಿದ್ದ ಲಾರಿಗೆ ಟೆಂಪೊ ಟ್ರಾವೆಲರ್ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಟೆಂಪೊ ಟ್ರಾವೆಲರ್ ನಲ್ಲಿದ್ದ ಪಿಎಂಸಿ ಕಾಲೇಜು ವಿದ್ಯಾರ್ಥಿಗಳಾದ ಮುರುಳಿ ಹಾಗೂ ವಿದ್ಯಾ ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ

ಪಿಕಪ್ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸಾವು
ಪಿಕಪ್ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಅಸುನೀಗಿರುವ ಘಟನೆ ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಕ್ರಾಸ್‌ನಲ್ಲಿ ನಡೆದಿದೆ. ಸಿದ್ದಯ್ಯನಪುರ ಗ್ರಾಮದ ನಂಜುಂಡಸ್ವಾಮಿ ಎಂಬ ಗೃಹ ರಕ್ಷಕದಳದ ಸಿಬ್ಬಂದಿ ಮೃತ ದುರ್ದೈವಿ. ಆರ್ ಟಿಒ ದಲ್ಲಿ ಇವರು ಕೆಲಸ ಮಾಡುತ್ತಿದ್ದು ಕರ್ತವ್ಯಕ್ಕೆ ತೆರಳುವಾಗ ಈ ಆಪಘಾತ ಸಂಭವಿಸಿದೆ. ಚಾಮರಾಜನಗರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications