ಕೇವಲ ಒಂದು ತಿಂಗಳಲ್ಲಿ ಮಲೆ ಮಾದಪ್ಪನ ಹುಂಡಿಯಲ್ಲಿ ಸಂಗ್ರವಾದ ಹಣ ಎಷ್ಟು ಕೋಟಿ ಗೊತ್ತಾ?
ಚಾಮರಾಜನಗರ, ಜನವರಿ, 24: ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯ ಹನೂರು ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ನೆಲೆ ನಿಂತಿರುವ ಮಾದಪ್ಪ ಕೋಟಿ ಒಡೆಯನಾಗಿಯೇ ಮುಂದುವರೆಯುತ್ತಿದ್ದಾನೆ. ಈತನ ಕಾಣಿಕೆ ಹುಂಡಿಗೆ ಪ್ರತಿ ತಿಂಗಳು ಭಕ್ತರು ಭಕ್ತಿ ಭಾವದಿಂದ ಕಾಣಿಕೆಯಾಗಿ ಹಣವನ್ನು ಹಾಕುತ್ತಿರುವುದರಿಂದ ಕೋಟ್ಯಂತರ ರೂಪಾಯಿ ಸಂಗ್ರಹವಾಗುತ್ತಿದ್ದು, ಮಾದಪ್ಪನನ್ನು ಮೀರಿಸುವವರೇ ಇಲ್ಲದಾಗಿದೆ. ಇದೀಗ ಒಂದು ತಿಂಗಳ ಅವಧಿಯಲ್ಲಿ 2.29 ಕೋಟಿ ರೂಪಾಯಿ ಸಂಗ್ರಹವಾಗಿರುವುದು ಗಮನಾರ್ಹವಾಗಿದೆ.
ಮಲೆಮಹದೇಶ್ವರ ಬೆಟ್ಟದಲ್ಲಿ ನೆಲೆ ನಿಂತು ತನ್ನನ್ನು ದರ್ಶನ ಮಾಡಲು ಬರುವರನ್ನು ಹರಸುತ್ತಾ ಬಂದಿರುವ ಮಾದಪ್ಪನಿಗೆ ಜಿಲ್ಲೆ, ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳಲ್ಲಿಯೂ ಭಕ್ತರಿದ್ದು, ಕಷ್ಟಗಳು ಬಂದಾಗ ಹರಕೆ ಹೊತ್ತುಕೊಂಡು ಬರುವ ಭಕ್ತರು ಅದು ಈಡೇರಿದ ಹಿನ್ನೆಲೆ ಹರಕೆಯನ್ನು ಕಾಣಿಕೆಯಾಗಿ, ಚಿನ್ನ, ಬೆಳ್ಳಿಯ ರೂಪದಲ್ಲಿ ಅರ್ಪಿಸುತ್ತಾರೆ. ಅಷ್ಟೇ ಅಲ್ಲದೆ ಮಾದಪ್ಪನ ಸನ್ನಿಧಿಯಲ್ಲಿ ಹಲವು ಸೇವೆಗಳನ್ನು ಮಾಡಿ ಪುನೀತರಾಗುತ್ತಾರೆ. ಪ್ರತಿತಿಂಗಳು ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಭಕ್ತಸಾಗರವೇ ಸನ್ನಿಧಿಗೆ ಹರಿದು ಬರುತ್ತದೆ.

ಇನ್ನು ಹಬ್ಬಹರಿದಿನಗಳಲ್ಲಿಯೂ ಭಕ್ತರು ಆಗಮಿಸಿ ಮಾದಪ್ಪನ ದರ್ಶನ ಮಾಡಿ, ಸೇವೆಗಳನ್ನು ನೆರವೇರಿಸಿ ಹರಕೆ ಕಟ್ಟಿಕೊಂಡು ಹೋಗುತ್ತಾರೆ. ಇನ್ನು ಕೆಲವರು ಹರಕೆ ನೆರವೇರಿದ ಹಿನ್ನಲೆಯಲ್ಲಿ ಮಾದಪ್ಪನ ಸನ್ನಿಧಾನಕ್ಕೆ ಬಂದು ಅದನ್ನು ತೀರಿಸಿ ಹಿಂತಿರುಗುತ್ತಾರೆ. ಹೀಗಾಗಿ ವಿಶೇಷ ದಿನಗಳಲ್ಲದೆ, ಪ್ರತಿದಿನವೂ ಇಲ್ಲಿಗೆ ಭಕ್ತರು ಆಗಮಿಸುವುದು ನಡೆಯುತ್ತಲೇ ಬರುತ್ತಿದೆ. ಅಷ್ಟೇ ಅಲ್ಲದೆ, ಭಕ್ತರು ಭಕ್ತಿ ಭಾವದಿಂದ ಕಾಣಿಕೆಯಾಗಿ ಹರಕೆ ಸಲ್ಲಿಸಿ ಧನ್ಯತಾಭಾವ ಮೆರೆಯುತ್ತಿದ್ದಾರೆ.
ಇದು ವರ್ಷದ ಮೊದಲ ಕಾಣಿಕೆ ಎಣಿಕೆ: ಕಳೆದ ಕೆಲವು ವರ್ಷಗಳಿಂದೀಚೆಗೆ ಮಾದಪ್ಪನ ಹುಂಡಿಯಲ್ಲಿ ಕೋಟಿಗಿಂತ ಕಡಿಮೆ ಕಾಣಿಕೆ ಸಂಗ್ರಹವಾದ ನಿದರ್ಶನಗಳಿಲ್ಲ. ಹೀಗಾಗಿ ಮಲೆಮಹದೇಶ್ವರನನ್ನು ಅರ್ಥಾತ್ ಮಾದಪ್ಪನನ್ನು ಕೋಟಿ ಒಡೆಯನೆಂದೇ ಕರೆಯಲಾಗುತ್ತಿದೆ. ಇಲ್ಲಿಗೆ ವರ್ಷಪೂರ್ತಿ ಜನ ಭೇಟಿ ನೀಡುತ್ತಿದ್ದು, ಈ ಪೈಕಿ ಭಕ್ತರಾಗಿ, ಪ್ರವಾಸಿಗರಾಗಿಯೂ ಬರುವವರಿದ್ದಾರೆ.
ಪ್ರತಿ ಬಾರಿಯೂ ತಿಂಗಳೊಳಗೆ ಇಲ್ಲಿನ ಕಾಣಿಕೆ ಸಂಗ್ರಹದ ಎಣಿಕೆ ಕಾರ್ಯ ನಡೆಯುತ್ತಾ ಬರುತ್ತಿದೆ. ಅದರಂತೆ ಹೊಸ ವರ್ಷದಲ್ಲಿ ಮೊದಲ ಎಣಿಕೆ ನಡೆದಿದ್ದು, ಮೂವತ್ತು ದಿನಗಳ ಅವಧಿಯಲ್ಲಿ ಸುಮಾರು 2.29 ಕೋಟಿ ರೂಪಾಯಿ ಸಂಗ್ರಹವಾಗಿರುವುದು ವಿಶೇಷವಾಗಿದೆ.
ಕಾಣಿಕೆ ಹಣದ ಎಣಿಕೆಯನ್ನು ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ಮಠದ ಅಧ್ಯಕ್ಷ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿರವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆದು ಬಳಿಕ ಸಿಸಿ ಕ್ಯಾಮೆರಾ ಕಣ್ಣಾವಲಿನಲ್ಲಿ ಎಣಿಕೆ ಕಾರ್ಯವನ್ನು ನಡೆಸಲಾಗಿದೆ. ಈ ಕಾರ್ಯ ಗುರುವಾರ ಬೆಳಿಗ್ಗೆಯಿಂದ ಆರಂಭವಾಗಿ ರಾತ್ರಿ ಎಂಟು ಗಂಟೆವರೆಗೂ ನಡೆದಿದೆ.
ಎಣಿಕೆ ಕಾರ್ಯದ ವೇಳೆ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಲೆಕ್ಕಅಧೀಕ್ಷಕ ಗುರು ಮಲ್ಲಯ್ಯ, ಚಾಮರಾಜನಗರ ಜಿಲ್ಲಾಡಳಿತ ಕಚೇರಿಯ ಶಶಿಕುಮಾರ್, ಬ್ಯಾಂಕ್ ಆಫ್ ಬರೋಡ ನೌಕರರು ಹಾಗೂ ಪ್ರಾಧಿಕಾರದ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಕ್ಷೇತ್ರಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಬಂದಿದ್ದ ಭಕ್ತರು: ಎಣಿಕೆಯ ವೇಳೆ ಹರಕೆ ರೂಪದಲ್ಲಿ ಭಕ್ತರು 2,29,67,216 ರೂಪಾಯಿ ನಗದು 18 ಗ್ರಾಂ ಚಿನ್ನ ಹಾಗೂ 1,200 ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿರುವುದು ಕಂಡು ಬಂದಿದೆ. ಇಷ್ಟೇ ಅಲ್ಲದೆ, ಇ ಹುಂಡಿಯಿಂದ 4,21,505 ರೂಪಾಯಿ ಸಂಗ್ರಹವಾಗಿದೆ. ಕಾಣಿಕೆ ಡಬ್ಬದಲ್ಲಿ ದೇಶಿ ಮಾತ್ರವಲ್ಲದ ವಿದೇಶಿ 19 ನೋಟುಗಳು ದೊರೆತಿದ್ದು, ಯಾರೋ ಭಕ್ತರು ಮನೆಯಲ್ಲಿದ್ದ ಚಲಾವಣೆಯಲ್ಲಿ ಇಲ್ಲದ 2,000 ಮುಖಬೆಲೆಯ 17 ನೋಟುಗಳು ಹುಂಡಿಯಲ್ಲಿ ಹಾಕಿರುವುದು ಗಮನಾರ್ಹವಾಗಿದೆ.
ಹೊಸವರ್ಷ ಸೇರಿದಂತೆ ಅಮಾವಾಸ್ಯೆ, ಸರ್ಕಾರಿ ರಜಾ ದಿನ, ಶಬರಿಮಲೆ, ಓಂ ಶಕ್ತಿ ಯಾತ್ರಾರ್ಥಿಗಳು ಸೇರಿದಂತೆ ಭಕ್ತರು ಅತ್ಯಧಿಕ ಸಂಖ್ಯೆಯಲ್ಲಿ ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಕಾಣಿಕೆ ಹಾಕಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications